15 ಸಾವಿರ ಸರ್ಕಾರಿ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ

KannadaprabhaNewsNetwork | Published : Sep 18, 2024 1:49 AM

ಸಾರಾಂಶ

ಕಲ್ಯಾಣ ಕರ್ನಾಟಕ ಅನುದಾನದಡಿ ಜಿಲ್ಲೆಗೆ ₹500 ಕೋಟಿ ಅನುದಾನ । ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಸಚಿವ ಖಂಡ್ರೆ ಭರವಸೆ

ಕನ್ನಡಪ್ರಭ ವಾರ್ತೆ ಬೀದರ್‌

ಮುಂಬರುವ ದಿನಗಳಲ್ಲಿ ಈ ಭಾಗದಲ್ಲಿ ಸುಮಾರು 10 ರಿಂದ 15 ಸಾವಿರ ಸರ್ಕಾರಿ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ನುಡಿದರು.

ಮಂಗಳವಾರ ನಗರದ ಜಿಲ್ಲಾ ನೆಹರು ಕ್ರೀಡಾಂಗಣದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಅನುದಾನದಡಿಯಲ್ಲಿ ಜಿಲ್ಲೆಗೆ ₹500 ಕೋಟಿ ಅನುದಾನ ಬಂದಿದೆ. ಇದರ ಬಳಕೆಗಾಗಿ ಕ್ರೀಯಾ ಯೋಜನೆ ತಯಾರಿಸಿ ಶೀಘ್ರವೇ ಕಾಮಗಾರಿ ಆರಂಭಿಸುತ್ತೇವೆ ಎಂದು ಭರವಸೆ ನೀಡಿದರು.

ರಾಜ್ಯದಲ್ಲಿ ನಾವು ಅಧಿಕಾರಕ್ಕೆ ಬಂದು 15-16 ತಿಂಗಳಲ್ಲಿ ನಾವು ಮಾಡಿದ ಸಾಧನೆ ಎಲ್ಲರ ಕಣ್ಣೆದುರಿಗೆ ಇದೆ. ಕಲ್ಯಾಣ ಕರ್ನಾಟಕದ ವಿಮೋಚನೆಗಾಗಿ ನಮ್ಮ ಭಾಗದ ಅನೇಕರ ತ್ಯಾಗ ಬಲಿದಾನಗಳಿವೆ. ಈ ಭಾಗದ ಜನರ ಹೋರಾಟದ ಫಲವಾಗಿ 13 ತಿಂಗಳು ತಡವಾಗಿ ನಮಗೆ ಸ್ವಾತಂತ್ರ‍್ಯ ಸಿಕ್ಕಿತು ಎಂದು ಸಚಿವ ಖಂಡ್ರೆ ಹೇಳಿದರು.

ಅಂದಿನ ಬ್ರಿಟೀಷರ ಒಡೆದಾಳುವ ನೀತಿಯಿಂದ ಭಾರತದ 565 ಸಂಸ್ಥಾನಗಳು ತಮಗೆ ಇಷ್ಟವಾದ ಕಡೆ ಸೇರಬಹುದು ಎಂದು ಹೇಳಿ ನಮ್ಮ ದೇಶಕ್ಕೆ ಸ್ವಾತಂತ್ರ‍್ಯ ನೀಡಿದಾಗ ಹೈದರಾಬಾದಿನ ನಿಜಾಮರು ಪಾಕಿಸ್ತಾನಕ್ಕೆ ಸೇರುವುದಾಗಿ ಹೇಳಿದರು. ನಿಜಾಮರ ರಜಾಕಾರರ ಪಡೆ ಈ ಭಾಗದ ಹಳ್ಳಿ-ಹಳ್ಳಿಗಳಿಗೆ ಹೋಗಿ ಜನರ ಮೇಲೆ ನಿರಂತರ ದೌರ್ಜನ್ಯ, ಮನೆಗಳ ಲೂಟಿ ಮಾಡಿದರು. ಇಲ್ಲಿ ಗೋರ್ಟಾ ಹತ್ಯಾಕಾಂಡದಂತಹ ಅನೇಕ ಘಟನೆಗಳು ಜರುಗಿವೆ. ರಮಾನಂದ ತೀರ್ಥರ ನೇತೃತ್ವದಲ್ಲಿ ನಮ್ಮ ಭಾಗದ ಅನೇಕರು ಕಲ್ಯಾಣ ಕರ್ನಾಟಕದ ವಿಮೋಚನೆಗಾಗಿ ಹೋರಾಡಿದ್ದಾರೆ. ಅವರನ್ನು ಇಂದು ನಾವು ಸ್ಮರಿಸಬೇಕಿದೆ ಎಂದರು.

ಮೈಸೂರು ಭಾಗಕ್ಕೆ ಹೋಲಿಸಿದರೆ ನಮ್ಮ ಭಾಗ ಹಿಂದುಳಿದ ಭಾಗವಾಗಿತ್ತು. ಇದಕ್ಕಾಗಿ ಅನೇಕರು ಹೋರಾಟ ಮಾಡಿದ್ದಾರೆ. ಇದರಲ್ಲಿ ವೈಜನಾಥ ಪಾಟೀಲ್‌, ಭೀಮಣ್ಣ ಖಂಡ್ರೆ ಸೇರಿದಂತೆ ಅನೇಕರ ಹೋರಾಟದ ಫಲವಾಗಿ 371(ಜೆ) ವಿಶೇಷ ಸ್ಥಾನ ಮಾನ 2013ರಲ್ಲಿ ದೊರಕಿತು ಇದು ವಿಶೇಷ ಚರಿತ್ರೆಯ ದಿನವಾಗಿದೆ ಎಂದು ಹೇಳಿದರು.

ನಿಸರ್ಗ ದುರುಪಯೋಗ, ಪ್ರಕೃತಿ ಪರಿಸರ ಇದ್ದರೆ ನಾವಿದ್ದೇವೆ

ನೈಸರ್ಗಿಕ ಪರಿಸರ ದುರುಪಯೋಗ ಆಗುತ್ತಿದ್ದು, ಶಿರೂರ ವಯನಾಡಿನಲ್ಲಿ ಗುಡ್ಡ ಕುಸಿತವಾಗಿದ್ದನ್ನು ಕಾಣುತ್ತಿದ್ದೆವೆ. 55 ಡಿಗ್ರಿ ತಾಪಮಾನ ಹೆಚ್ಚಾದರೆ ಯಾರೂ ಉಳಿಯುವದಿಲ್ಲ. ಇದಕ್ಕೆ ಒಂದೇ ಪರಿಹಾರ ಗಿಡ ಮರಗಳನ್ನು ಬೆಳೆಸಬೇಕು. ಬೀದರ್‌ನಲ್ಲಿ ಕಳೆದ ವರ್ಷ 15 ಲಕ್ಷ ಸಸಿಗಳನ್ನು ನೆಡಲಾಗಿತ್ತು. ಪ್ರಸಕ್ತ ವರ್ಷದಲ್ಲಿ 18 ಲಕ್ಷ ಸಸಿಗಳನ್ನು ನೆಟ್ಟಿದ್ದೇವೆ. 2025-26ನೇ ಸಾಲಿಗೆ ಜಿಲ್ಲೆಯಲ್ಲಿ 25 ಲಕ್ಷ ಸಸಿಗಳನ್ನು ನೆಡಲಾಗುವುದು. ಮಕ್ಕಳು ಮುಂದಿನ ಪ್ರಜೆಗಳು, ಮನೆಗೊಂದು ಸಸಿಗಳನ್ನು ನೀಡಬೇಕೆಂದು ಹೇಳಿದರು.

ಹೊನ್ನಿಕೇರಿಯಲ್ಲಿ ₹15 ಕೋಟಿ ವೆಚ್ಚದಲ್ಲಿ ಇಕೋ ಟೂರಿಸಂ ಮಾಡಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲಾಗುವುದು. ದೇವ ವನ ಅಭಿವೃದ್ಧಿ ಮಾಡಲು ವಿಸ್ತೃತ ಯೋಜನಾ ವರದಿ ತಯಾರಿಸಿ ಬರುವ ಮಾರ್ಚ ಒಳಗಡೆ ಅನುಷ್ಠಾನ ಮಾಡಲಾಗುವುದು. ರಾಜ್ಯದಲ್ಲಿ ಕಡಿಮೆ ಅರಣ್ಯ ಪ್ರದೇಶ ಇರುವ ಬೀದರ್‌, ಕಲಬುರಗಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಯ ಹಸಿರೀಕರಣ ಮಾಡಲು ಹೆಚ್ಚಿನ ಅನುದಾನ ನೀಡಲಾಗುವುದು ಎಂದು ತಿಳಿಸಿದರು.

ಬೆಳಗ್ಗೆ ಸರ್ದಾರ ವಲ್ಲಭ ಭಾಯಿ ಪಟೇಲರ ಭಾವಚಿತ್ರದ ಮೆರವಣಿಗೆಯು ಬಸವೇಶ್ವರ ವೃತ್ತದಿಂದ ಜಿಲ್ಲಾ ನೆಹರು ಕ್ರೀಡಾಂಗಣದವರೆಗೆ ನಡೆಯಿತು.

ಇದೇ ವೇಳೆ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ಮಕ್ಕಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಸನ್ಮಾನಿಸಿದರು. ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜಿಲ್ಲಾ ನೆಹರು ಕ್ರೀಡಾಂಗಣದಲ್ಲಿ ಜರುಗಿದವು.

ಸಂಸದರಾದ ಸಾಗರ ಖಂಡ್ರೆ, ಬೀದರ್‌ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ನಗರಸಭೆ ಅಧ್ಯಕ್ಷ ಮೊಹ್ಮದ ಗೌಸ್‌, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿ.ಪಂ ಸಿಇಒ ಡಾ. ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ. ಎಂ, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಹಲವಾರು ಜನರು ಉಪಸ್ಥಿತರಿದ್ದರು.

Share this article