ಕನ್ನಡಪ್ರಭ ವಾರ್ತೆ ಐಗಳಿ
ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಜೆ.ಜೆ.ಎಂ. ಯೋಜನೆಯಲ್ಲಿ ಅನೇಕ ಗ್ರಾಮಗಳಲ್ಲಿ ಮನೆ ಮನೆಗೆ ಕುಡಿಯುವ ನೀರು ಪೂರೈಸುಲು ಕ್ರಮ ಯೋಜನೆ ಕೈಗೊಳ್ಳಲಾಗಿದೆ. ಇಂದು ಕೋಹಳ್ಳಿ ಗ್ರಾಮದಲ್ಲಿ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.ಸಮೀಪದ ಕೋಹಳ್ಳಿ ಗ್ರಾಮದ ಜೆ.ಜೆ.ಎಂ ಕಾಮಗಾರಿಗೆ ಮತ್ತು ಕೇಸ್ಕರದಡ್ಡಿಯಲ್ಲಿ ಅಂಗನವಾಡಿ ನೂತನ ಕಟ್ಟಡ ಮತ್ತು ಮಲ್ಲೆವ್ವನ ಮಡ್ಡಿಯಲ್ಲಿ 2 ಶಾಲಾ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಅಥಣಿ ಮತಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇನೆ. ಅಪ್ಪಯ್ಯ ಸ್ವಾಮಿ ದೇವಾಲಯ ಅಭಿವೃದ್ಧಿ ಹಾಗೂ ಮಲ್ಲೆವ್ವನ ಮಡ್ಡಿಯ ರೈತರಿಗೆ ಅನುಕೂಲವಾಗುವಂತೆ ಹಳ್ಳಕ್ಕೆ ಬಾಂದಾರ ನಿರ್ಮಾಣಕ್ಕೆ ಶೀಘ್ರ ಮಂಜೂರಾತಿ ಪಡೆದುಕೊಳ್ಳುವ ಭರವಸೆ ವ್ಯಕ್ತಪಡಿಸಿದರು. ತೋಟದ ವಸತಿಯ ರೈತರ ಮಕ್ಕಳು ಶಿಕ್ಷಣದಿಂದ ಯಾರೂ ವಂಚಿತರಾಗಬಾರದು. ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಕೊಡಿಸಿ ಎಂದರು.
ನೀರಾವರಿ ಇಲಾಖೆಯ ಹಿರಿಯ ಅಧಿಕಾರಿ ರವೀಂದ್ರ ಮುರಗಾಲಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಮನೆ ಮನೆಗೆ ಕುಡಿಯುವ ನೀರು ಪೂರೈಸಲು ಯೋಜನೆ ಪ್ರಾರಂಭಿಸಲಾಗಿದೆ ಎಂದು ಹೇಳಿದರು.ಸಿ.ಎಸ್. ನೇಮಗೌಡ, ಸಂಗಯ್ಯ ಪೂಜಾರಿ, ಭಾರತ ಬ್ಯಾಂಕಿನ ಅಧ್ಯಕ್ಷ ನೂರಅಹ್ಮದ ಡೊಂಗರಗಾಂವ, ಗ್ರಾಪಂ ಉಪಾಧ್ಯಕ್ಷ ಮಲಗೌಡ ಪಾಟೀಲ, ಅಶೋಕ ಕೊಡಗ, ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ತುಕಾರಾಮ ದೇವಖಾತೆ, ಶ್ರೀಮಂತ ಮುಧೋಳ, ಸದಾಶಿವ ಹರಪಾಳೆ, ಎಸ್.ಎಲ್. ಪೂಜಾರಿ, ಸಿ.ಡಿ.ಪಿ.ಒ ಅಶೋಕ ಕಾಂಬಳೆ, ಸಿ.ಆರ್.ಸಿ ಸಂಯೋಜಕ ಮಹಾಂತೇಶ ಗುಡದಿನ್ನಿ ಸೇರಿದಂತೆ ಗ್ರಾಪಂ ಸದಸ್ಯರು, ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು ಇದ್ದರು.