ಸಾವಿರ ಗ್ರಾಮ ಲೆಕ್ಕಿಗರು, 750 ಸರ್ವೇಯರ್‌ ಭರ್ತಿಗೆ ಕ್ರಮ

KannadaprabhaNewsNetwork | Published : Jun 25, 2024 12:30 AM

ಸಾರಾಂಶ

ಆಧಾರ್ ಸೀಡಿಂಗ್‌ಗೆ ಜುಲೈ ಡೆಡ್‌ಲೈನ್‌. ಈಗಾಗಲೆ ರಾಜ್ಯದಲ್ಲಿ 1.70 ಕೋಟಿ ಸೀಡಿಂಗ್‌ ಪೂರ್ಣವಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು. ಜಿಲ್ಲಾಡಳಿತದ ಕಚೇರಿಯಲ್ಲಿ ನಡೆಸಿದ ವಿಭಾಗೀಯ ಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ರಾಜ್ಯದಲ್ಲಿ 1,000 ಗ್ರಾಮ ಆಡಳಿತಾಧಿಕಾರಿಗಳು (ಗ್ರಾಮ ಲೆಕ್ಕಿಗರು) ಹಾಗೂ 750 ಭೂ ಮಾಪಕರು (ಸರ್ವೇಯರ್) ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಕಲಬುರಗಿ ಪ್ರವಾಸದಲ್ಲಿದ್ದ ಅವರು ಜಿಲ್ಲಾಡಳಿತದ ಕಚೇರಿಯಲ್ಲಿ ಸೋಮವಾರ ನಡೆಸಿದ ವಿಭಾಗೀಯ ಮಟ್ಟದ ಸಭೆಯಲ್ಲಿ ಮಾತನಾಡುತ್ತಾ, ಈಗಾಗಲೇ ಭರ್ತಿ ಪ್ರಕ್ರಿಯೆ ನಡೆದಿದೆ. ಇದರ ಜೊತೆಗೆ 34 ಎಡಿಎಲ್‌ಆರ್ ನೇಮಕಾತಿ ಸಹ ನಡೆಯಲಿದೆ. ಇದರಿಂದ ಸರ್ವೇಯರ್ ಇಲಾಖೆಗೆ ಬಲ ಬರಲಿದೆ. ಇವನ್ನೆಲ್ಲ ಬಳಸಿಕೊಂಡು ಪ್ರಸ್ತುತ ಇರುವ 22 ಲಕ್ಷ ಮಲ್ಟಿ ಹೋಲ್ಡರ್ ಆರ್‌ಟಿಸಿಗಳನ್ನು ಅವರವರಿಗೆ ಪ್ರತ್ಯೇಕವಾಗಿ ಪೋಡಿ ಮಾಡಿ ಆರ್‌ಟಿಸಿ ಮಾಡಿಸಿ ಕೊಡಬೇಕಾಗಿದೆ. ಇದಕ್ಕಾಗಿ ರೋಡ್ ಮ್ಯಾಪ್ ಸಿದ್ಧಗೊಳಿಸಲಾಗುತ್ತಿದೆ ಎಂದರು.

ಆಧಾರ್ ಸೀಡಿಂಗ್ ಜುಲೈ ಮಾಸಾಂತ್ಯಕ್ಕೆ ಡೆಡ್‌ಲೈನ್:

ರಾಜ್ಯದಲ್ಲಿ 4 ಕೋಟಿ ಪಹಣಿಗಳಲ್ಲಿ ಈಗಾಗಲೆ 1.70 ಕೋಟಿ ಪಹಣಿಗೆ ಆಧಾರ್ ಸೀಡಿಂಗ್ ಆಗಿದೆ. ಉಳಿದಿರುವುದನ್ನು ಅಭಿಯಾನದ‌ ಮೂಲಕ ಜುಲೈ ಮಾಸಾಂತ್ಯಕ್ಕೆ ಪೂರ್ಣಗೊಳಿಸಬೇಕು. ಇದರಿಂದ ಮೋಸ- ವಂಚನೆ ತಪ್ಪಲಿದೆ ಜೊತೆಗೆ ಪರಿಹಾರ, ವರ್ಗಾವಣೆ, ಮುಟೇಷನ್ ಪ್ರಕ್ರಿಯೆ ಸರಳವಾಗಲಿದೆ. ಜನರಿಗೆ ಸರ್ಕಾರಿ ಸೇವೆ ಬೇಗ ಲಭ್ಯವಾಗಲಿದೆ ಎಂದರು.

ಆಧಾರ್ ಸೀಡಿಂಗ್ ಪ್ರಕ್ರಿಯೆ ಉತ್ತಮ‌ ಪ್ರಗತಿ ಸಾಧಿಸಿದಕ್ಕೆ ಸಂತಸ‌ ವ್ಯಕ್ತಪಡಿಸಿದ ಸಚಿವರು, ಉತ್ತಮವಾಗಿ ಕಾರ್ಯನಿರ್ವಹಿಸಿದ ಗ್ರಾಮ ಲೆಕ್ಕಿಗರನ್ನು ಹುರಿದುಂಬಿಸಲು ಮೊದಲನೇ ಹಂತದಲ್ಲಿ ಇವರಿಗೆ ಲ್ಯಾಪ್‌ಟಾಪ್ ವಿತರಣೆ ಮಾಡಬೇಕು ಎಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ ಕಠಾರಿಯಾ ಅವರಿಗೆ ನಿರ್ದೇಶನ ನೀಡಿದರು.

ಸರ್ಕಾರಿ ಆಸ್ತಿ ರಕ್ಷಣೆಗೆ ಲ್ಯಾಂಡ್ ಬೀಟ್:

ಸರ್ಕಾರಿ ಆಸ್ತಿ ಸಂರಕ್ಷಣೆಗೆ ಸರ್ಕಾರ ಮುಂದಾಗಿದ್ದು, ಈಗಾಗಲೆ 14.50 ಲಕ್ಷ ಸರ್ಕಾರಿ ಆಸ್ತಿ (ಕಂದಾಯ, ಸ್ಮಶಾನ, ಕೆರೆ ಆಸ್ತಿ) ಗುರುತಿಸಿದ್ದು, ಈ ಅಸ್ತಿ ಎಲ್ಲಿ, ಎಷ್ಟು ಅಳತೆಯಲ್ಲಿದೆ ಎಂಬ ನಿಖರ ಮಾಹಿತಿ ಇದೀಗ ನಮ್ಮ ಬೆರಳು ತುದಿಯಲ್ಲಿ ಲಭ್ಯವಿದೆ. ಸುಮಾರು 10 ಲಕ್ಷ ಆಸ್ತಿ ಸ್ಥಳಕ್ಕೆ ವಿಎಗಳು ಭೇಟಿ ನೀಡಿ ಬೌಂಡರಿ ಫೆನ್ಸಿಂಗ್ ಮಾಡಿದ್ದಾರೆ. ಉಳಿದ ಕಾರ್ಯ ಪ್ರಗತಿಯಲ್ಲಿದೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ರೈತರ ಸಾಗುವಳಿ ಹೊರತುಪಡಿಸಿ ಸ್ಮಶಾನ,‌ ಕೆರೆ ಒತ್ತುವರಿಯಾದಲ್ಲಿ ಅದನ್ನು ತಹಸೀಲ್ದಾರರು ಕೂಡಲೆ ತೆರವುಗೊಳಿಸಬೇಕು. ಮುಂದುವರಿದು ಆಸ್ತಿ ಸಂರಕ್ಷಣೆ‌ ನಿಟ್ಟಿನಲ್ಲಿ ಪ್ರತಿ 3-4 ತಿಂಗಳಿಗೊಮ್ಮೆ ಗ್ರಾಮ ಅಡಳಿತಾಧಿಕಾರಿಗಳು ಈ ಆಸ್ತಿ ಸ್ಥಳಕ್ಕೆ‌ ಭೇಟಿ ನೀಡಿ ತಪಾಸಿಸುವ ಲ್ಯಾಂಡ್ ಬೀಟ್ ಕಾರ್ಯಕ್ರಮ ಜಾರಿಗೆ ತರಲಾಗುತ್ತಿದೆ ಎಂದರು.

ಮಳೆಗಾಲ ಹಿನ್ನೆಲೆ ಕಲುಷಿತ ನೀರು ಪೂರೈಕೆ ಸಾಮಾನ್ಯ. ಆದರೆ ಇದನ್ನು‌ ಮೆಟ್ಟಿ ನಿಂತು ಪ್ರತಿ ಹಳ್ಳಿ, ಪಟ್ಟಣದ ಸಾರ್ವಜನಿಕರಿಗೆ ಶುದ್ಧೀಕರಿಸಿದ ಕುಡಿಯುವ ನೀರು ಪೂರೈಸುವುದು ನಮ್ಮ‌ ಜವಾಬ್ದಾರಿ. ಇತ್ತೀಚಿನ ಕಲುಷಿತ ನೀರು ಸೇವನೆ ಪ್ರಕರಣಗಳಿಂದ ಸಿಎಂ ತುಂಬಾ ಬೇಸರ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಈ ಬಗ್ಗೆ ಗಂಭೀರವಾಗಿರಿ. ನಿಣ್ಕಾಳಜಿ ವಹಿಸಿದರೆ ಶಿಸ್ತು ಕ್ರಮ ಅನಿವಾರ್ಯ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಸರ್ಕಾರದ ಪ್ರಧಾನ ಕಾರ್ಯದರ್ಶಿ (ವಿಪತ್ತು ನಿರ್ವಹಣೆ) ವಿ. ರಶ್ಮಿ ಮಹೇಶ್, ಕಂದಾಯ ಇಲಾಖೆಯ ಆಯುಕ್ತ ಪಿ. ಸುನೀಲಕುಮಾರ, ನೋಂದಣಿ ಮಹಾ ಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತೆ ಡಾ.ಬಿ.ಆರ್.ಮಮತಾ, ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ, ಎಸ್.ಎಸ್.ವೈ. ನಿರ್ದೇಶಕ ರಂಗಪ್ಪಾ, ಕರ್ನಾಟಕ ಪಬ್ಲಿಕ್ ಲ್ಯಾಂಡ್ ಕಾರ್ಪೋರೇಷನ್ ಎಂ.ಡಿ ವಸಂತಕುಮಾರ, ಅಪರ ಪ್ರಾದೇಶಿಕ ಆಯುಕ್ತ ಇಲಿಯಾಸ್ ಅಹ್ಮದ್ ಇಸಾಮದಿ ಇದ್ದರು.

Share this article