ಗುರುಮಠಕಲ್: ಗುರುಮಠಕಲ್ ಪಟ್ಟಣ ತಾಲೂಕು ಆಗಿ ಘೋಷಣೆಯಾಗಿರುವುದರಿಂದ ಇಲ್ಲಿ 100 ಬೆಡ್ ಆಸ್ಪತ್ರೆ ಅಗತ್ಯವಿರುವುದನ್ನು ಗಮನಿಸಿ ಸರ್ಕಾರ ಮತ್ತು ಮುಖ್ಯಮಂತ್ರಿಗಳಿಗೆ ವೈಯಕ್ತಿಕವಾಗಿ ಮನವಿ ಮಾಡಿದ್ದು, ಶೀಘ್ರದಲ್ಲಿಯೇ 100 ಬೆಡ್ ಆಸ್ಪತ್ರೆಯನ್ನು ಒದಗಿಸಲು ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಶರಣಗೌಡ ಕಂದಕೂರು ಹೇಳಿದರು.
ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗಾಗಿ ಜನ ಜಿಲ್ಲಾಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಗಳಿಗೆ ತಡಕಾಡುವುದನ್ನು ತಪ್ಪಿಸಬೇಕೆನ್ನುವ ಉದ್ದೇಶದಿಂದ ಸರ್ಕಾರ ನಮ್ಮ ಕ್ಲಿನಿಕ್ ಯೋಜನೆ ಜಾರಿಗೆ ತಂದಿದೆ ಎಂದು ಹೇಳಿದರು.
ಜನರಿಗೆ ಆರೋಗ್ಯ ಹದಗೆಟ್ಟಾಗ ದೊಡ್ಡ ಆಸ್ಪತ್ರೆಗಳಿಗೆ ಹೋಗಲು ಸಾಮರ್ಥ್ಯವಿಲ್ಲದವರು, ಬಡಜನರಿಗೆ ಆರೋಗ್ಯ ರಕ್ಷಣೆಗಾಗಿ ನಮ್ಮ ಕ್ಲಿನಿಕ್ ಪ್ರಾರಂಭಿಸಲಾಗಿದೆ. ಆರೋಗ್ಯ ತಪಾಸಣೆ, ಔಷಧಿ, ಅವಶ್ಯಕ ಟೆಸ್ಟಗಳು, ಟೆಲಿಮೆಡಿಸನ್ ವ್ಯವಸ್ಥೆಗಳನ್ನು ಇಲ್ಲಿ ಮಾಡಲಾಗಿದೆ. ತಪಾಸಣೆ ಜೊತೆಗೆ ಆಧುನಿಕ ಚಿಕಿತ್ಸಾ ವ್ಯವಸ್ಥೆಯನ್ನು ಉಚಿತವಾಗಿ ಜನರಿಗೆ ಪೂರೈಸುವ ಕ್ಲಿನಿಕ್ ಇದಾಗಿದೆ ಎಂದರು.ಬಡವರಿಗೆ ಆರೋಗ್ಯ ಸಮಸ್ಯೆ ಉಂಟಾದರೆ ಖಾಸಗಿ ಆಸ್ಪತ್ರೆಗಳು ಹೆಚ್ಚು ದರ ವಿಧಿಸುವುದರಿಂದ ತೊಂದರೆ ಆಗುವುದನ್ನು ತಪ್ಪಿಸಲು ಸರ್ಕಾರದಿಂದ ಜನಸಾಮಾನ್ಯರಿಗಾಗಿ, ಬಡವರಿಗಾಗಿ ನಮ್ಮ ಕ್ಲಿನಿಕ್ ಆರಂಭಿಸಲಾಗಿದೆ ಎಂದು ಹೇಳಿದರು.
ಡಿಎಚ್‌ಓ ಡಾ.ಪ್ರಭುಲಿಂಗ ಮಾನೆಕರ್, ಡಾ.ಹಣಮಂತರೆಡ್ಡಿ, ಮಲ್ಲಪ್ಪ ನಾಯ್ಕಲ್, ಶಿವಪ್ರಸಾದ ಮೈತ್ರಿ, ತಾಪಂ ಅಧಿಕಾರಿ ಬಸವರಾಜ ಶರಬೈ, ತಮ್ಮಣ್ಣ, ಕೃಷ್ಣಾರೆಡ್ಡಿ, ಪಾಪಣ್ಣ ಮನ್ನೆ, ಶರಣು ಆವಂಟಿ, ರವಿ ಪಾಟೀಲ್, ಶಿರಾಜ್ ಚಿಂತಗುಂಟಾ, ಆಶನ್ನ ಬುದ್ದ, ರಾಮು ಆವಂಗಪುರ, ದೀಪಕ್ ಬೆಳ್ಳಿ, ಮಲ್ಲಿಕಾರ್ಜುನ ಅರುಣಿ ಇತರರಿದ್ದರು.