ನಿಯಮ ಬಾಹಿರ ಇ-ಸ್ವತ್ತು ಮಾಡಿದ್ದಲ್ಲಿ ಕ್ರಮ: ಜಿಪಂ ಸಿಇಒ ಕೆ.ಆರ್.ನಂದಿನಿ ಎಚ್ಚರಿಕೆ

KannadaprabhaNewsNetwork |  
Published : Apr 22, 2025, 01:52 AM IST
21ಕೆಎಂಎನ್ ಡಿ36 | Kannada Prabha

ಸಾರಾಂಶ

ಗ್ರಾಮೀಣ ಪ್ರದೇಶಗಳ ಆಸ್ತಿಗಳಿಗೆ ಇ-ಸ್ವತ್ತು ದಾಖಲೆ ವಿತರಣೆಯಲ್ಲಿನ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಬೇಕು. ಪರಿಹಾರ ಸೂಚಿಸಲು ಮತ್ತು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಬೇಕು. ಇ-ಸ್ವತ್ತು ತಂತ್ರಾಂಶದಡಿ ಪರಿಷ್ಕೃತ ಸುತ್ತೋಲೆಗಳು ಹಾಗೂ ಸರ್ಕಾರದ ಮಾರ್ಗಸೂಚಿಗಳನ್ವಯ ಇ-ಸ್ವತ್ತು ಮಾಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಪರಿಷ್ಕೃತ ಸುತ್ತೋಲೆಗಳು ಹಾಗೂ ಸರ್ಕಾರದ ಮಾರ್ಗಸೂಚಿಗಳನ್ವಯ ಇ-ಸ್ವತ್ತು ಮಾಡಬೇಕು. ನಿಯಮ ಬಾಹಿರವಾಗಿ ಇ-ಸ್ವತ್ತು ಮಾಡಿದ್ದಲ್ಲಿ ಕ್ರಮ ಜರುಗಿಸಲಾಗುವುದು ಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ಎಚ್ಚರಿಕೆ ನೀಡಿದರು.

ನಗರದ ಅಂಬೇಡ್ಕರ್ ಭವನ ಸಭಾಂಗಣದಲ್ಲಿ ಜಿಲ್ಲಾ ವ್ಯಾಪ್ತಿಯ ತಾಪಂ ಇಒ, ಗ್ರಾಪಂ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳಿಗೆ ಇ-ಸ್ವತ್ತು ತಂತ್ರಾಂಶದ ಕಾರ್ಯಾಗಾರದಲ್ಲಿ ಮಾತನಾಡಿದರು.ಗ್ರಾಮೀಣ ಪ್ರದೇಶಗಳ ಆಸ್ತಿಗಳಿಗೆ ಇ-ಸ್ವತ್ತು ದಾಖಲೆ ವಿತರಣೆಯಲ್ಲಿನ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಬೇಕು. ಪರಿಹಾರ ಸೂಚಿಸಲು ಮತ್ತು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಬೇಕು. ಇ-ಸ್ವತ್ತು ತಂತ್ರಾಂಶದಡಿ ಪರಿಷ್ಕೃತ ಸುತ್ತೋಲೆಗಳು ಹಾಗೂ ಸರ್ಕಾರದ ಮಾರ್ಗಸೂಚಿಗಳನ್ವಯ ಇ-ಸ್ವತ್ತು ಮಾಡಬೇಕು ಎಂದರು.

ಸಾರ್ವಜನಿಕರಿಗೆ ನಮೂನೆ 9, 11 ಮತ್ತು 11ಎಗಳನ್ನು ವಿತರಿಸಲು ಮತ್ತು ಇ-ಸ್ವತ್ತು ತಂತ್ರಾಂಶದಡಿ ದಾಖಲಾತಿಗಳನ್ನು ವಿತರಿಸುವಲ್ಲಿ ವಿಳಂಬವಾಗುತ್ತಿರುವುದರ ಬಗ್ಗೆ ಕ್ರಮ ವಹಿಸಬೇಕು. ಇ-ಸ್ವತ್ತು ವಿತರಣೆಯಲ್ಲಿ ಪಾರದರ್ಶಕತೆ ಕಾಪಾಡಬೇಕು. ತೆರಿಗೆ ಸೋರಿಕೆಗೆ ಕಡಿವಾಣ ಹಾಕುವ ಮೂಲಕ ಗ್ರಾಪಂ ವರಮಾನ ಹೆಚ್ಚಳಕ್ಕೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಯಾವುದೇ ಇ-ಸ್ವತ್ತು ಅಧಿಕೃತವಾಗಿ ಗ್ರಾಪಂನಲ್ಲಿಯೇ ಮಾಡಬೇಕು. ಅದನ್ನು ಹೊರತುಪಡಿಸಿ ಖಾಸಗಿ ಸೈಬರ್ ಸೆಂಟರ್ ಗಳಲ್ಲಿ ಇ-ಸ್ವತ್ತು ಮಾಡಿದ್ದಲ್ಲಿ ಕ್ರಮ ಜರುಗಿಸಲಾಗುವುದು. ಎಲ್ಲಾ ಪಿಡಿಒಗಳು ಕೇಂದ್ರ ಸ್ಥಾನದಲ್ಲಿ ಇರಬೇಕು, ಕಡ್ಡಾಯವಾಗಿ ಇ-ಹಾಜರಾತಿ ಇರಬೇಕು ಮತ್ತು ಸಾರ್ವಜನಿಕ ಅಹವಾಲು ಸ್ವೀಕರಿಸಿ ಬಗೆಹರಿಸಬೇಕು ಎಂದರು.

ಪಂಚಾಯತ್ ರಾಜ್ ಇಲಾಖೆಯ ಉಪ ನಿರ್ದೇಶಕರಾದ ಗೀತಾ, ಆಯಾ ಗ್ರಾಮ ಠಾಣ ವ್ಯಾಪ್ತಿಯಲ್ಲಿರುವ ಆಸ್ತಿಗೆ ಇ-ಸ್ವತ್ತು ನೀಡುವ ಬಗ್ಗೆ ಹಾಗೂ ಕ್ರಮಬದ್ದ ಮತ್ತು ಕ್ರಮಬದ್ದವಲ್ಲದ ಆಸ್ತಿ ನಿರ್ವಹಣೆ ಬಗ್ಗೆ ತಿಳಿಸಿಕೊಟ್ಟರು.

ತರಬೇತಿ ಕಾರ್ಯಾಗಾರದ ಸಂಶೋಧನಾ ಅಧಿಕಾರಿಗಳಾದ ಶಶಿಧರ್ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಕಾಯ್ದೆ, ಸರ್ಕಾರವು ಹಂತ ಹಂತವಾಗಿ ಜಾರಿಗೆ ತರುವ ಸುತ್ತೋಲೆಗಳಿಗೆ ಅನುಗುಣವಾಗಿ ಇ-ಸ್ವತ್ತುಗಳನ್ನು ಮಾಡಬೇಕು ಮತ್ತು ಪಂಚತಂತ್ರ ತಂತ್ರಾಂಶದ ನಿರ್ವಹಣೆ, ವಾಣಿಜ್ಯ ಮತ್ತು ಕೈಗಾರಿಕೆ, ವಸತಿ ಮತ್ತು ವಾಣಿಜ್ಯ ಹಾಗೂ ಅಪಾರ್ಟ್ಮೆಂಟ್ ಆಸ್ತಿಗಳ ವಿಧಗಳ ಆಧಾರವಾಗಿ ಕಂದಾಯ ನಿರ್ಧಾರ ಮಾಡುವ ಬಗ್ಗೆ, ದಾಖಲೆಗಳನ್ನು ನಿರ್ವಹಿಸಬೇಕು ಎಂದರು.

ಕಾರ್ಯಾಗಾರದಲ್ಲಿ ಜಿಪಂ ಸಹಾಯಕ ಕಾರ್ಯದರ್ಶಿ ಚಂದ್ರ, ಗ್ರಾಪಂ ಪಿಡಿಒ, ಗ್ರಾಪಂ ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರಗಳು, ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ ನರೇಗಾ ಸಿಬ್ಬಂದಿ ಹಾಜರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ