- ಸಿಎಂ ಶ್ಯಾಡೋ ಸೇರಿದಂತೆ ವಿವಿಧ ಟೀಕೆಯ ಭಿತ್ತಿಪತ್ರಗಳು। ಸರ್ಕಾರಿ ಕಚೇರಿಗಳ ಗೋಡೆ ಮೇಲೆ ಪೋಸ್ಟರ್
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುನಗರದ ವಿವಿಧೆಡೆ ಸರ್ಕಾರಿ ಕಚೇರಿಗಳ ಗೋಡೆಗಳ ಮೇಲೆ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ರಾತ್ರೋರಾತ್ರಿ ರಾಜ್ಯ ಸರ್ಕಾರದ ವಿರುದ್ಧ ವ್ಯಂಗ್ಯ ಹಾಗೂ ಆಕ್ರೋಶದ ಪೋಸ್ಟರ್ ಅಂಟಿಸುವ ಮೂಲಕ ವಿಭಿನ್ನ ಪ್ರತಿಭಟನೆ ನಡೆಸಿದ್ದಾರೆ. ಈ ಸಂಬಂಧ ನಗರದ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ತಾಲೂಕು ಆಫೀಸ್, ಮೆಸ್ಕಾಂ ಕಚೇರಿ, ತಾಲೂಕು ಪಂಚಾಯ್ತಿ, ಪ್ರವಾಸಿ ಮಂದಿರದ ಗೋಡೆಗಳ ಮೇಲೆ ಪೋಸ್ಟರ್ ಅಂಟಿಸಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಶ್ಯಾಡೋ ಸಿ.ಎಂ ಪೋಸ್ಟರ್ ಅಂಟಿಸಿದ್ದಾರೆ. ಇದರಲ್ಲಿ ಸಿಎಂ ಹಾಗೂ ಅವರ ಪುತ್ರ ಡಾ. ಯತೀಂದ್ರ ಅವರ ಫೊಟೋಗಳನ್ನು ಅಳವಡಿಸಲಾಗಿದೆ. ಇದು, ಗೃಹಜ್ಯೋತಿ ಯೋಜನೆಯಲ್ಲಿ ಜೇಬು ಸುಡುವ ಯೋಜನೆ. ಉಚಿತ ಕರೆಂಟ್ ಅಂತಾ ಅಧಿಕಾರಕ್ಕೆ ಬಂದವರು, ಇದೀಗ ಬಿಲ್ ಏರಿಕೆ ಭಾಗ್ಯ ಕೋಡ್ತಾ ಇದ್ದಾರೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಎಂದು ಹೇಳುತ್ತಿದ್ದಾರೆ. ಒಬ್ಬರಿಂದ ವಸೂಲಿ ಮಾಡಿ ಮತ್ತೊಬ್ಬರಿಗೆ ಕೊಟ್ಟು ಬಿಟ್ಟಿ ಪ್ರಚಾರ ತೆಗೆದುಕೊಳ್ಳೋದು ಹಗಲು ದರೋಡೆ ಸರ್ಕಾರ ಎಂದು ಪೋಸ್ಟರ್‌ನಲ್ಲಿ ಟೀಕಿಸಿದ್ದಾರೆ. ವೈಎಸ್‌ಟಿ ಸಂಗ್ರಹ ಸಮಿತಿಯ ಸುತ್ತೋಲೆಯ ಪೋಸ್ಟರ್‌ನಲ್ಲಿ ಯಾವುದೇ ಸರ್ಕಾರಿ ಸಂಬಂಧಿತ ಸೇವೆಗಳಿಗಾಗಿ ಹಲೋ ಅಪ್ಪಾ.., ಆಪ್ ಡೌನ್ ಲೋಡ್ ಮಾಡಿಕೊಳ್ಳಿ ಹಾಗೂ ಪೇಮೆಂಟ್ ಮಾಡಿ, ಹೆಚ್ಚಿನ ಮಾಹಿತಿಗೆ ಭೇಟಿ ನೀಡಿ ಎಂದು ಇ- ಮೇಲ್ ವಿಶಾಸದಲ್ಲಿ ಶ್ಯಾಡೋ ಸಿಎಂ ಆಫೀಸ್ ಡಾಟ್ ಕಾಂ ಹಾಕುವ ಮೂಲಕ ವ್ಯಂಗ್ಯವಾಡಿದ್ದಾರೆ. ರಾಜ್ಯವನ್ನ ಕತ್ತಲೆಗೆ ದೂಡಿದ ಇಂಧನ ಸಚಿವರು ನಾಪತ್ತೆ ಎಂದು ಪೋಸ್ಟರ್ ಹಾಕಿದ್ದು, ಕೆ.ಜೆ.ಜಾರ್ಜ್ ಇಂಧನ ಸಚಿವ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕಾಣೆ ಎಂದು ಪೋಸ್ಟ್ ಸಹಾ ಅಂಟಿಸಲಾಗಿದೆ. ಈ ತಿಂಗಳ ಕಪ್ಪ ಎಲ್ಲಿ ಎಂದು ಪ್ರಶ್ನೆ ಕೇಳಿರೋ ಸೋನಿಯಾ ಗಾಂಧಿ, ರೀತಿಯ ಪೋಸ್ಟರ್ ಸಹಾ ಅಂಟಿಸಲಾಗಿದೆ. ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ ಕಾಣುವಂತೆ ಸರ್ಕಾರಿ ಕಚೇರಿಗಳ ಗೋಡೆಗಳ ಮೇಲೆ ವಿಭಿನ್ನ ಪೋಸ್ಟರ್‌ಗಳನ್ನು ಹಾಕಲಾಗಿದೆ. ನಗರದ ವಿವಿಧೆಡೆ ಭಿತ್ತಿಪತ್ರಗಳು ಕಂಡು ಬರುತ್ತಿದ್ದಂತೆ ಪೊಲೀಸ್ ಇಲಾಖೆ ಅವುಗಳನ್ನು ತೆರವುಗೊಳಿಸಿತು.ಐವರ ವಿರುದ್ಧ ಪ್ರಕರಣ ದಾಖಲು: ಚಿಕ್ಕಮಗಳೂರಿನ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ನಿರೀಕ್ಷಣಾ ಮಂದಿರದಲ್ಲಿ ಮೇಟಿ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಲಿಂಗೇಗೌಡ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಶನಿವಾರ ದೂರು ನೀಡಿದ್ದಾರೆ.ಬೆಳಿಗ್ಗೆ 6 ಗಂಟೆ ವೇಳೆಗೆ ಕರ್ತವ್ಯದ ನಿಮಿತ್ತ ಪ್ರವಾಸಿ ಮಂದಿರಕ್ಕೆ ಬರುತ್ತಿದ್ದ ವೇಳೆಯಲ್ಲಿ ಯಾರೋ ಐದು ಜನ ಗೋಡೆಗಳ ಮೇಲೆ ಭಿತ್ತಿಪತ್ರ ಅಂಟಿಸುತ್ತಿದ್ದು, ನನ್ನನ್ನು ನೋಡಿದ ಕೂಡಲೇ ಓಡಿ ಹೋದರು. ಈ ವಿಷಯವನ್ನು ನಮ್ಮ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದ್ದು. ಅವರು ಮೌಖಿಕ ಸೂಚನೆ ನೀಡಿದ ಮೇರೆಗೆ ದೂರು ನೀಡಲಾಗಿದೆ ಎಂದು ತಿಳಿಸಿದ್ದಾರೆ. ಸ್ಥಳೀಯ ಪ್ರಾಧಿಕಾರದ ಅನುಮತಿ ಇಲ್ಲದೇ ಜಾಹಿರಾತು ಪೋಸ್ಟರ್ ಅನ್ನು ಸಾರ್ವಜನಿಕರಿಗೆ ಕಾಣುವಂತೆ ಅಂಟಿಸಿ ಈ ಮೂಲಕ ಸಾರ್ವಜನಿಕ ಉಪದ್ರ ಉಂಟು ಮಾಡುವ ಉದ್ದೇಶದಿಂದ ರಾಜ್ಯದ ಮುಖ್ಯಮಂತ್ರಿ ಹಾಗೂ ಇಂಧನ ಖಾತೆ ಸಚಿವರ ವಿರುದ್ಧ ಜಾಹಿರಾತು ಇರುವ ಪೋಸ್ಟರ್‌ಗಳನ್ನು ಸರ್ಕಾರದ ನಿರೀಕ್ಷಣಾ ಮಂದಿರದ ಗೋಡೆಗಳ ಮೇಲೆ ಅಂಟಿಸಿ ಗೋಡೆಗಳನ್ನು ವಿಕಾರಗೊಳಿಸಿದ ಐವರು ಮುಂದೆ ಬಂದರೆ ಗುರುತಿಸುತ್ತೇನೆ ಎಂದು ನೀಡಿದ ದೂರಿನ ಆಧಾರದ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. 18 ಕೆಸಿಕೆಎಂ 1ಚಿಕ್ಕಮಗಳೂರಿನ ಪ್ರವಾಸಿ ಮಂದಿರದಲ್ಲಿ ಸಿಎಂ ವಿರುದ್ಧ ಹಾಕಿರುವ ಪೋಸ್ಟರ್. ------ 18 ಕೆಸಿಕೆಎಂ 2ರಾಜ್ಯ ಸರ್ಕಾರದ ವಿರುದ್ಧ ಮೆಸ್ಕಾ ಕಚೇರಿ ಬಳಿ ಹಾಕಿದ್ದ ಪೋಸ್ಟರ್.