ಮಳೆ ಹಾನಿಯಾದರೆ 24 ಗಂಟೆಯೊಳಗೆ ಪರಿಹಾರ ನೀಡಲು ಕ್ರಮ: ಡೀಸಿ ಶುಭ ಕಲ್ಯಾಣ್

KannadaprabhaNewsNetwork | Published : May 4, 2025 1:33 AM

ಸಾರಾಂಶ

ರಾಜ್ಯದ ಹಲವು ಭಾಗಗಳಲ್ಲಿ ಡೆಂಘಿ ಜ್ವರದ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆಯಿಂದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಡೆಂಘಿ ಉಲ್ಭಣವಾಗದಂತೆ ಸೊಳ್ಳೆಗಳ ಉತ್ಪತ್ತಿಯನ್ನು ನಿಯಂತ್ರಿಸಲು ಚರಂಡಿ ಹಾಗೂ ಗುಂಡಿಗಳಲ್ಲಿ ನೀರು ನಿಲ್ಲದಂತೆ ಕಟ್ಟೆಚ್ಚರ ವಹಿಸಬೇಕು .

ಕನ್ನಡಪ್ರಭ ವಾರ್ತೆ ತುಮಕೂರು

ಜಿಲ್ಲೆಯಲ್ಲಿ ಮಳೆ- ಗಾಳಿಯಿಂದ ಹಾನಿಗೊಳಗಾದ ಮನೆ, ಜಾನುವಾರುಗಳ ಮಾಲೀಕರಿಗೆ 24 ಗಂಟೆಯೊಳಗಾಗಿ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಖಡಕ್ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಕೇಸ್ವಾನ್ ಸಭಾಂಗಣದಲ್ಲಿ ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ತುರ್ತು ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ತೀವ್ರ ಮಳೆ- ಗಾಳಿಯಿಂದ ತೋಟ, ಮನೆ ಹಾಗೂ ಜಾನುವಾರುಗಳಿಗೆ ಹಾನಿಯುಂಟಾಗಿರುವ ಬಗ್ಗೆ ಪ್ರಕರಣಗಳು ವರದಿಯಾಗಿವೆ. ಹಾನಿಗೊಳಗಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿ ಶೀಘ್ರವೇ ಪರಿಹಾರ ನೀಡಲು ಕ್ರಮಕ್ಕೆ ಮುಂದಾಗಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಹಾನಿಗೊಳಗಾಗಿರುವ ಹಾಗೂ ಹಾನಿಗೊಳಗಾಗುವ ಸಂಭಾವ್ಯ ರಸ್ತೆ ಹಾಗೂ ಸೇತುವೆಗಳನ್ನು ಗುರುತಿಸಿ, ತಕ್ಷಣವೇ ದುರಸ್ತಿಗೆ ಕ್ರಮ ಕೈಗೊಂಡು ಸಾರ್ವಜನಿಕರು ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಕ್ರಮಹಿಸಬೇಕೆಂದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿದ್ಯುತ್ ತಂತಿಗಳು ಹಾದು ಹೋಗುವ ಮಾರ್ಗದಲ್ಲಿ ಮಳೆಗಾಳಿಗೆ ಬೀಳುವ ಮರಗಳನ್ನು ಗುರುತಿಸಿ ಕೊಂಬೆಗಳನ್ನು ಕತ್ತರಿಸಬೇಕು. ಮಳೆಯಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಲ್ಲಿ ಯಾವುದೇ ವಿಳಂಬ ಮಾಡದೇ ವಿದ್ಯುತ್ ಸಂಪರ್ಕ ನೀಡಲು ಕ್ರಮವಹಿಸಬೇಕು ಹಾಗೂ ವಿದ್ಯುತ್ ಸ್ಪರ್ಶದಿಂದ ಪ್ರಾಣಹಾನಿಯಾಗದಂತೆ ವಿಶೇಷ ಗಮನಹರಿಸಿ ಸಮರ್ಪಕವಾದ ಕ್ರಮಗಳನ್ನು ತುರ್ತು ಪರಿಸ್ಥಿತಿಯಲ್ಲಿ ಕೈಗೊಳ್ಳಲು ಸೂಚಿಸಿದರು.

ಮಳೆಯ ಸಂದರ್ಭದಲ್ಲಿ ವಿದ್ಯುತ್ ಅವಘಡಗಳಾಗದಂತೆ ಸಾರ್ವಜನಿಕರಿಗೆ ವಿದ್ಯುತ್ ಬಳಕೆಯ ನಿಯಮಗಳನ್ನು ಪಾಲಿಸುವ ಕುರಿತು ಅರಿವು ಮೂಡಿಸಬೇಕು ಎಂದು ತಿಳಿಸಿದರಲ್ಲದೆ, ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರನ್ನು ಕ್ಲೋರಿನೇಷನ್ ಮಾಡಿಸಿರುವ ವರದಿಯನ್ನು ಸಲ್ಲಿಸಬೇಕು. ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ದಿನ ಧೂಮೀಕರಣ ಮಾಡಬೇಕು ಹಾಗೂ ತಮ್ಮ ಮನೆಯ ಸುತ್ತ- ಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕೆಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಮಾತನಾಡಿ, ಜಿಲ್ಲೆಯಲ್ಲಿ ಸಾರ್ವಜನಿಕರು ಉಪಯೋಗಿಸುತ್ತಿರುವ ಎಲ್ಲ ಕೊಳವೆ ಬಾವಿಗಳ ನೀರಿನ ಗುಣಮಟ್ಟವನ್ನು ಪರೀಕ್ಷಿಸಬೇಕು. ಕುಡಿಯಲು ಯೋಗ್ಯವಲ್ಲದ ನೀರಿನ ಮೂಲವನ್ನು ಬಳಸದಂತೆ ಸಾರ್ವಜನಿಕರಲ್ಲಿ ಮನವಿ ಮಾಡಬೇಕು. ಕುಡಿಯಲು ಯೋಗ್ಯವಲ್ಲದ ನೀರಿನ ಕೊಳವೆ ಬಾವಿಗಳನ್ನು ಹೊರತುಪಡಿಸಿ ಪರ್ಯಾಯ ಕೊಳವೆ ಬಾವಿಗಳ ಮೂಲಕ ಜನರಿಗೆ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.

ರಾಜ್ಯದ ಹಲವು ಭಾಗಗಳಲ್ಲಿ ಡೆಂಘಿ ಜ್ವರದ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆಯಿಂದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಡೆಂಘಿ ಉಲ್ಭಣವಾಗದಂತೆ ಸೊಳ್ಳೆಗಳ ಉತ್ಪತ್ತಿಯನ್ನು ನಿಯಂತ್ರಿಸಲು ಚರಂಡಿ ಹಾಗೂ ಗುಂಡಿಗಳಲ್ಲಿ ನೀರು ನಿಲ್ಲದಂತೆ ಕಟ್ಟೆಚ್ಚರ ವಹಿಸಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ(ಅಭಿವೃದ್ದಿ) ಸಂಜೀವಪ್ಪ, ಜಂಟಿ ಕೃಷಿ ನಿರ್ದೇಶಕ ರಮೇಶ್, ತೋಟಗಾರಿಕೆ ಉಪನಿರ್ದೇಶಕ ಶಾರದಮ್ಮ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಯೋಗಾನಂದ, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Share this article