ಬೆಂಗಳೂರು : ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಕರ್ತರಿಗೆ ಬಡ್ಡಿರಹಿತ ಸಾಲ, ಉತ್ತಮ ಆರೋಗ್ಯ ಸೇವೆ ದೊರೆಯುವಂತಾಗಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಶಿಸಿದರು.
ಕರ್ನಾಟಕ ಪತ್ರಕರ್ತರ ಸಹಕಾರ ಸಂಘ 75 ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಅರಮನೆ ರಸ್ತೆಯ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ಅಮೃತ ಸಂಭ್ರಮ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪತ್ರಕರ್ತರ ಕಾರ್ಯ ಸವಾಲಿನಿಂದ ಕೂಡಿದ್ದು ಬಡ್ಡಿರಹಿತ ಸಾಲ ಕೊಡಲೇಬೇಕು. ಮಾನ್ಯತೆ ಪಡೆದ ಪರ್ತಕರ್ತರು ಮಾಧ್ಯಮ ಸಂಜೀವಿನಿ ಯೋಜನೆಯಡಿ 5 ಲಕ್ಷ ರು. ವರೆಗೆ ಉಚಿತ ಆರೋಗ್ಯ ಸೇವೆ ಪಡೆಯಬಹುದು. ಇದು ಎಲ್ಲ ನೈಜ ಪತ್ರಕರ್ತರಿಗೂ ಸಿಗುವಂತಾಗಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
10 ಕೋಟಿ ರು. ಬಡ್ಡಿರಹಿತ ಸಾಲ:
ಪತ್ರಕರ್ತರ ಸಹಕಾರ ಸಂಘ ಇನ್ನಷ್ಟು ಸದೃಢವಾಗಲಿ. ಸಂಘಕ್ಕೆ 10 ಕೋಟಿ ರು. ಬಡ್ಡಿರಹಿತ ಸಾಲ ನೀಡುವುದಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿ ತಕ್ಷಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಅಥವಾ ಬಜೆಟ್‌ನಲ್ಲಿ ಘೋಷಿಸಲಾಗುವುದು. ಸರ್ಕಾರ ಸಂಘದ ಬೇಡಿಕೆಗಳನ್ನು ಈಡೇರಿಸಬೇಕು. ಅಮೃತ ಮಹೋತ್ಸವಕ್ಕೆ ಕೊಡುಗೆಗಳನ್ನು ನೀಡಬೇಕಿದೆ ಎಂದು ಸ್ಪಷ್ಟಪಡಿಸಿದರು.
ಇದೇ ಸಂದರ್ಭದಲ್ಲಿ ಅಮೃತ ಮಹೋತ್ಸವದ ಸ್ಮರಣ ಸಂಚಿಕೆ ಲೋಕಾರ್ಪಣೆಗೊಳಿಸಲಾಯಿತು. ಸಂಘದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಪದಾಧಿಕಾರಿಗಳನ್ನು ಗೌರವಿಸಲಾಯಿತು. ಸಂಘದ ಅಧ್ಯಕ್ಷ ರಮೇಶ್ ಎಂ.ಪಾಳ್ಯ, ಉಪಾಧ್ಯಕ್ಷ ದೊಡ್ಡಬೊಮ್ಮಯ್ಯ, ಖಜಾಂಚಿ ಮೋಹನ್‌ಕುಮಾರ್, ನಿರ್ದೇಶಕರಾದ ಆನಂದ ಬೈದನಮನೆ, ಕೆ.ವಿ.ಪರಮೇಶ್, ಧ್ಯಾನ್ ಪೂಣಚ್ಚ, ರಮೇಶ್ ಹಿರೇಜಂಬೂರು, ವಿನೋದ್‌ಕುಮಾರ್, ರಾಜೇಂದ್ರಕುಮಾರ್, ಕೃಷ್ಣಕುಮಾರ್, ನಯನಾ, ವನಿತಾ ಮತ್ತಿತರರು ಉಪಸ್ಥಿತರಿದ್ದರು.
ಬೇಡಿಕೆ ಈಡೇರಿಕೆ ಭರವಸೆ
ಸರ್ಕಾರದ ಪರ ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಮಾತನಾಡಿ, ಸಂಘವು ‘ಎ’ ಶ್ರೇಣಿಯ ಆಡಿಟ್ ವರ್ಗೀಕರಣ ಹೊಂದಿದ್ದು, 2005ರಲ್ಲಿ ನಡೆದ ‘ಸಹಕಾರ ಸಪ್ತಾಹ’ ಕಾರ್ಯಕ್ರಮದಲ್ಲಿ ಉತ್ತಮ ಸಹಕಾರ ಸಂಘವೆಂಬ ಗೌರವಕ್ಕೆ ಪಾತ್ರವಾಗಿದೆ. 10 ಕೋಟಿ ರು.ಗೂ ಹೆಚ್ಚು ಬಂಡವಾಳ ಹೊಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಸಕ್ತ 539 ಪತ್ರಕರ್ತರಿಗೆ 15 ಸಾವಿರ ರು. ಮಾಸಿಕ ಪಿಂಚಣಿ ನೀಡಲಾಗುತ್ತಿದೆ. ಪಿಂಚಣಿಗೆ ಸಂಬಂಧಿಸಿ ಇರುವ ಕಠಿಣ ನಿಯಮಗಳನ್ನು ಸರಳೀಕರಣಗೊಳಿಸುವುದು, ಸಂಘಕ್ಕೆ ಜಮೀನು ನೀಡುವುದು ಸೇರಿ ನಿಮ್ಮ ಬೇಡಿಕೆಗಳನ್ನು ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗುವುದು. ಸರ್ಕಾರ ಸದಾಕಾಲ ನಿಮ್ಮ ನೆರವಿಗೆ ಇರುತ್ತದೆ ಎಂದು ಸ್ಪಷ್ಟಪಡಿಸಿದರು.
ಪತ್ರಕರ್ತರ ಸಂಘದ ಬೇಡಿಕೆಗಳು
ಮಾಧ್ಯಮ ಅಕಾಡೆಮಿ ಸೇರಿ ಸರ್ಕಾರಿ ನಾಮನಿರ್ದೇಶಿತ ಸಂಸ್ಥೆಗಳಲ್ಲಿ ಸಂಘದ ಸದಸ್ಯರೊಬ್ಬರಿಗೆ ಅವಕಾಶ ನೀಡಬೇಕು. ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ‘ಮಾಧ್ಯಮ ಗ್ರಾಮ’ ನಿರ್ಮಾಣಕ್ಕೆ 10 ಎಕರೆ ಭೂಮಿ ನೀಡಬೇಕು. ಪತ್ರಕರ್ತರ ಪಿಂಚಣಿ ಯೋಜನೆಯ ನಿಯಮಗಳನ್ನು ಸರಳೀಕರಣಗೊಳಿಸಬೇಕು. ಸರ್ಕಾರದಿಂದ 10 ಕೋಟಿ ರು. ಬಡ್ಡಿ ರಹಿತ ಸಾಲ ನೀಡುವುದು ಸೇರಿ ಹಲವು ಬೇಡಿಕೆಗಳನ್ನು ಪತ್ರಕರ್ತರ ಸಂಘದಿಂದ ಸಲ್ಲಿಸಲಾಯಿತು.
ಪತ್ರಕರ್ತರ ಸಹಕಾರ ಸಂಘವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಬೃಹದಾಕಾರವಾಗಿ ಬೆಳೆಯಬೇಕು. ನಿಮ್ಮ ಬೇಡಿಕೆಗಳನ್ನು ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗುವುದು.
- ರಾಮಲಿಂಗಾ ರೆಡ್ಡಿ, ಸಾರಿಗೆ ಸಚಿವ