ಕನ್ನಡಪ್ರಭ ವಾರ್ತೆ, ಶಿಕಾರಿಪುರ ಯಡಿಯೂರಪ್ಪ ಅವರನ್ನು 9 ಬಾರಿ ಶಾಸಕರಾಗಿಸಿದ ಕ್ಷೇತ್ರದ ಜನತೆಯ ಋಣ ತೀರಿಸಲು ತಾಲೂಕು ಸಮಗ್ರ ಅಭಿವೃದ್ಧಿ ಮಾಡಲಾಗಿದೆ ಎಂದು ಕ್ಷೇತ್ರದ ಶಾಸಕ ಬಿ.ವೈ ವಿಜಯೇಂದ್ರ ಹೇಳಿದರು. ಮಂಗಳವಾರ ತಾಲೂಕು ಆಡಳಿತ, ಬೇಗೂರು ಗ್ರಾಮ ಪಂಚಾಯಿತಿ, ವಿವಿಧ ದೇವಸ್ಥಾನ ಉಸ್ತುವಾರಿ ಸಮಿತಿ ವತಿಯಿಂದ ತಾಲೂಕಿನ ಬೇಗೂರು ಮರಡಿ ತಾಂಡಾದ ಶ್ರೀ ಗಾಳಿ ಆಂಜನೇಯ ದೇವಸ್ಥಾನ ಮುಂಭಾಗದಲ್ಲಿನ ಬನ್ನಿ ಮಂಟಪದಲ್ಲಿ ದಸರಾ ಮಹೋತ್ಸವ ಅಂಗವಾಗಿ ನಡೆದ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಬರಗಾಲದಲ್ಲಿ ರೈತರಿಗೆ ನೀರಿನ ಸಮಸ್ಯೆ ತಲೆದೋರದಂತೆ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಕನಸು ನನಸಾಗಿದೆ. ಈಗಾಗಲೇ 150ಕ್ಕೂ ಹೆಚ್ಚು ಕೆರೆಗಳಿಗೆ ನೀರು ಹರಿಸಲಾಗಿದ್ದು, 40ರಿಂದ 45 ಕೆರೆಗಳಿಗೆ ಶೇ.50 ನೀರು ಹರಿಸಲಾಗಿದೆ. ವಿದ್ಯುತ್ ಅಭಾವದಿಂದಾಗಿ ಉಳಿದ ಕೆರೆಗಳಿಗೆ ನೀರು ತುಂಬಿಸಲು ಸಾಧ್ಯವಾಗಿಲ್ಲ. ಶೀಘ್ರದಲ್ಲಿಯೇ ಎಲ್ಲ ಕೆರೆಗಳಿಗೆ ನೀರು ತುಂಬಿಸಲಾಗುವುದು. ಜಗನ್ಮಾತೆ ಚಾಮುಂಡೇಶ್ವರಿ ಕೃಪೆಯಿಂದ ರೈತರು ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಾಣವಾಗಲಿ ಎಂದು ಪ್ರಾರ್ಥಿಸಿದರು. ದೇಶಾದ್ಯಂತ ವಿಜೃಂಭಣೆಯಿಂದ ದಸರಾ ಹಬ್ಬವನ್ನು ಆಚರಿಸಲಾಗಿದೆ. ಅಸತ್ಯದ ವಿರುದ್ಧ ಸತ್ಯದ ವಿಜಯ, ಅಧರ್ಮದ ವಿರುದ್ಧ ಧರ್ಮದ ಜಯ ದಸರಾ ಹಬ್ಬದ ವಿಶೇಷತೆಯಾಗಿದೆ. ಸತತ 10 ದಿನಗಳ ಕಾಲ ನಡೆದ ಯುದ್ಧದಲ್ಲಿ ಮಹಿಷಾಸುರನನ್ನು ಜಗನ್ಮಾತೆ ದುರ್ಗಾದೇವಿ ಸಂಹರಿಸಿದ್ದು, ಇದರೊಂದಿಗೆ ಶ್ರೀರಾಮ ಯುದ್ಧದಲ್ಲಿ ರಾವಣನನ್ನು ಸಂಹರಿಸಿ, ಸೀತೆಯನ್ನು ಕಾಪಾಡಿದ್ದು, ದಸರಾ ಮಹೋತ್ಸವ ಆಚರಣೆ ಸಾಕ್ಷಿ, ಸಂಕೇತವಾಗಿದೆ ಎಂದರು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ₹2.25 ಕೋಟಿ ವೆಚ್ಚದಲ್ಲಿ ಬನ್ನಿ ಮಂಟಪ ನಿರ್ಮಿಸಿ, ಪ್ರತಿವರ್ಷ ಭಕ್ತಿ- ಶ್ರದ್ಧೆಯಿಂದ ತಾಲೂಕಿನ ಲಕ್ಷಾಂತರ ಜನತೆ ಆಗಮಿಸಿ ಕಣ್ತುಂಬಿಕೊಳ್ಳಲು ಎಲ್ಲ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್ ಮಾತನಾಡಿ, ವಿಜಯದಶಮಿ ವಿಜಯದ ಸಂಕೇತವಾಗಿದೆ. ಸರ್ಕಾರದ ಆದೇಶದ ಮೇರೆಗೆ ವಿಜಯದಶಮಿಯಂದ ಕಂದಾಯ ಇಲಾಖೆಯಿಂದ ಜಮಾಬಂಧಿ ಕಾರ್ಯಕ್ರಮ ನಡೆಯಲಿದೆ. ಆದಾಯ ಸಂಗ್ರಹಣೆ, ಅಭಿವೃದ್ಧಿ ಪರಿಶೀಲನೆ ಮೂಲಕ ಇಲಾಖೆ ಪ್ರಗತಿ ಕಾರ್ಯ ನಡೆಸಲಾಗಿದೆ ಎಂದು ತಿಳಿಸಿದರು. ಗೋಕಾಕ್ ಆದಿಗುರು ಶಂಕರಾಚಾರಿ ಮಠದ ಶ್ರೀ ದಯಾನಂದ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವದಿಸಿದರು. ಮುಖಂಡ ನಾಗರಾಜಗೌಡ, ಗುರುಮೂರ್ತಿ, ಬಿ.ವಿ. ಮಂಜುನಾಥ್, ಎಚ್.ಟಿ. ಬಳಿಗಾರ್, ಗ್ರಾಪಂ ಉಪಾಧ್ಯಕ್ಷ ಅರುಣಕುಮಾರ್, ಸದಸ್ಯೆ ನೇತ್ರಾವತಿ, ಗಂಗಾಧರ, ಕುಮಾರ ನಾಯ್ಕ, ರೂಪ, ಲಕ್ಷ್ಮಣ ರಾವ್ ಸಹಿತ ಸಹಸ್ರಾರು ಭಕ್ತರು ಶ್ರದ್ಧೆ-ಭಕ್ತಿಯಿಂದ ಆಗಮಿಸಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. - - - ಬಾಕ್ಸ್ ಬೇಗೂರು ಬನ್ನಿ ಮಂಟಪದಲ್ಲಿ ತಹಸೀಲ್ದಾರ್ ಅಂಬುಛೇದನ ಬೇಗೂರು ಮರಡಿ ತಾಂಡಾದ ಬಳಿಯ ಬನ್ನಿ ಮಂಟಪದಲ್ಲಿ ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್ ಅಂಬುಛ್ಛೇದಗೊಳಿಸಿ ಸಾಂಪ್ರದಾಯಿಕ ದಸರಾ ಮಹೋತ್ಸವ ಸಂಪನ್ನಗೊಳಿಸಿದರು. ಕ್ಷೇತ್ರ ಶಾಸಕ ಬಿ.ವೈ.ರಾಘವೇಂದ್ರ ಉತ್ಸವಕ್ಕೆ ಚಾಲನೆ ನೀಡಿದರು. ಬನ್ನಿಮಂಟಪಕ್ಕೆ ವಿವಿಧ ವಾದ್ಯಗೋಷ್ಠಿಯೊಂದಿಗೆ ಅಲಂಕೃತ ಪಲ್ಲಕ್ಕಿಯಲ್ಲಿ ಆಗಮಿಸಿದ ಪಟ್ಟಣದ ಶ್ರೀ ಹುಚ್ಚುರಾಯಸ್ವಾಮಿ, ಶ್ರೀ ಸಿರ್ಸಿ ಮಾರಮ್ಮ, ಗಿಡ್ಡಯ್ಯಸ್ವಾಮಿ, ಹುಲಿಕಟ್ಟೆಪ್ಪಸ್ವಾಮಿ, ಬೇಗೂರಿನ ಆಂಜನೇಯಸ್ವಾಮಿ, ಆಪಿನಕಟ್ಟೆಯ ಕೊನೆ ಬಸವೇಶ್ವರ, ಬೆಂಡೆಕಟ್ಟೆಯ ಬಸವೇಶ್ವರಸ್ವಾಮಿ, ಬಾಳೇಕೊಪ್ಪದ ಹನುಮಂತ ದೇವರಿಗೆ ಮಹಾಮಂಗಳಾರತಿ ನೆರವೇರಿತು. ಅನಂತರದಲ್ಲಿ ತಹಸೀಲ್ದಾರ್ ಮಲ್ಲೇಶಪ್ಪ ಪೂಜಾರ್ ಅಂಬುಛ್ಛೇದಗೊಳಿಸಿ 9 ದಿನಗಳ ಸಾಂಪ್ರಾದಾಯಿಕ ದಸರಾ ಮಹೋತ್ಸವ ಸಂಪನ್ನಗೊಳಿಸಿದರು. ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷೆ ಲಲಿತಾಬಾಯಿ ವಹಿಸಿದ್ದರು. - - - -24ಕೆಎಸ್.ಕೆಪಿ1: ಬನ್ನಿ ಮಂಟಪದಲ್ಲಿ ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್ ಅಂಬುಛ್ಛೇದಗೊಳಿಸಿದರು.