ಶಿವಕುಮಾರ ಕುಷ್ಟಗಿ
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಈ ವ್ಯಾಜ್ಯಮುಕ್ತ ಗ್ರಾಮಗಳ ಪರಿಕಲ್ಪನೆಯನ್ನು ಸಾಕಾರಗೊಳಿಸಲು ವ್ಯಾಪಕ ಪ್ರಯತ್ನಗಳು ನಡೆದಿವೆ. ಜಿಲ್ಲೆಯ ನ್ಯಾಯಾಧೀಶರು, ಹಿರಿಯ ಅಧಿಕಾರಿಗಳು, ಸರ್ಕಾರಿ ಸಿಬ್ಬಂದಿ, ವಕೀಲರು ಸೇರಿದಂತೆ ಪ್ರತಿಯೊಬ್ಬರ ಆಸಕ್ತಿಯಿಂದಾಗಿ ಈ ಪರಿಕಲ್ಪನೆ ಸಾಕಾರದ ಹಾದಿಯಲ್ಲಿದೆ.
ಏನಿದು ವ್ಯಾಜ್ಯಮುಕ್ತ ಗ್ರಾಮ?ಯಾವುದೇ ವ್ಯಾಜ್ಯಗಳಿದ್ದರೂ ಅವುಗಳನ್ನು ರಾಜೀ ಸಂಧಾನದ ಮೂಲಕ ಬಗೆಹರಿಸಿ, ಆ ಗ್ರಾಮ ವ್ಯಾಪ್ತಿಯಲ್ಲಿನ ಎಲ್ಲ ಪ್ರಕರಣಗಳನ್ನು ಇತ್ಯರ್ಥಪಡಿಸಿ, ಸಂಪೂರ್ಣ ಗ್ರಾಮವನ್ನೇ ವ್ಯಾಜ್ಯ ಮುಕ್ತಗೊಳಿಸುವುದು ಈ ಯೋಜನೆಯ ಮೂಲ ಕಲ್ಪನೆ. ಆ ಮೂಲಕ ಗ್ರಾಮಗಳಲ್ಲಿ ನೆಮ್ಮದಿ ಬದುಕು ಕಟ್ಟುವುದು ಕಾನೂನು ಸಚಿವ ಎಚ್.ಕೆ. ಪಾಟೀಲ ಕನಸಾಗಿದೆ. ಇದನ್ನು ಸರ್ಕಾರವೂ ಒಪ್ಪಿ ಅನುಷ್ಠಾನಕ್ಕೆ ಯೋಜನೆ ರೂಪಿಸಿದೆ.
ವ್ಯಾಜ್ಯಮುಕ್ತ ಗ್ರಾಮಗಳನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಆಯಾ ಜಿಲ್ಲಾ ನ್ಯಾಯಾಲಯಗಳು ತಮ್ಮ ಅಧೀನ ನ್ಯಾಯಾಲಯಗಳ ವ್ಯಾಪ್ತಿಯಲ್ಲಿ ಪ್ರತಿಯೊಂದು ಗ್ರಾಮವಾರು ಪ್ರಕರಣಗಳ ಸಂಖ್ಯೆಯನ್ನು ಗುರುತಿಸುತ್ತದೆ. ಇದರೊಟ್ಟಿಗೆ ಜಿಲ್ಲಾಧಿಕಾರಿಗಳ ನ್ಯಾಯಾಲಯ, ಉಪವಿಭಾಗಾಧಿಕಾರಿಗಳ ನ್ಯಾಯಾಲಯ ಹೀಗೆ ಸಿವಿಲ್ ವ್ಯಾಜ್ಯಗಳನ್ನು ಪತ್ತೆ ಮಾಡುತ್ತಾರೆ. ಪ್ರಸ್ತುತ ಅತ್ಯಂತ ಕಡಿಮೆ ವ್ಯಾಜ್ಯಗಳನ್ನು ಹೊಂದಿರುವ (ಸದ್ಯದ ದಾಖಲೆಗಳ ಆಧಾರದಲ್ಲಿ) ಗ್ರಾಮಗಳನ್ನು ಗುರುತಿಸಿ, ಆಯಾ ಪ್ರಕರಣಗಳನ್ನು ನಿರ್ವಹಿಸುತ್ತಿರುವ ವಕೀಲರೊಂದಿಗೆ ಚರ್ಚಿಸಿ, ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಿ, ಆಯಾ ಗ್ರಾಮಗಳಲ್ಲಿನ ಎಲ್ಲ ವ್ಯಾಜ್ಯಗಳನ್ನು ನ್ಯಾಯಾಧೀಶರ ಸಮ್ಮುಖದಲ್ಲಿ ಅಂತಿಮಗೊಳಿಸುವುದು ಈ ಯೋಜನೆಯ ಕಲ್ಪನೆಯಾಗಿದೆ.
ಸೆ. 14ರಂದು ನಡೆಯಲಿರುವ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ವ್ಯಾಜ್ಯಮುಕ್ತ ಗ್ರಾಮಗಳ ಘೋಷಣೆಗಾಗಿ ಜಿಲ್ಲಾ ನ್ಯಾಯಾಲಯ ಈಗಾಗಲೇ ಸಾಕಷ್ಟು ತಯಾರಿ ಮಾಡಿಕೊಂಡಿದ್ದು, ಅದಕ್ಕೆ ವಕೀಲರು, ಗ್ರಾಮಸ್ಥರು, ಸಾರ್ವಜನಿಕರು ಮತ್ತು ವಿವಿಧ ಇಲಾಖೆಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಎಷ್ಟು ಗ್ರಾಮಗಳು ವ್ಯಾಜ್ಯಮುಕ್ತವಾಗುತ್ತವೆ ಎನ್ನುವುದು ಮಾತ್ರ ಇನ್ನು ನಿರ್ಧಾರವಾಗಿಲ್ಲ.
ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯಲ್ಲಿ ವ್ಯಾಜ್ಯಮುಕ್ತ ಗ್ರಾಮಗಳನ್ನಾಗಿ ಮಾಡಬಹುದಾದ ಸಾಧ್ಯತೆ ಇರುವ 74 ಗ್ರಾಮಗಳನ್ನು ಗುರುತಿಸಲಾಗಿದೆ. ರೋಣ ಮತ್ತು ಗಜೇಂದ್ರಗಡ ತಾಲೂಕು ವ್ಯಾಪ್ತಿಯಲ್ಲಿ 22, ಗದಗ ತಾಲೂಕಿನಲ್ಲಿ 3, ಮುಂಡರಗಿ ತಾಲೂಕಿನಲ್ಲಿ 14, ನರಗುಂದ ತಾಲೂಕಿನಲ್ಲಿ 6 ಹಾಗೂ ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ತಾಲೂಕು ವ್ಯಾಪ್ತಿಯಲ್ಲಿ 29 ಗ್ರಾಮಗಳನ್ನು ಗುರುತಿಸಲಾಗಿದೆ. ಅತಿ ಕಡಿಮೆ ವ್ಯಾಜ್ಯಗಳು ಇರುವ ಹಿನ್ನೆಲೆಯಲ್ಲಿ ಈ ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ.
ವ್ಯಾಜ್ಯಮುಕ್ತ ಗ್ರಾಮಗಳ ನಿರ್ಮಾಣ ಎನ್ನುವುದೇ ಒಂದು ಸುಂದರ ಕಲ್ಪನೆಯಾಗಿದ್ದು, ಅದನ್ನು ಸಾಕಾರಗೊಳಿಸುವಲ್ಲಿ ವ್ಯಾಪಕ ಪ್ರಯತ್ನಗಳು ನಡೆಯುತ್ತಿವೆ. ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಇದಕ್ಕೆ ಸಾರ್ವಜನಿಕರಿಂದಲೂ ಸ್ಪಂದನೆಯ ಅವಶ್ಯಕತೆ ಇರುತ್ತದೆ. ಸಮಾಜ ಸಕಾರಾತ್ಮಕವಾಗಿ ಸ್ಪಂದಿಸಿದಲ್ಲಿ ವ್ಯಾಜ್ಯಮುಕ್ತ ಗ್ರಾಮಗಳ ನಿರ್ಮಾಣ ಎನ್ನುವ ಈ ನಿರ್ಧಾರ ರಾಜ್ಯದ ಇತಿಹಾಸದಲ್ಲಿ ಮಹತ್ವದ ಹೆಜ್ಜೆಯಾಗಲಿದೆ.ಗುಣಾತ್ಮಕ ಬದಲಾವಣೆ
ಎಚ್.ಕೆ. ಪಾಟೀಲ ಕಾನೂನು, ಪ್ರವಾಸೋದ್ಯಮ ಸಚಿವ