ಅರಸೀಕೆರೆ ಗಣೇಶೋತ್ಸವ ಮೆರವಣಿಗೆ

KannadaprabhaNewsNetwork | Published : Nov 19, 2023 1:30 AM

ಸಾರಾಂಶ

ಅರಸೀಕೆರೆ ಗಣೇಶೋತ್ಸವದ ಮೆರವಣಿಗೆ ೨ನೇ ದಿನವಾದ ಶನಿವಾರವೂ ಶಾಂತಿಯುತವಾಗಿ ಸಡಗರ ಸಂಭ್ರಮದಿಂದ ಮುಂದುವರಿಯಿತು. ಸಾಂಸ್ಕೃತಿಕ ಕಲಾ ತಂಡಗಳು ಜನಮನಸೂರೆಗೊಂಡರೆ ಕೆರೆಯ ಬಳಿ ಭಾರಿ ಮದ್ದು ಗುಂಡುಗಳ ಪ್ರದರ್ಶನ ನೆರೆದಿದ್ದ ಜನರನ್ನು ನಿಬ್ಬೆರಗಾಗಿಸುವಂತೆ ಮಾಡಿತು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ನಾಡಿನಲ್ಲೇ ಹೆಸರಾದ ಅರಸೀಕೆರೆ ಗಣೇಶೋತ್ಸವದ ಮೆರವಣಿಗೆ ೨ನೇ ದಿನವಾದ ಶನಿವಾರವೂ ಶಾಂತಿಯುತವಾಗಿ ಸಡಗರ ಸಂಭ್ರಮದಿಂದ ಮುಂದುವರಿಯಿತು. ಸಾಂಸ್ಕೃತಿಕ ಕಲಾ ತಂಡಗಳು ಜನಮನಸೂರೆಗೊಂಡರೆ ಕೆರೆಯ ಬಳಿ ಭಾರಿ ಮದ್ದು ಗುಂಡುಗಳ ಪ್ರದರ್ಶನ ನೆರೆದಿದ್ದ ಜನರನ್ನು ನಿಬ್ಬೆರಗಾಗಿಸುವಂತೆ ಮಾಡಿತು.

ಶುಕ್ರವಾರ ಸಂಜೆ ಆಸ್ಥಾನ ಮಂಟಪದಿಂದ ನಿರ್ಗಮಿಸಿದ ಪ್ರಸನ್ನ ಗಣಪತಿಯೂ ಮೆರವಣಿಗೆಯ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು. ಗಣಪನ ಉತ್ಸವ ಸಂಪ್ರದಾಯದಂತೆ ತಮ್ಮ ಬಡಾವಣೆ ,ಮನೆ ಹಾಗೂ ಅಂಗಡಿ-ಮುಂಗಟ್ಟಿನ ಮುಂದೆ ಸಾಗುವ ವಿಜ್ಞವಿನಾಯಕನಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿ ತಮ್ಮ ಭಕ್ತಿ ಸಮರ್ಪಿಸುವ ಮೂಲಕ ಬೀಳ್ಕೊಟ್ಟರೆ, ಉತ್ಸವ ಸಾಗುವ ರಸ್ತೆಯುದ್ದಕ್ಕೂ ಹೆಂಗಳೆಯರು ನೀರುಹಾಕಿ ಬಣ್ಣ-ಬಣ್ಣದ ಚಿತ್ತಾರ ಬಿಡಿಸಿದರೆ ಯುವಕರು ತಳಿರು ತೋರಣಗಳನ್ನು ಕಟ್ಟಿ ಸ್ವಾಗತಿಸಿದರು. ಸಂಘ-ಸಂಸ್ಥೆಗಳ ವತಿಯಿಂದ ನಗರದ ಕೆಲವು ವೃತ್ತಗಳಲ್ಲಿ ಬೃಹತ್ ಹೂವಿನ ಹಾರ ಸಮರ್ಪಿಸಿ ನೆರೆದಿದ್ದ ಭಕ್ತಾಧಿಗಳಿಗೆ ಪಾನಕ ಮತ್ತು ಪ್ರಸಾದ ವಿತರಿಸುತಿದುದ್ದು ವಿಶೇಷವಾಗಿತ್ತು.

ಶನಿವಾರ ಬೆಳಗ್ಗೆ ಶಾನುಭೋಗರ ಬೀದಿ, ಸಾಯಿನಾಥ ರಸ್ತೆ, ಕರಿಯಮ್ಮನಗುಡಿ ಬೀದಿ, ಲಕ್ಷ್ಮೀಪುರ, ರಂಗೇಗೌಡರ ಬೀದಿ, ಸುಭಾಷ್ ನಗರ, ಕೃಷಿ ಉತ್ಪನ್ನ ಮಾರುಕಟ್ಟೆ ಆವರಣ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಈ ವೇಳೆ ನೆರೆದಿದ್ದ ಸದ್ಭಕ್ತರು ಮಹಾಮಂಗಳಾರತಿ ಮಾಡುವ ಮೂಲಕ ಭಕ್ತಿ ಸಮರ್ಪಿಸಿದರು.

ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ಹೊರಟ ಉತ್ಸವದಲ್ಲಿ ಕೀಲು ಕುದುರೆ ನರ್ತನ ,ಕಾಳಿಕಾಂಬ ಕುಣಿತ, ಡೊಳ್ಳು ಕುಣಿತ, ನಂದೀಧ್ವಜ ಕುಣಿತ, ನಗಾರಿ ವೀರಭದ್ರ ಕುಣಿತ, ಡಿ.ಜೆಗಳು ಸೇರಿದಂತೆ ಜಾನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಭಕ್ತಸಮೂಹಕ್ಕೆ ಮನರಂಜನೆ ನೀಡಿದರು.

ಶಾಸಕರಿಂದ ಪೂಜೆ

ಶನಿವಾರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ , ಇನ್ನಿತರರು ಪೋಜೆ ಸಲ್ಲಿಸಿದರು. ಹಿಂದೂ-ಮುಸ್ಲೀಂ ಲೋಡರ್ಸ್‌ ಮಜ್ದೂರ್ ಯೂನಿಯನ್ ವತಿಯಿಂದ ಗಣಪತಿಗೆ ಭಾರಿ ಗಾತ್ರದ ಹಾರ ಸಮರ್ಪಿಸಿದರು. ಅಲ್ಲದೇ ಅಂಗಡಿಯ ಪ್ರತಿಯೊಬ್ಬ ವರ್ತಕರೂ ವಿಶೇಷ ಪೂಜೆ ಸಲ್ಲಿಸಿದರು.

ಮೆರವಣಿಗೆಯ ನೇತೃತ್ವ ವಹಿಸಿರುವ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಉತ್ಸವ ಆರಂಭದಿಂದ ಕಂತೇನಹಳ್ಳಿ ಕೆರೆ ತಲುಪುವವರೆಗೆ ಪ್ರತಿ ಹಂತದಲ್ಲಿ ತೀವ್ರಾ ನಿಗಾವಹಿಸಿ ಯಾವುದೇ ಗೊಂದಲಕ್ಕೆ ಆಸ್ಪದವಾಗದಂತೆ ಜಾಗರೂಕತೆ ವಹಿಸಿ ಹಗಲು-ರಾತ್ರಿಯೆನ್ನದೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಶನಿವಾರ ರಾತ್ರಿ 9 ಗಂಟೆಗೆ ಕಂತೇನಹಳ್ಳಿ ಕೆರೆಯ ಬಳಿಯಲ್ಲಿ ಬಾನಿನಲ್ಲಿ ಚಿತ್ತಾಕರ್ಷಕ ಮೂಡಿಸಿದ ಮದ್ದುಗುಂಡುಗಳ ಆಕರ್ಷಕ ಪ್ರದರ್ಶನ ನೆರೆದಿದ್ದ ಸಹಸ್ರಾರು ಜನರನ್ನು ಮಂತ್ರ ಮುಗ್ಧರನ್ನಾಗಿ ಮಾಡುವಲ್ಲಿ ಯಶ್ವಸಿಯಾಯಿತು. ಪಟ್ಟಣದ ಶ್ರೀಪ್ರಸನ್ನ ಗಣಪತಿಯ 82ನೇ ವರ್ಷದ ವಿಸರ್ಜನಾ ಮಹೋತ್ಸವವು ಶುಕ್ರವಾರ ಸಂಜೆ ಆರಂಭಗೊಂಡ ೨ನೇ ದಿನವಾದ ಶನಿವಾರವೂ ಶಾಂತಿಯುತವಾಗಿ ಮುಂದುವರೆದು ರಾತ್ರಿ 9ರ ವೇಳೆಗೆ ಕೆರೆಯ ಬಳಿಯಲ್ಲಿ ಗಣೇಶನ ಮೆರವಣಿಗೆ ಬರುತ್ತಿದ್ದಂತೆ ತಾಲೂಕಿನ ವಡೇರಹಳ್ಳಿಯ ಕಾಳಿಕಾಂಬ ಫೈರ್ ವಕ್ಸ್ರ್ ಅವರಿಂದ ರಣಪ್ರಚಂಡ, ಗಗನದಲ್ಲಿ ಬಣ್ಣ, ಬಣ್ಣದ ಚಿತ್ತರಾವನ್ನೇ ಮೂಡಿಸಿದ್ದ ಮದ್ದು ಗುಂಡುಗಳ ಆಕರ್ಷಕ ಪ್ರದರ್ಶನಗಳು ಜನರ ಮೆಚ್ಚುಗೆಗೆ ಪಾತ್ರವಾಯಿತು.

ಈ ಸಂದರ್ಭದಲ್ಲಿ ಕೆರೆಯ ಬಳಿಯಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಗಣೇಶೋತ್ಸವ ಕಾರ್ಯಕ್ರಮಕ್ಕೆ ಸಹಾಯ ಹಸ್ತವನ್ನು ನೀಡಿದ ಎಲ್ಲಾ ದಾನಿಗಳನ್ನು ಅಭಿನಂದಿಸಿದರು. 82ನೇ ವರ್ಷದ ಮಹೋತ್ಸವ ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ನೆರವೇರಿಸಲು ಹೆಚ್ಚಿನ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.

Share this article