ಕನ್ನಡಪ್ರಭ ವಾರ್ತೆ ಚಾಮರಾಜನಗರ
ಹಿಂದೂ ಧರ್ಮ ಹಾಗೂ ಶ್ರೀ ಕ್ಷೇತ್ರದ ಧರ್ಮಸ್ಥಳದ ಮೇಲೆ ನಡೆದಿರುವ ಅಪಪ್ರಚಾರ, ಪಿತೂರಿ ಖಂಡಿಸಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಸೆ. ೧ ರಂದು ನಡೆಯಲಿರುವ ಧರ್ಮ ರಕ್ಷಣೆಗಾಗಿ ಧರ್ಮಸ್ಥಳ ಚಲೋ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಒಂದು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಹಾಗೂ ಮುಖಂಡರು ತೆರಳಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್. ನಿರಂಜನ್‌ಕುಮಾರ್ ತಿಳಿಸಿದರು.ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಈ ಸಂಬಂಧ ನಡೆದ ಪಕ್ಷದ ಪ್ರಮುಖ ಪದಾಧಿಕಾರಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿಂದೂಗಳ ಪವಿತ್ರ ಕ್ಷೇತ್ರವಾಗಿರುವ ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ದ ದೊಡ್ಡ ಪಿತೂರಿ, ಸಂಚು ರೂಪಿಸಲಾಗಿತ್ತು. ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಮೇಲೆ ಇಲ್ಲಸಲ್ಲದ ಸುಳ್ಳು ಸುದ್ದಿಗಳನ್ನು ಹರಡಿಸಿ, ಕ್ಷೇತ್ರದ ಬಗ್ಗೆ ಜನರಲ್ಲಿ ಅಪಕೀರ್ತಿ ಬರುವಂತಹ ಪಿತೂರಿಯನ್ನು ಮಾಡಲಾಗಿತ್ತು.ಈಗಾಗಲೇ ರಾಜ್ಯಾಧ್ಯಕ್ಷರು ಎಲ್ಲಾ ಜಿಲ್ಲೆಗಳಿಗೆ ಸೂಚನೆ ನೀಡಿದ್ದು. ಪ್ರತಿ ಜಿಲ್ಲೆಯಿಂದ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು, ಪಕ್ಷದ ಪ್ರಮುಖರು ಆಗಮಿಸುವಂತೆ ತಿಳಿಸಿದ್ದಾರೆ. ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಂದ ಬಸ್ ಹಾಗೂ ಸ್ವಂತ ವಾಹನಗಳಿಂದ ಪ್ರಮುಖ ಪದಾಧಿಕಾರಿಗಳು ಸಂಘಟನೆ ಮಾಡಿ ಸಮಾವೇಶದಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಲು ಶ್ರಮಿಸಬೇಕು ಎಂದು ನಿರಂಜನ್‌ಕುಮಾರ್ ತಿಳಿಸಿದರು.
ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ದಿನದಿಂದ ಬಹುಸಂಖ್ಯಾತ ಹಿಂದೂಗಳ ಮೇಲೆ ನಿರಂತರವಾಗಿ ಗದಾಪ್ರಹಾರ ಮಾಡುತ್ತಿದೆ. ಒಂದಾಲ್ಲ ಒಂದು ಕಾರಣಕ್ಕೆ ಹಿಂದೂಗಳನ್ನೇ ಟಾರ್ಗೇಟ್ ಮಾಡುತ್ತಿದೆ. ಅಲ್ಲದೇ ಒಂದು ಸಮುದಾಯವನ್ನು ತೃಷ್ಠಿಕರಿಸಿಕೊಂಡು ಓಟ್ ಬ್ಯಾಂಕ್ ರಾಜಕಾರಣ ಮಾಡಲು ಮುಂದಾಗಿದೆ. ಹಿಂದೂ ಹಬ್ಬಗಳಿಗೆ ಇಲ್ಲದ ಕಟ್ಟುಪಾಡುಗಳನ್ನು ಹಾಕುತ್ತಿದೆ. ಶಾಂತಿ ಸುವ್ಯವಸ್ಥೆಯ ನೆಪದಲ್ಲಿ ಹಿಂದೂ ಕಾರ್ಯಕರ್ತರನ್ನು ಬಂಧನ ಮಾಡಲಾಗುತ್ತಿದೆ. ನಾವು ಯಾವ ರಾಜ್ಯದಲ್ಲಿ ಇದ್ದೇವೆ ಎಂಬ ರೀತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕವನ್ನು ತಾಲಿಬಾನ್ ಮಾಡಲು ಹೊರಟಿದ್ದಾರೆ ಎಂದು ನಿರಂಜನ್‌ಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.ಹೀಗಾಗಿ ಬಡ ಜನರ ವಿರೋಧಿ, ಹಿಂದೂ ವಿರೋಧಿ ಹಾಗೂ ಕನ್ನಡಿಗರ ವಿರೋಧಿ ಕಾಂಗ್ರೆಸ್ ಸರ್ಕಾರವನ್ನು ಮುಂದಿನ ಚುನಾವಣೆಗಳಲ್ಲಿ ಬೇರು ಸಮೇತ ಕಿತ್ತು ಹಾಕಲು ಹಿಂದೂಗಳೇ ಜಾಗೃತಿರಾಗುವಂತೆ ಎಚ್ಚರಿಸಲು ಈ ರ್‍ಯಾಲಿ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ. ಜಿಲ್ಲೆಯಿಂದ ಹೆಚ್ಚು ಜನರು ಧರ್ಮಸ್ಥಳಕ್ಕೆ ಆಗಮಿಸಿ, ಮಂಜುನಾಥನ ದರ್ಶನ ಪಡೆದು, ಹಿಂದೂ ಸಂಸ್ಕೃತಿ, ಪರಂಪರೆಯನ್ನು ಉಳಿಸಿ, ದೇವಸ್ಥಾನದ ಅಸ್ಮಿತೆಯನ್ನು ಕಾಪಾಡಬೇಕೆಂದು ತಿಳಿಸಿದರು.
ಸಭೆಯಲ್ಲಿ ಧರ್ಮಸ್ಥಳ ಚಲೋ ವಿಭಾಗೀಯ ಸಂಚಾಲಕ ವಿ. ಫಣೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ.ವೃಷಬೇಂದ್ರಪ್ಪ, ಹೊನ್ನೂರು ಮಹದೇವಸ್ವಾಮಿ, ಮಾಜಿ ಜಿಲ್ಲಾಧ್ಯಕ್ಷ ನಾರಾಯಣ ಪ್ರಸಾದ್, ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ನೂರೊಂದುಶೆಟ್ಟಿ, ರಾಜ್ಯ ಎಸ್ಟಿ ಮೋರ್ಚಾ ಕಾರ್ಯದರ್ಶಿ ಜಯಸುಂದರ್, ಜಿಲ್ಲಾ ವಕ್ತಾರ ಕಾಡಹಳ್ಳಿ ಕುಮಾರ್, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಮಲೆಯೂರು ಕಮಲಮ್ಮ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸೂರ್ಯ ಬಾಲರಾಜ್, ಮಂಡಲದ ಅಧ್ಯಕ್ಷರಾದ ಶಿವರಾಜು, ಕೊಳ್ಳೇಗಾಲ ಮಹೇಶ್, ಹನೂರು ವೃಷಬೇಂದ್ರ, ಮುಖಂಡರಾದ ಎಸ್. ಬಾಲಸುಬ್ರಮಣ್ಯ, ಮಲೆಯೂರು ನಾಗೇಂದ್ರ, ರಾಜು ಇದ್ದರು.ಹಿಂದೂ ಸಂಪ್ರಾದಯದಂತೆ ಬಾನು ಮುಷ್ತಾಕ್ ದಸರಾ ಉದ್ಘಾಟಿಸಲಿ
ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್ ಮಾತನಾಡಿ, ಲೇಖಕಿ ಬಾನು ಮುಷ್ತಾಕ್ ಅವರನ್ನು ರಾಜ್ಯ ಸರ್ಕಾರ ಈ ಬಾರಿ ನಾಡ ಹಬ್ಬ ದಸರಾ ಉದ್ಗಾಟನೆಗೆ ಆಹ್ವಾನಿಸಿರುವುದು ತಪ್ಪಲ್ಲ. ಆದರೆ, ಬಾನು ಮುಷ್ತಾಕ್ ಹಿಂದೂ ಧರ್ಮ ದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲು ಹಾಗೂ ನಾಡ ಹಬ್ಬ ದಸರಾವನ್ನು ಉದ್ಘಾಟನೆ ಮಾಡಲು ಹಿಂದೂ ಸಂಪ್ರಾದಯಕ್ಕೆ ಬದ್ದರಾಗಿ ಮೈಸೂರಿಗೆ ಆಗಮಿಸಬೇಕು ಎಂದು ತಿಳಿಸಿದರು. ಈಗಾಗಲೇ ನಮ್ಮ ಮಾತೃ ಭಾಷೆ ಕನ್ನಡ ಹಾಗೂ ತಾಯಿ ಭುವನೇಶ್ವರಿಗೆ ಬಾನು ಮುಷ್ತಾಕ್ ಅಪಮಾನ ಮಾಡಿದ್ದಾರೆ. ಅಲ್ಲದೇ ಮುಸ್ಲಿಂಮರು ಏಕೆ ಕನ್ನಡ ಕಲಿಯುತ್ತಿಲ್ಲ ಎಂಬುದಕ್ಕೆ ಹರಿಸಿನ ಕುಂಕುಮದ ಮಾದರಿ ಬಾವುಟ ಕಾರಣ. ಕನ್ನಡವನ್ನು ಭುವನೇಶ್ವರಿ ಮೂರ್ತಿ ಮಾಡಿರುವುದರಿಂದ ಮುಸ್ಲಿಂ ಸಮುದಾಯದವರು ಕನ್ನಡ ಕಲಿಯಲು ನಿರಾಸಕ್ತಿ ವಹಿಸಿದ್ದಾರೆ ಎಂದು ಹೇಳಿ ಕನ್ನಡಿಗರಿಗೆ ಹಾಗೂ ತಾಯಿ ಭುವನೇಶ್ವರಿಗೆ ಅಪಮಾನ ಮಾಡಿದ್ದಾರೆ. ಈ ಬಗ್ಗೆ ಮೊದಲು ಕನ್ನಡಿಗರ ಕ್ಷಮೆ ಕೇಳಲಿ. ನಂತರ ಅವರು ತಾಯಿ ಚಾಮುಂಡೇಶ್ವರಿಯನ್ನು ಒಪ್ಪಿ ದಸರಾ ಉದ್ಗಾಟನೆಗೆ ಬರಲಿ ಎಂದು ಮಹೇಶ್ ತಿಳಿಸಿದರು. ರಾಜ್ಯ ಸರ್ಕಾರ ನಾಡ ಹಬ್ಬ ದಸರಾ ಕಾರ್ಯಕ್ರಮದಲ್ಲಿ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ, ಮುಸ್ಲಿಂ ಮಹಿಳೆಯನ್ನು ದಸರಾ ಉದ್ಘಾಟನೆ ಆಹ್ವಾನಿಸಿರುವುದು ಹಿಂದೂ ಧಾರ್ಮಿಕ ಆಚರಣೆಗೆ ವಿರುದ್ದವಾಗಿದೆ. ಹಿಂದೂಗಳ ಭಾವನೆಯೊಂದಿಗೆ ಚೆಲ್ಲಾಟವಾಡುತ್ತಿರುವ ಸರ್ಕಾರ ತನ್ನ ನಿರ್ಧಾರವನ್ನು ಪುನರ್ ಪರಿಶೀಲನೆ ಮಾಡಬೇಕು ಎಂದು ಮಹೇಶ್ ಒತ್ತಾಯಿಸಿದರು.