ರಾಮನಗರ: ಕನಕಪುರ ತಾಲೂಕಿನಲ್ಲಿ ಇತ್ತೀಚಿಗೆ ನಡೆದ ದೌರ್ಜನ್ಯ ಪ್ರಕರಣದ ಸಂತ್ರಸ್ತರಿಗೆ 1 ಲಕ್ಷ ಪರಿಹಾರ ಮಂಜೂರಾಗಿದ್ದು, ಎರಡು ಎಕರೆ ಭೂಮಿ ಮಂಜೂರು ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ತಿಳಿಸಿದರು.
ಮಾಗಡಿ ಪುರಸಭೆ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಅಂಗಡಿ ಮಳಿಗೆಗಳನ್ನು ರೋಸ್ಟರ್ ಪ್ರಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರಿಗೆ ಹರಾಜು ಪ್ರಕ್ರಿಯೆಯಲ್ಲಿ ಹಂಚಿಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಈ ಪ್ರಕ್ರಿಯೆಯನ್ನು ಸಂಪೂರ್ಣ ವಿಡಿಯೋ ಮಾಡಿಸಿ ನಿಯಮಗಳನ್ವಯ ಪಾರದರ್ಶಕವಾಗಿ ಕ್ರಮ ಕೈಗೊಳ್ಳಲಾಗುವುದು. ಈ ಪ್ರಕ್ರಿಯೆಯಲ್ಲಿ ಸಮಸ್ಯೆಗಳು ಕಂಡು ಬಂದಲ್ಲಿ, ನಗರ ಸ್ಥಳೀಯ ಸಂಸ್ಥೆಗಳು ಸಕ್ಷಮ ಪ್ರಾಧಿಕಾರದ ಗಮನಕ್ಕೆ ತರಬಹುದಾಗಿದೆ ಎಂದು ಹೇಳಿದರು.
ಜಿಲ್ಲೆಯ ಸಾರ್ವಜನಿಕ ಸ್ಮಶಾನಗಳಿಗೆ ಸರ್ಕಾರಿ ಸಾರ್ವಜನಿಕ ಸ್ಮಶಾನ ಎಂಬ ನಾಮಫಲಕ ಅಳವಡಿಸಬೇಕು ಹಾಗೂ ಆ ರುದ್ರ ಭೂಮಿಗೆ ಕಾಂಪೌಂಡ್ ಹಾಕಿಸುವಂತೆ ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ ಅವರಿಗೆ ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ದಿಗ್ವಿಜಯ್ ಬೋಡ್ಕೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.ಚನ್ನಪಟ್ಟಣ ತಾಲೂಕಿನ ದೇವರ ಹೊಸಳ್ಳಿ ರುದ್ರಭೂಮಿಗೆ ಸಂಬಂಧಿಸಿದಂತೆ ಅಲ್ಲಿನ ತಹಶೀಲ್ದಾರ್ ಆ ಸ್ಮಶಾನದ ಜಾಗವನ್ನು ಸಂಪೂರ್ಣ ಸರ್ವೆ ನೆಡಸಿ, ಅದಕ್ಕೆ ಸಾರ್ವಜನಿಕ ಸ್ಮಶಾನ ಎಂದು ನಾಮಫಲಕ ಅಳವಡಿಸುವಂತೆ ಜಿಲ್ಲಾಧಿಕಾರಿಗಳು ಚನ್ನಪಟ್ಟಣ ತಹಸೀಲ್ದಾರರಿಗೆ ಸೂಚಿಸಿದರು.
ಮಾಗಡಿ ತಾಲೂಕು ವ್ಯಾಪ್ತಿಯಲ್ಲಿ ಕೊಲೆಯಾಗಿದ್ದ ಪ್ರಕರಣವೊಂದರ ಸಂಬಂಧಿಕರಿಗೆ ಪರಿಹಾರ ನೀಡುವ ಕುರಿತಂತೆ ಸಭೆಯಲ್ಲಿ ಚರ್ಚೆಯಾಗಿ, ಆ ಪ್ರಕರಣದ ಸಂತ್ರಸ್ತರಿಗೆ ರಕ್ತ ಸಂಬಂಧಿಗಳು ಯಾರು ಇಲ್ಲದ ಕಾರಣ ಪರಿಹಾರಕ್ಕೆ ಮನವಿ ಸಲ್ಲಿಸಿರಲಿಲ್ಲ. ಇದೀಗ ಮಗುವೊಂದು ಸಂತ್ರಸ್ತರಾಗಿರುವುದು ಕಂಡು ಬಂದಿದ್ದು ಪ್ರಕರಣ ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಗೆ ಬರುವುದರಿಂದ ಆ ಮಗುವಿನ ವಂಶವೃಕ್ಷ ಪಡೆದು ಮಗುವಿನ ಹೆಸರಿಗೆ ನಿಗದಿತ ಮೊತ್ತ ಠೇವಣಿ ಮಾಡುವಂತೆ ಯಶವಂತ್ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿಗಳಾದ ಟಿ.ವಿ. ಸುರೇಶ್, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲಾ ಜಾಗೃತಿ ಉಪಸಮಿತಿ ಸದಸ್ಯರಾದ ಚಲುವರಾಜು, ಕುಂಬಾಪುರ ಬಾಬು, ಮಹೇಶ್, ಶಿವಣ್ಣ, ಗೋಪಾಲ ಕೃಷ್ಣ, ಶಿವಕುಮಾರ್, ಶಿವರಾಜು, ರೋಹಿತ್ ಇತರರು ಉಪಸ್ಥಿತರಿದ್ದರು.1ಕೆಆರ್ ಎಂಎನ್ 1.ಜೆಪಿಜಿ
ರಾಮನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಯಿತು.