ಸುಜಾತಾ ಭಟ್‌ ಮನೆ ಹೊರಗೆ ರಾತ್ರಿಯಿಡೀ ಹೈಡ್ರಾಮಾ!

KannadaprabhaNewsNetwork |  
Published : Aug 24, 2025, 02:00 AM ISTUpdated : Aug 24, 2025, 10:52 AM IST
Sujatha Bhat

ಸಾರಾಂಶ

ತಮ್ಮ ಮಗಳ ಅಸ್ತಿತ್ವದ ಬಗ್ಗೆ ಗಂಟೆಗೊಂದು ಹೇಳಿಕೆ ನೀಡಿ ಗೊಂದಲ ಮೂಡಿಸುತ್ತಿದ್ದ ಸುಜಾತಾ ಭಟ್ ಅವರ ಮನೆ ಮುಂದೆ ಶುಕ್ರವಾರ ತಡ ರಾತ್ರಿ ಹೈಡ್ರಾಮಾ ನಡೆದು ಕೊನೆಗೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.

 ಬೆಂಗಳೂರು :  ತಮ್ಮ ಮಗಳ ಅಸ್ತಿತ್ವದ ಬಗ್ಗೆ ಗಂಟೆಗೊಂದು ಹೇಳಿಕೆ ನೀಡಿ ಗೊಂದಲ ಮೂಡಿಸುತ್ತಿದ್ದ ಸುಜಾತಾ ಭಟ್ ಅವರ ಮನೆ ಮುಂದೆ ಶುಕ್ರವಾರ ತಡ ರಾತ್ರಿ ಹೈಡ್ರಾಮಾ ನಡೆದು ಕೊನೆಗೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.

ತಮಗೆ ಮಗಳೇ ಇಲ್ಲ ಎಂದು ಯೂಟ್ಯೂಬ್ ಚಾನಲ್‌ವೊಂದಕ್ಕೆ ರಾತ್ರಿ ಹೇಳಿಕೆ ನೀಡಿದ್ದ ಅವರು, ಕೆಲ ಹೊತ್ತಿನಲ್ಲೇ ವರಸೆ ಬದಲಿಸಿ ತಮಗೆ ಮಗಳಿದ್ದದ್ದು ನಿಜ ಎಂದಿದ್ದರು. ಈ ಹಿನ್ನೆಲೆಯಲ್ಲಿ ಅನನ್ಯ ಭಟ್ ನಾಪತ್ತೆ ಸಂಬಂಧ ಸುಜಾತಾ ಅವರಿಂದ ಸ್ಪಷ್ಟೀಕರಣ ಪಡೆಯಲು ಪದ್ಮನಾಭನಗರ ಸಮೀಪದಲ್ಲಿರುವ ಅವರ ಮನೆಗೆ ಮಾಧ್ಯಮಗಳು ತೆರಳಿದ್ದವು. ಆ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ವ್ಯಕ್ತಿಯೊಬ್ಬರ ಯೂಟ್ಯೂಬ್ ಚಾನೆಲ್‌ ಹಾಗೂ ಖಾಸಗಿ ಸುದ್ದಿವಾಹಿನಿ ವ್ಯವಸ್ಥಾಪಕ ನಿರ್ದೇಶಕರ ನಡುವೆ ತಿಕ್ಕಾಟ ನಡೆಯಿತು. ಇನ್ನೊಂದೆಡೆ ತಾನು ಮಾಧ್ಯಮಗಳ ಒತ್ತಡ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸುಜಾತಾ ಅವರು ಬರೆದಿದ್ದಾರೆ ಎನ್ನಲಾದ ಪತ್ರ ಬಹಿರಂಗವಾಗಿ ಮತ್ತಷ್ಟು ಗೊಂದಲ ಮೂಡಿಸಿತು.

ಈ ನಾಟಕೀಯ ಬೆಳವಣಿಗೆ ಬಳಿಕ ಮುಂಜಾಗ್ರತಾ ಕ್ರಮವಾಗಿ ಪೊಲೀಸರು, ಸುಜಾತ ಭಟ್ ಅವರ ಮನೆಗೆ ಬಿಗಿ ಭದ್ರತೆ ಕಲ್ಪಿಸಿದರು. ಅವರ ಒಪ್ಪಿಗೆ ಇಲ್ಲದ ಸಾರ್ವಜನಿಕರು ಹಾಗೂ ಮಾಧ್ಯಮಗಳ ಭೇಟಿಗೆ ಪೊಲೀಸರು ನಿರ್ಬಂಧಿಸಿದರು.

ಮೊದಲು ಮಗಳ ನಾಪತ್ತೆಯಾಗಿದ್ದಾಳೆ ಎನ್ನುತ್ತಿದ್ದ ಸುಜಾತಾ ಅವರು, ದಿಢೀರನೇ ಶುಕ್ರವಾರ ರಾತ್ರಿ ಯೂಟ್ಯೂಬ್‌ ಚಾನೆಲ್‌ವೊಂದರಲ್ಲಿ ಸಂದರ್ಶನ ನೀಡಿ ನನಗೆ ಮಗಳಿದ್ದಾಳೆ ಎನ್ನುವುದೇ ಕಟ್ಟುಕಥೆ ಎಂದಿದ್ದರು. ಇದಾದ ಬಳಿಕ ಅವರ ಮನೆ ಮುಂದೆ ಮಾಧ್ಯಮದವರು ಜಮಾಯಿಸಿದರು. ಆಗ ತಾವು ಮಾಧ್ಯಮಗಳ ಒತ್ತಡ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸುಜಾತಾ ಅವರು ಬರೆದಿದ್ದಾರೆ ಎನ್ನಲಾದ ಪತ್ರವೊಂದು ಬಹಿರಂಗವಾಗಿ ವೈರಲ್ ಆಯಿತು.

ಈ ಪತ್ರದ ಹಿನ್ನೆಲೆಯಲ್ಲಿ ಮತ್ತಷ್ಟು ಗೊಂದಲ, ಆತಂಕಕ್ಕೆ ಕಾರಣವಾಯಿತು. ಆಗ ಸುಜಾತ ಭಟ್ ಅವರಿಗೆ ಖಾಸಗಿ ಸುದ್ದಿವಾಹಿನಿ ಮುಖ್ಯಸ್ಥ ಬೆದರಿಕೆ ಹಾಕುತ್ತಿದ್ದಾರೆ ಎಂದು ಯೂಟ್ಯೂಬ್‌ ಚಾನೆಲ್‌ವೊಂದು ಲೈವ್ ಮಾಡಿತ್ತು. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಖಾಸಗಿ ಸುದ್ದಿವಾಹಿನಿ ಎಂಡಿ ಹಾಗೂ ಯೂಟ್ಯೂಬ್‌ ಚಾನೆಲ್‌ ಪ್ರತಿನಿಧಿ ಮಧ್ಯೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ಅದೇ ಯೂಟ್ಯೂಬ್ ಚಾನೆಲ್‌ನಲ್ಲಿ ಸುಜಾತಾ ಭಟ್ ಅವರ ಸಮ್ಮುಖದಲ್ಲೇ ಬೆದರಿಕೆ ಇಲ್ಲವೆಂದು ಖಾಸಗಿ ಸುದ್ದಿವಾಹಿನಿ ಎಂಡಿ ಲೈವ್ ಮಾಡಿದರು.

ಆರೋಗ್ಯ ಸರಿ ಇಲ್ಲ ಎಂದ ಸುಜಾತಾ:

ನನಗೆ ಆರೋಗ್ಯ ಸರಿಯಿಲ್ಲ, ನನಗೆ ಬೆದರಿಕೆ ಇದೆ. ನನ್ನ ಜೀವಕ್ಕೆ ರಕ್ಷಣೆ ಕೊಡುವಂತೆ ಬನಶಂಕರಿ ಪೊಲೀಸರಿಗೆ ಸುಜಾತಾ ಮನವಿ ಮಾಡಿದರು. ಈ ಮನವಿ ಹಿನ್ನೆಲೆಯಲ್ಲಿ ಸುಜಾತಾ ಅವರ ಮನೆಗೆ ಮುಂಜಾಗ್ರತಾ ಕ್ರಮವಾಗಿ ನಾಲ್ವರು ಪೊಲೀಸರು ಹಾಗೂ ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್‌)ಯ ಒಂದು ತುಕಡಿ ಭದ್ರತೆಗೆ ನಿಯೋಜಿಸಿದ್ದಾರೆ.

ನನ್ನ ಮನೆ ಬಳಿ ಮಾಧ್ಯಮದವರು ಹಾಗೂ ಸಾರ್ವಜನಿಕರು ಬಾರದಂತೆ ನಿರ್ಬಂಧಿಸುವಂತೆ ಸುಜಾತಾ ಕೋರಿದ್ದಾರೆ. ಹೀಗಾಗಿ ಸುಜಾತಾ ಅವರ ಅನುಮತಿ ಇಲ್ಲದೆ ಅ‍ವರ ಭೇಟಿಗೆ ಪೊಲೀಸರು ಅವಕಾಶ ನಿರಾಕರಿಸಿದ್ದಾರೆ ಎನ್ನಲಾಗಿದೆ.

ನನಗೆ ಒತ್ತಡವೇರಿದ್ದರಿಂದ ಹೇಳಿಕೆ:

ಯೂಟ್ಯೂಬ್ ಚಾನಲ್ ಸಂದರ್ಶನ ಸಿಕ್ಕಾಪಟ್ಟೆ ಬಿರುಗಾಳಿ ಎಬ್ಬಿಸಿದ ಬಳಿಕ ಮತ್ತೆ ಉಲ್ಟಾ ಹೊಡೆದ ಸುಜಾತ ಭಟ್ ಅ‍ವರು, ತಮಗೆ ಒತ್ತಡ ಹಾಕಿ ಯೂಟ್ಯೂಬ್‌ನವರು ಹೇಳಿಕೆ ಪಡೆದರು ಎಂದರು.

ನನ್ನನ್ನು ಬೆದರಿಸಿ ಮಗಳಿಲ್ಲ ಎಂದು ಈ ಹೇಳಿಕೆ ಕೊಡಿಸಿದ್ದಾರೆ. ನಾನು ಜೀವಭಯದಿಂದ ಆ ರೀತಿ ಹೇಳಬೇಕಾಯಿತು ಎಂದ ಸುಜಾತಾ ಅಲವತ್ತುಕೊಂಡರು. ಈ ಗೊಂದಲಕಾರಿ ಹೇಳಿಕೆಗಳ ಬಗ್ಗೆ ಸ್ಪಷ್ಟನೆ ಕೇಳಲು ಮುಂದಾದ ಮಾಧ್ಯಮ ಪ್ರತಿನಿಧಿಗಳ ಮುಂದೆ ಅವರು ಪ್ರಜ್ಞೆತಪ್ಪಿ ಕುಸಿದು ಬಿದ್ದರು. ಕೊನೆಗೆ ಸುಜಾತಾ ಅವರಿಗೆ ನೀರು ಕೊಟ್ಟು ಆರೈಕೆ ಮಾಡಿ ಪೊಲೀಸರು ಕರೆದೊಯ್ದರು.

ಸ್ಥಳೀಯರ ವಿರೋಧ:

ಈ ಗಲಾಟೆಯಿಂದ ಬೇಸತ್ತ ಸ್ಥಳೀಯ ನಿವಾಸಿಗಳು, ಸುಜಾತಾ ಅವರನ್ನು ದೂರ ಕರೆದೊಯ್ಯುವಂತೆ ಪೊಲೀಸರಿಗೆ ಮನವಿ ಮಾಡಿದರು. ಮನೆ ಬಳಿ ರಾತ್ರಿಯಿಡೀ ಗಲಾಟೆ ಮಾಡಿದರೆ ಹೇಗೆ? ಮೊದಲು ಸುಜಾತಾ ಅವರನ್ನು ಮನೆಯಿಂದ ಹೊರಗೆ ಕರೆದೊಯ್ದುವಂತೆ ಒತ್ತಾಯಿಸಿದರು.

PREV
Read more Articles on

Recommended Stories

ಬುರುಡೆ ಗ್ಯಾಂಗ್‌ಗೆ ಚಿನ್ನಯ್ಯ ಸೇರಿದ್ದು ಹೇಗೆ ? ಪರಿಚಯಿಸಿದ್ದೇ ಸೌಜನ್ಯ ಮಾವ!
ಬುರುಡೆ ತನಿಖೆ ವೇಳೆ ಎಲ್ಲರೂ, ಬಂಧನ ವೇಳೆ ಕೈಕೊಟ್ಟರು!