ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಯುವ ವಕೀಲರು ಹಿರಿಯ ವಕೀಲರ ಮಾರ್ಗದರ್ಶನ ಪಡೆದು ವೃತ್ತಿಯಲ್ಲಿ ಕ್ರಿಯಾಶೀಲತೆ ಮೈಗೂಡಿಸಿಕೊಂಡು ಕಾರ್ಯೋನ್ಮುಖರಾಗಬೇಕು ಹಾಗೂ ತಮ್ಮನ್ನು ನಂಬಿ ಬಂದಂತಹ ಕಕ್ಷಿದಾರರಿಗೆ ನ್ಯಾಯ ಒದಗಿಸುವ ಪ್ರಾಮಾಣಿಕ ಕೆಲಸ ಮಾಡಬೇಕು ಎಂದು ಕರ್ನಾಟಕ ಉಚ್ಚ ನ್ಯಾಯಾಲಯ ನ್ಯಾಯಮೂರ್ತಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಆರ್. ರವಿ ವೆಂಕಟಪ್ಪ ಹೊಸಮನಿ ತಿಳಿಸಿದರು.ಅವರು ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿನ ವಕೀಲರ ಸಂಘದ ಸಭಾಂಗಣದಲ್ಲಿ ಚಿಕ್ಕಬಳ್ಳಾಪುರ ವಕೀಲರ ಸಂಘ ಹಾಗೂ ಗೇರಹಳ್ಳಿ ಲಾ ಅಸೋಸಿಯೇಟ್ಸ್ ಇವರ ಸಹಯೋಗದೊಂದಿಗೆ ಕಾನೂನು ಕಾರ್ಯಗಾರ ಹಾಗೂ ಜಿ ಡಿ ಎ ಮೆಮೋರಿಯಲ್ ಗ್ರಂಥಾಲಯ ಮತ್ತು ಸಿ ಸಿ ಕ್ಯಾಮೆರಾ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ವೃತ್ತಿ ನೈಪುಣ್ಯತೆ ಬೆಳೆಸಿಯುವ ವಕೀಲರು ವೃತ್ತಿ ನೈಪುಣ್ಯತೆ ಗಳಿಸಿಕೊಳ್ಳುವ ಅವಶ್ಯಕತೆ ಇದೆ. ನ್ಯಾಯಕ್ಕಾಗಿ ವಕೀಲರ ಹತ್ತಿರ ನಂಬಿ ಬರುವ ಕಕ್ಷಿದಾರರ ವಿಶ್ವಾಸವನ್ನು ಗಳಿಸಿಕೊಳ್ಳಬೇಕು. ಪ್ರೌಢಿಮೆ ಜೊತೆಗೆ ಜನರ ಕ್ಷಮತೆಯನ್ನು ಗಳಿಸಿಕೊಳ್ಳುವ ಕೆಲಸ ಮಾಡಬೇಕಾಗಿದೆ ಎಂದ ಅವರು ಇದಕ್ಕಾಗಿ ಹೆಚ್ಚು ಹೆಚ್ಚು ತಿಳಿದಷ್ಟು ವೃತ್ತಿಗೆ ಮಹತ್ವ ಸಿಗಲಿದೆ, ಜಿಡಿಎ ಅವರ ಹೆಸರಲ್ಲಿ ಇಂಥ ಕಾರ್ಯಾಗಾರ ನಡೆಯುತ್ತಿರುವುದು ಒಳ್ಳೆಯಬೆಳವಣಿಗೆ. ವಕೀಲರ ಸಂಘಕ್ಕೆ ಬೇಕು-ಬೇಡಗಳ ಬಗ್ಗೆ ತಿಳಿದು ಮುಂದಿನ ದಿನಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು. ಹೈಕೋರ್ಟ್ ನ್ಯಾಯಮೂರ್ತಿಗಳಾದ ಟಿಜಿ ಶಿವಶಂಕರೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಕೀಲಿ ವೃತ್ತಿಗೆ ನಿರಂತರ ಕಲಿಕೆಯ ಅಭ್ಯಾಸ ಬಹು ಮುಖ್ಯ. ನಿಜವಾದ ಅಸ್ತಿತ್ವವನ್ನು ತಮ್ಮದಾಗಿಸಿಕೊಂಡು ಕಕ್ಷಿದಾರರ ಪ್ರತಿಯೊಂದು ತಕರಾರುಗಳ ಸೂಕ್ಷ್ಮತೆ ಅರ್ಥೈಸಿಕೊಂಡು ನ್ಯಾಯಾಲಯದ ಮುಂದೆ ಪ್ರಚುರಪಡಿಸಬೇಕು ಎಂದರು.
ನೊಂದವರ ಧ್ವನಿಯಾಗಿ ವಕೀಲರ ಸಂಘದ ಜಿಲ್ಲಾಧ್ಯಕ್ಷ ಆರ್. ಶ್ರೀನಿವಾಸ್ ಮಾತನಾಡಿ ವಕೀಲರೆಂದರೆ ನೊಂದವರ ಧ್ವನಿಯಾಗಿ ನ್ಯಾಯಾಲಯದಲ್ಲಿ ಕೆಲಸ ಮಾಡಿ ಅವರಿಗೆ ನಿಜವಾದ ನ್ಯಾಯ ದೊರಕಿಸಿಕೊಡುವ ಶಕ್ತಿಯಾಗಬೇಕು ಎಂದರು. ಈ ಸಂದರ್ಭದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ನೇರಳೆ ವೀರಭದ್ರಯ್ಯ ಭವಾನಿ, ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ವಕೀಲರು ಮತ್ತು ಅಡಿಷನಲ್ ಅಡ್ವೋಕೇಟ್ ಜನರಲ್ ಎನ್. ದೇವದಾಸ್, ಹಿರಿಯ ವಕೀಲರಾದ ಸಿ.ಶಂಕರರೆಡ್ಡಿ, ಗೌರಿಬಿದನೂರು ತಾಲೂಕು ವಕೀಲ ಸಂಘದ ಅಧ್ಯಕ್ಷರಾದ ರಾಮದಾಸ್, ಶಿಡ್ಲಘಟ್ಟದ ಎ ನಾರಾಯಣಸ್ವಾಮಿ ಬಾಗೇಪಲ್ಲಿ ಎ ನಂಜುಂಡಪ್ಪ, ಇನ್ನಿತರ ವಕೀಲರು ಇದ್ದರು.