ಬುರುಡೆ ಬಗ್ಗೆ ಬುರುಡೆ ಬಿಟ್ಟಿದ್ದಕ್ಕೆ ಚಿನ್ನಯ್ಯ ಅರೆಸ್ಟ್‌!

KannadaprabhaNewsNetwork |  
Published : Aug 24, 2025, 02:00 AM IST

ಸಾರಾಂಶ

ಧರ್ಮಸ್ಥಳ ಗ್ರಾಮದಲ್ಲಿ ಮೃತದೇಹಗಳನ್ನು ಹೂತ ಆರೋಪ ಕುರಿತ ಪ್ರಕರಣದಲ್ಲಿ ತಾನೇ ತಂದುಕೊಟ್ಟ ತಲೆ ಬುರುಡೆ ಹಾಗೂ ಆ ಬುರುಡೆಗೆ ಅಂಟಿದ್ದ ಮಣ್ಣು ಮುಸುಕುಧಾರಿಗೆ ಇದೀಗ ಕಂಟಕವಾಗಿ ಪರಿಣಮಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಧರ್ಮಸ್ಥಳ ಗ್ರಾಮದಲ್ಲಿ ಮೃತದೇಹಗಳನ್ನು ಹೂತ ಆರೋಪ ಕುರಿತ ಪ್ರಕರಣದಲ್ಲಿ ತಾನೇ ತಂದುಕೊಟ್ಟ ತಲೆ ಬುರುಡೆ ಹಾಗೂ ಆ ಬುರುಡೆಗೆ ಅಂಟಿದ್ದ ಮಣ್ಣು ಮುಸುಕುಧಾರಿಗೆ ಇದೀಗ ಕಂಟಕವಾಗಿ ಪರಿಣಮಿಸಿದೆ. ಮುಸುಕುಧಾರಿಯು ಸಾಕ್ಷ್ಯದ ರೂಪದಲ್ಲಿ ತಂದುಕೊಟ್ಟ ಬುರುಡೆ ಮಹಿಳೆಯದ್ದೂ ಅಲ್ಲ, ಅದಕ್ಕಂಟಿದ ಮಣ್ಣು ಧರ್ಮಸ್ಥಳ ವ್ಯಾಪ್ತಿ ಪ್ರದೇಶದ್ದೂ ಅಲ್ಲ ಎಂಬುದು ತಜ್ಞರ ವರದಿಯಿಂದ ಬಯಲಾಗಿದ್ದು, ಇದು ಇಡೀ ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ಧರ್ಮಸ್ಥಳದ ಅರಣ್ಯ ಪ್ರದೇಶದಲ್ಲಿ ಹತ್ತು ವರ್ಷಗಳ ಹಿಂದೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದ್ದ ಮಹಿಳೆಯನ್ನು ತಾನೇ ಹೂತು ಹಾಕಿದ್ದೆ ಎಂದು ಹೇಳಿದ್ದ ದೂರುದಾರ, ತನ್ನ ಮಾತಿಗೆ ಸಾಕ್ಷ್ಯವಾಗಿ ಮನುಷ್ಯನ ತಲೆಬುರುಡೆ ಹಾಗೂ ಕೆಲ ಮೂಳೆಗಳನ್ನು ತಂದುಕೊಟ್ಟಿದ್ದ. ಈತನ ಮಾತಿನ ಸತ್ಯಾಸತ್ಯತೆ ಪರಿಶೀಲನೆಗೆ ಆ ತಲೆಬರುಡೆ ಹಾಗೂ ಅದಕ್ಕೆ ಅಂಟಿದ್ದ ಮಣ್ಣಿನ ಪರೀಕ್ಷೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ನಿರ್ಧರಿಸಿತ್ತು. ಅದರಂತೆ ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್‌)ಗಳಿಗೆ ಎಸ್ಐಟಿ ಅಧಿಕಾರಿಗಳು ಕಳುಹಿಸಿಕೊಟ್ಟಿದ್ದರು. ಆ ತಜ್ಞರ ವರದಿಯಲ್ಲಿ ದೂರುದಾರ ಚಿನ್ನಯ್ಯ ಹೆಣೆದಿದ್ದ ಸುಳ್ಳಿನ ಸಂಕಥನ ಬಯಲಾಗಿದೆ ಎಂದು ಮೂಲಗಳು ಹೇಳಿವೆ.

ಮುಸುಕುಧಾರಿ ಕೊಟ್ಟಿದ್ದ ಬುರುಡೆ ಹಾಗೂ ಅದಕ್ಕಂಟಿದ್ದ ಮಣ್ಣು ಪರೀಕ್ಷೆಗೊಳಪಡಿಸಿದ ಏಳು ವಿಧಿ ವಿಜ್ಞಾನ ಪ್ರಯೋಗಾಲಯಗಳ ತಜ್ಞರು ಪ್ರತ್ಯೇಕವಾಗಿ ಸಲ್ಲಿಸಿದ ವರದಿಯಲ್ಲಿ ತಲೆಬುರುಡೆ ಮಹಿಳೆಯದ್ದಲ್ಲ, ಪುರುಷನದ್ದು ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಆ ತಲೆಬುರಡೆಗೆ ಅಂಟಿದ್ದ ಮಣ್ಣಿಗೂ ಧರ್ಮಸ್ಥಳ ಪ್ರದೇಶದ ಮಣ್ಣಿಗೂ ಸಾಮ್ಯತೆಯೇ ಇಲ್ಲ ಎಂದೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ತಜ್ಞರ ವರದಿ ಮುಂದಿಟ್ಟುಕೊಂಡು ಎಸ್‌ಐಟಿ ಅಧಿಕಾರಿಗಳು ಪ್ರಶ್ನಿಸಿದಾಗ, ಚಿನ್ನಯ್ಯನ ಮುಖವಾಡ ಕಳಚಿ ಬಿದ್ದಿದೆ ಎನ್ನಲಾಗಿದೆ.

ತಾನು ಎಲ್ಲಿಂದ ತಲೆಬರುಡೆ ತಂದಿದ್ದೆ ಎಂದು ವಿಚಾರಣೆ ವೇಳೆ ಚಿನ್ನಯ್ಯ ಸ್ಪಷ್ಟವಾಗಿ ಹೇಳುತ್ತಿಲ್ಲ. ಆದರೆ ಯಾವುದೋ ವೈದ್ಯಕೀಯ ಕಾಲೇಜು ಅಥವಾ ಸಂಗ್ರಹಾಲಯದಿಂದ ಈ ಬುರುಡೆ ತಂದಿರುವ ಬಗ್ಗೆ ಶಂಕೆ ಇದೆ. ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಮೂಲಗಳು ಹೇಳಿವೆ.

14 ಪಾಯಿಂಟ್‌ ಮೃತದೇಹ ಮತ್ತೊಂದು ಸಾಕ್ಷ್ಯ:

14ನೇ ಪಾಯಿಂಟ್‌ನಲ್ಲಿ ದೂರುದಾರ ತೋರಿಸಿದ್ದ ಜಾಗದಲ್ಲಿ ಪುರುಷನ ಮೃತದೇಹವೊಂದು ಪತ್ತೆಯಾಗಿತ್ತು. ಆದರೆ ಅದೂ ಒಂದು ವರ್ಷದ ಹಿಂದೆ ಮೃತಪಟ್ಟ ವ್ಯಕ್ತಿಯದ್ದಾಗಿತ್ತು. ಹೀಗಾಗಿ 11 ವರ್ಷಗಳ ಹಿಂದೆಯೇ ಧರ್ಮಸ್ಥಳ ತೊರೆದಿದ್ದಾಗಿ ಹೇಳಿದ್ದ ದೂರುದಾರನಿಗೆ ವರ್ಷದ ಹಿಂದೆ ಮೃತಪಟ್ಟ ವ್ಯಕ್ತಿ ಬಗ್ಗೆ ಹೇಗೆ ಮಾಹಿತಿ ಇತ್ತು ಎಂಬ ಪ್ರಶ್ನೆ ಇದೀಗ ಮೂಡಿದೆ. ಇದನ್ನೇ ಆತನ ವಿರುದ್ಧ ಮತ್ತೊಂದು ಪ್ರಬಲ ಪುರಾವೆಯಾಗಿ ಎಸ್‌ಐಟಿ ಪರಿಗಣಿಸಿದೆ ಎಂದು ತಿಳಿದು ಬಂದಿದೆ.

PREV

Recommended Stories

ಬುರುಡೆ ಗ್ಯಾಂಗ್‌ಗೆ ಚಿನ್ನಯ್ಯ ಸೇರಿದ್ದು ಹೇಗೆ ? ಪರಿಚಯಿಸಿದ್ದೇ ಸೌಜನ್ಯ ಮಾವ!
ಬುರುಡೆ ತನಿಖೆ ವೇಳೆ ಎಲ್ಲರೂ, ಬಂಧನ ವೇಳೆ ಕೈಕೊಟ್ಟರು!