ದಾಬಸ್‍ಪೇಟೆ: ಪ್ರತಿ ಗ್ರಾಮದಲ್ಲಿಯೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದು ಇನ್ನುಳಿದ ಕಾಮಗಾರಿ ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗುವುದು ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.
ಮಾಚನಹಳ್ಳಿ ಹಾಗೂ ಮಾಚನಹಳ್ಳಿ ಕಾಲೋನಿ ಗ್ರಾಮಗಳ ಅಭಿವೃದ್ಧಿಗೆ ಸುಮಾರು 1.50 ರು.ಗಳ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುತ್ತದೆ. ಹಾಗೂ ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಹಂತ ಹಂತವಾಗಿ ಪರಿಹರಿಸುತ್ತೇನೆ ಎಂದು ಹೇಳಿದರು.
ಕ್ಷೇತ್ರದಲ್ಲಿ ಸ್ಥಳೀಯ ಗುತ್ತಿಗೆದಾರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಕಾಮಗಾರಿ ಪಟ್ಟಿ ಮಾಡಲಾಗಿದೆ. ಸ್ಥಳೀಯ ವೈಜ್ಞಾನಿಕವಾಗಿ ಸುಸಜ್ಜಿತ ಹಾಗೂ ಪಕ್ಷಕ್ಕೆ ದುಡಿದ ಗುತ್ತಿಗೆದಾರರಿಗೆ ಅವಕಾಶ ನೀಡಲಾಗುವುದು. ಈಗಾಗಲೇ ಕೆಲ ಮುಖಂಡರಿಗೆ ಕಾಮಗಾರಿ ಮಾಡುವಂತೆ ನಿರ್ದೇಶಿಸಲು ಸೂಚಿಸಲಾಗಿದೆ. ಗೌರಾಪುರ ಮಾರ್ಗವಾಗಿ ತುಮಕೂರಿಗೆ ಹೋಗುವ ರಸ್ತೆಯೂ ಕಿರಿದಾಗಿದ್ದು ಶೀಘ್ರದಲ್ಲೇ ಅಗಲೀಕರಣ ಮಾಡಿ ರಸ್ತೆ ನಿರ್ಮಿಸುತ್ತೇನೆ. ಗಂಗೇನಪುರ ರಸ್ತೆ ಸಮಸ್ಯೆ ಗಮನದಲ್ಲಿದ್ದು ಟೆಂಡರ್ ಆದ ತಕ್ಷಣ ಕಾಮಗಾರಿಗೆ ಚಾಲನೆ ನೀಡುತ್ತೇನೆ. ಐಸಾಮಿಪಾಳ್ಯದಲ್ಲಿ ನಿರ್ಮಿಸುವ ಬಸವೇಶ್ವರ ದೇವಾಲಯಕ್ಕೆ ಶಾಸಕರ ಅನುದಾನದಿಂದ ಐದು ಲಕ್ಷ ಹಾಗೂ ವೈಯಕ್ತಿಕವಾಗಿಯೂ ಸಹಕಾರ ನೀಡುತ್ತೇನೆ. ನಿಮ್ಮ ಸಮಸ್ಯೆಗಳು ಏನಿದ್ದರೂ ಸಹ ನನ್ನ ಗಮನಕ್ಕೆ, ಸ್ಥಳೀಯ ಮುಖಂಡರ ಗಮನಕ್ಕೆ ತನ್ನಿ, ನನ್ನ ನಂಬರ್ ಹಾಗೂ ಆಪ್ತ ಸಹಾಯಕನ ನಂಬರ್ ಗೆ ಕರೆ ಮಾಡಿ ಗಮನಕ್ಕೆ ತಂದರೆ ಪ್ರಾಮಾಣಿಕವಾಗಿ ಪರಿಹರಿಸುತ್ತೇನೆ ಎಂದು ಹೇಳಿದರು.ಅಗಳಕುಪ್ಪೆ ಗೋವಿಂದರಾಜು ಮಾತನಾಡಿ, ನಮ್ಮ ಶಾಸಕರು ಪ್ರತಿಯೊಂದು ಹಳ್ಳಿಗೂ ಭೇಟಿ ನೀಡುತ್ತಿದ್ದು, ಗ್ರಾಮದ ಜನರನ್ನೇ ನೇರವಾಗಿ ಭೇಟಿ ಮಾಡಿ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಇಂತಹ ಶಾಸಕರು ಸಿಕ್ಕಿರುವುದು ಕ್ಷೇತ್ರಕ್ಕೆ ಅನುಕೂಲವಾಗಿದೆ ಎಂದರು.
ಪೋಟೋ 13 : ಸೋಂಪುರ ಹೋಬಳಿಯ ಶಿವಗಂಗೆ ಗ್ರಾಪಂ ವ್ಯಾಪ್ತಿಯ ಮಾಚನಹಳ್ಳಿ ಗ್ರಾಮದಲ್ಲಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಶಾಸಕ ಶ್ರೀನಿವಾಸ್ ಚಾಲನೆ ನೀಡಿದರು.