ಕನ್ನಡಪ್ರಭ ವಾರ್ತೆ ಕಲಬುರಗಿ
ತೀವ್ರ ಸುದ್ದಿಗೆ ಗ್ರಾಸವಾಗಿದ್ದ ಹನಿಟ್ರ್ಯಾಪ್ ಪ್ರಕರಣದಲ್ಲಿ ಪ್ರಮುಖವಾಗಿ ಆರೋಪಗಳು ಕೇಳಿ ಬಂದಿದ್ದ ದಲಿತ ಸೇನೆಯ ರಾಜ್ಯಾಧ್ಯಕ್ಷ ಹಣಮಂತ ಜಿ ಯಳಸಂಗಿ ಮತ್ತವರ ಗ್ಯಾಂಗಿನ 6 ಜನರನ್ನು ಕಲಬುರಗಿ ಸೆನ್ ಪೊಲೀಸರು ಬಂಧಿಸಿದ್ದಾರೆ.ನ್ಯಾಯ, ನೊಕರಿ ಕೊಡಿಸೋದಾಗಿ ನಂಬಿಸಿ ತನ್ನನ್ನು ರೇಪ್ ಮಾಡಿ, ಲೈಂಗಿಕವಾಗಿ ಬಳಸಿಕೊಂಡು, ಹನಿಟ್ರ್ಯಾಪ್‌ಗೂ ಬಳಸಿದ್ದಾರೆಂದು ಮುಂಬೈ ಮೂಲದ ಯುವತಿ ನೀಡಿದ್ದ ದೂರನ್ನಾಧರಿಸಿ ಪ್ರಕರಣ ದಾಖಲಿಸಿ ರಾಜು ಲೇಂಗಟಿ ಹಾಗೂ ಪ್ರಭು ಹಿರೇಮಠ ಇವರನ್ನ 2 ದಿನದ ಹಿಂದಷ್ಟೆ ಪೊಲೀಸರು ವಶಕ್ಕೆ ಪಡೆದಿದ್ದರು.
ಸೋಮವಾರ ಪ್ರಕರಣದಲ್ಲಿ ಪ್ರಮುಖವಾಗಿ ಹೆಸರು ಕೇಳಿ ಬಂದಿದ್ದ ದಲಿತ ಸೇನೆಯ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ, ಅವರ ಸಹಚರರಾದ ಮಂಜುನಾಥ ಬಂಡಾರಿ, ಉದಯ ಖೇಣಿ, ಸೇರಿದಂತೆ 6 ಜನರನ್ನು ಸೆನ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಮುಂಬೈ ಮೂಲದ ಯುವತಿ ತನ್ನನ್ನು ನಂಬಿಸಿ ಮೋಸ ಮಾಡಲಾಗಿದೆ, ಸಾಮಾಜಿಕ ಜಾಲತಾಣದಲ್ಲಿ ಸಂಪರ್ಕಕ್ಕೆ ಬಂದ ಈ ಗ್ಯಾಂಗ್‌ನ ಸದಸ್ಯರಲ್ಲಿ ಒಬ್ಬನಾದ ಪ್ರಭು ಹಿರೇಮಠ, ರಾಜು ಲೇಂಗಟಿ ಇವರಬ್ಬರು ಲೈಂಗಿಕವಾಗಿ ತನ್ನನ್ನು ಬಳಸಿಕೊಂಡಿದ್ದರು. ನಂತರ ವರ್ತಕರು, ಉದ್ದಿಮೆದಾರರನ್ನು ಹುಡುಕಿ ಹನಿಟ್ರ್ಯಾಪ್‌ಗೂ ತನ್ನನ್ನು ಬಳಸಿದ್ದಾರೆಂದು ದೂರಿದ್ದಳು.
ಈಕೆಯ ದೂರನ್ನಾಧರಿಸಿ ಕಾರ್ಯಪ್ರವೃತ್ತರಾಗಿರುವ ಪೊಲೀಸರು ಈ ದಂಧೆಕೋರರ ತಂಡದ ಹಿಂದೆ ಬಿದ್ದಿದ್ದಾರೆ. ಈಗಾಗಲೇ ಲೈಂಗಿಕ ಕಿರುಕುಳ, ರೇಪ್ ಆರೋಪಗಳ ಹಿನ್ನೆಲೆಯಲ್ಲಿ ದೂರುದಾರ ಯುವತಿ ಹಾಗೂ ಆರೋಪಿಗಳ ವೈದ್ಯಕೀಯ ಪರೀಕ್ಷೆ ಮಾಡಿದ್ದಾರೆ. ಇದಲ್ಲದೆ ವೈಜ್ಞಾನಿಕವಾಗಿಯೂ ಈ ಕೇಸ್‌ನಲ್ಲಿ ವರದಿ ಕಲೆ ಹಾಕಿದ್ದಾರೆ.ಇಂದು ಕಲಬುರಗಿಗೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರು ಹನಿಟ್ರ್ಯಾಪ್ ಕಲಬುರಗಿಗೆ ಕಪ್ಪು ಚುಕ್ಕೆ ಎಂದಿದ್ದರಲ್ಲದೆ ಇದರಲ್ಲಿ ಯಾರೇ ಒಳಗೊಂಡಿದ್ದರೂ ಕೂಡಾ ಅವರ ವಿರುದ್ಧ ಕಾನೂನು ರೀತ್ಯಾ ಕ್ರಮ ಗ್ಯಾರಂಟಿ ಎಂದು ಗುಡುಗಿದ್ದರು.
ಸಚಿವ ಖರ್ಗೆ ಗುಡುಗಿನ ಬೆನ್ನಲ್ಲೇ ಕಲಬುರಗಿ ಪೊಲೀಸರು ಇದೀಗ ದಲಿತ ಸೇನೆಯ ಹಣಮಂತ ಯಳಸಂಗಿ ಮತ್ತವರ 6 ಜನ ಸಹಚರರನ್ನು ಬಂಧಿಸಿ ವಿಚಾರಣೆ ಚುರುಕುಗೊಳಿಸಿದ್ದಾರೆ.ಮಾತಲ್ಲೇ ತಮ್ಮ ವಿರೋಧಿಗಳ ಗುಂಪಿಗೆ ಟೀಕಿಸಿರುವ ಹಣಮಂತ ಯಳಸಂಗಿ ಬರೋ ದಿನಗಳಲ್ಲಿ ತಮ್ಮ ಮೇಲಿನ ಗುರುತರ ಆರೋಪಗಳನ್ನು ಮಾಡಿರುವ ಈ ಪ್ರಕರಣ ಬಿದ್ದು ಹೋಗಲಿದೆ. ತಾವು ಎಂದಿನಂತೆ ಸಮಾಜ ಸೇವೆಗೆ ಮರಳೋದಾಗಿಯೂ ಹಣಮಂತ ಯಳಸಂಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.