ನೈಜ ಫಲಾನುಭವಿಗಳ ಜಾಬ್ ಕಾರ್ಡ್ ಸಕ್ರಿಯಗೊಳಿಸಿ

KannadaprabhaNewsNetwork | Published : Dec 7, 2024 12:30 AM

ಸಾರಾಂಶ

ಕನಕಪುರ: ರದ್ದು ಮಾಡಿರುವ ನೈಜ ಫಲಾನುಭವಿಗಳ ಜಾಬ್ ಕಾರ್ಡ್‌ಗಳನ್ನು ಅಗತ್ಯ ದಾಖಲೆಗಳನ್ನು ಪಡೆದು ಸಕ್ರಿಯಗೊಳಿಸಬೇಕು ಎಂದು ಸಾತನೂರು ಗ್ರಾಮ ಪಂಚಾಯಿತಿ ಸದಸ್ಯರು ಆಗ್ರಹಿಸಿದರು.

ಕನಕಪುರ: ರದ್ದು ಮಾಡಿರುವ ನೈಜ ಫಲಾನುಭವಿಗಳ ಜಾಬ್ ಕಾರ್ಡ್‌ಗಳನ್ನು ಅಗತ್ಯ ದಾಖಲೆಗಳನ್ನು ಪಡೆದು ಸಕ್ರಿಯಗೊಳಿಸಬೇಕು ಎಂದು ಸಾತನೂರು ಗ್ರಾಮ ಪಂಚಾಯಿತಿ ಸದಸ್ಯರು ಆಗ್ರಹಿಸಿದರು. ಸಾತನೂರು ಗ್ರಾಪಂ ಅಧ್ಯಕ್ಷೆ ಶಿಲ್ಪಾ ಬೋರಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ಹರೀಶ್ ಮಾತನಾಡಿ, ಪಂಚಾಯ್ತಿಯಲ್ಲಿ ನೈಜ ಫಲಾನುಭವಿಗಳ ಕೆಲವು ಜಾಬ್ ಕಾರ್ಡ್‌ಗಳನ್ನು ರದ್ದು ಮಾಡಲಾಗಿದೆ. ಇದರಿಂದ ಕಾಮಗಾರಿಗಳಿಗೆ ತೊಂದರೆಯಾಗಿದೆ. ಯಾವ ಕಾರಣಕ್ಕೆ ನರೇಗಾ ಜಾಬ್ ಕಾರ್ಡ್ ರದ್ದು ಪತ್ತೆ ಹಚ್ಚಿ, ಜಾಬ್ ಕಾರ್ಡ್ ರದ್ದಾಗಿರುವ ಫಲಾನುಭವಿಗಳನ್ನು ಪಟ್ಟಿಮಾಡಿ, ಸಂಬಂಧಪಟ್ಟ ದಾಖಲಾತಿಗಳನ್ನು ಜಿಲ್ಲಾ ಪಂಚಾಯಿತಿಗೆ ಕೊಟ್ಟು ಸಕ್ರಿಯಗೊಳಿಸಲು ಕ್ರಮ ವಹಿಸಬೇಕು ಎಂದು ಹೇಳಿದರು.

ನರೇಗಾ ಯೋಜನೆಯಡಿ ಕೈಗೊಂಡಿರುವ ಸಮುದಾಯ ಮತ್ತು ವೈಯಕ್ತಿಕ ಕಾಮಗಾರಿಗಳ ಸಾಮಗ್ರಿ ವೆಚ್ಚ ಹಲವು ವರ್ಷ ಕಳೆದರೂ ಬಿಡುಗಡೆಯಾಗಿಲ್ಲ. ಇದರಿಂದ ಫಲಾನುಭವಿಗಳಿಗೆ ತೊಂದರೆಯಾಗಿದ್ದು, ಬಾಕಿ ಇರುವ ನರೇಗಾ ಯೋಜನೆ ಸಾಮಗ್ರಿ ವೆಚ್ಚ ಬಿಡುಗಡೆ ಮಾಡಬೇಕು ಎಂದರು.

ಸದಸ್ಯ ಅಶೋಕ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಬಾಲಕ ಮತ್ತು ಬಾಲಕಿಯರ ಪ್ರತ್ಯೇಕ ಸಮುದಾಯ ಶೌಚಾಲಯವನ್ನು 15ನೇ ಹಣಕಾಸಿನ ಯೋಜನೆ ಅನುದಾನದಲ್ಲಿ ನಿರ್ಮಿಸಬೇಕು. ಮಕ್ಕಳ ಪಥಸಂಚಲನ ಹಾಗೂ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹಿರಿಯ ಮಾಧ್ಯಮಿಕ ಶಾಲೆಗೆ ವಾದ್ಯ ಮತ್ತು ಬ್ಯಾಂಡ್ ಸೆಟ್ ಮತ್ತು ವಿದ್ಯಾರ್ಥಿಗಳು ಕುಳಿತುಕೊಳ್ಳಲು ಪೀಠೋಪಕರಣಗಳನ್ನ ಪೂರೈಸಬೇಕೆಂದು ಹೇಳಿದರು.

ಸದಸ್ಯರಾದ ಸಿದ್ದರಾಜು ಮತ್ತು ನಾಗಪ್ಪ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ಸೂರು ಇಲ್ಲದವರನ್ನು ಗುರುತಿಸಿ ವಸತಿ ಯೋಜನೆಯಡಿ ಹೊಸ ಮನೆಗಳನ್ನು ಕಟ್ಟಿಕೊಳ್ಳಲು ಅನುದಾನ ನೀಡಬೇಕು. ಈಗಾಗಲೇ ವಸತಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ಆಯ್ಕೆಯಾಗಿ ತಳಹದಿ ಮತ್ತು ಕಟ್ಟಡಗಳನ್ನು ನಿರ್ಮಾಣ ಮಾಡಿರುವ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಪಿಡಿಒ ಶಿವಣ್ಣ ಮಾತನಾಡಿ, ಗ್ರಾಮ ಪಂಚಾಯತಿ ಸದಸ್ಯರಿಗೆ 15ನೇ ಹಣಕಾಸು ಯೋಜನೆಯ ಕ್ರಿಯಾಯೋಜನೆ ಮತ್ತು ನರೇಗಾ ಯೋಜನೆಯ ವಸತಿ ಯೋಜನೆ ಸರ್ಕಾರದ ಯೋಜನೆಗಳ ಬಗ್ಗೆ ಗ್ರಾಪಂ ಸಂಪನ್ಮೂಲ ಕ್ರೂಡಿಕರಣ, ತೆರಿಗೆ ಮತ್ತು ಕಂದಾಯ ಸಂಗ್ರಹ, ಜಮಾ ಖರ್ಚುಗಳ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಸದಸ್ಯರಾದ ಹರೀಶ್, ಚಂದ್ರಶೇಖರ್, ಕಾಂತರಾಜು, ಸಂತೋಷ್, ಉಮೇಶ್, ನಾಗಪ್ಪ, ಕೆಂಪಮ್ಮ, ಸಿದ್ದರಾಜು, ಮಹಾದೇವಮ್ಮ,ಗಾಯತ್ರಿ, ಗ್ರಾಪಂ ಕಾರ್ಯದರ್ಶಿ, ಶ್ರೀನಿವಾಸ್, ದ್ವಿತೀಯ ದರ್ಜೆ ಸಹಾಯಕಿ ಅಪ್ಸರ ಬಾನ್, ಕರ ವಸೂಲಿಗಾರ ಮಂಜುನಾಥ್ ಹಾಗೂ ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು.

ಕೆ ಕೆ ಪಿ ಸುದ್ದಿ 04 :

ಸಾತನೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶಿಲ್ಪಾ ಬೋರಯ್ಯ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಸದಸ್ಯರು ಪಿಡಿಒ ಶಿವಣ್ಣ, ಕಾರ್ಯದರ್ಶಿ, ಶ್ರೀನಿವಾಸ್, ದ್ವಿತೀಯ ದರ್ಜೆ ಸಹಾಯಕಿ ಅಪ್ಸರ ಬಾನ್, ಕರ ವಸೂಲಿಗಾರ ಮಂಜುನಾಥ್‌ ಇತರರಿದ್ದರು.

Share this article