ಸಾಫ್ಟ್‌ವೇರ್ ಪಾರ್ಕ್‌ಗಳಿಂದ ಪ್ರತಿಭಾ ಪಲಾಯನಕ್ಕೆ ತಡೆ

KannadaprabhaNewsNetwork | Published : Nov 18, 2023 1:00 AM

ಸಾರಾಂಶ

ಪ್ರವಾಸೋದ್ಯಮದ ಅವಕಾಶ ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ಉನ್ನತ ಗುಣಮಟ್ಟದ ಶೈಕ್ಷಣಿಕ ಕಲಿಕೆಗೆ ವ್ಯವಸ್ಥೆಗಳು ಸಜ್ಜಾಗಬೇಕು. ಘಟ್ಟದ ಮೇಲ್ಭಾಗ ಮತ್ತು ಕರಾವಳಿ ಭಾಗದಲ್ಲಿ ಪ್ರತ್ಯೇಕ ಸಾಫ್ಟ್‌ವೇರ್ ಪಾರ್ಕ್‌ಗಳು ನಿರ್ಮಾಣವಾದರೆ ದೊಡ್ಡ ಪ್ರಮಾಣದಲ್ಲಿ ಪ್ರತಿಭಾ ಪಲಾಯನ ತಪ್ಪಿಸಬಹುದು

ಕುಮಟಾ:

ಜಿಲ್ಲೆಯ ಪ್ರತಿಭೆಗಳ ಆಗರವಾಗಿದ್ದು ವಿಶ್ವದ ಎಲ್ಲೆಡೆ ಬೆಳಗುತ್ತಿದ್ದಾರೆ. ಈ ಪ್ರತಿಭೆಗಳಿಗೆ ನಮ್ಮಲ್ಲೇ ಅವಕಾಶ ಸಿಗಬೇಕು. ಈ ಮೂಲಕ ಪ್ರತಿಭಾ ಪಲಾಯನ ತಡೆಯಬೇಕು ಎಂದು ಬಿಜೆಪಿ ಮುಖಂಡ ಡಾ. ಜಿ.ಜಿ. ಹೆಗಡೆ ಹೇಳಿದರು.ಪಟ್ಟಣದ ಮಣಕಿ ಮಹಾತ್ಮ ಗಾಂಧಿ ಮೈದಾನದಲ್ಲಿ ಗುರುವಾರ ರಾತ್ರಿ ತಾಂಡವ ಕಲಾನಿಕೇತನದ ವತಿಯಿಂದ ವೈಭವ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿರುವ ೫ ದಿನಗಳ ಕುಮಟಾ ವೈಭವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕುಮಟಾ ವೈಭವದಂತಹ ಕಾರ್ಯಕ್ರಮಗಳು ಕಲೆ, ಸಂಸ್ಕೃತಿಯ ರಕ್ಷಣೆಯ ಜತೆಗೆ ಕ್ಷೇತ್ರದ ಅಭಿವೃದ್ಧಿಯ ಚಿಂತನೆಗೂ ಗಟ್ಟಿ ವೇದಿಕೆಯಾಗಬೇಕು. ಬಹುಕಾಲದ ಬೇಡಿಕೆಯಾದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಜನಸಹಯೋಗವಿಲ್ಲದೇ ಯಶಸ್ವಿಯಾಗಿ ಮಾಡಲು ಸಾಧ್ಯವಿಲ್ಲ. ಸರ್ಕಾರ ದೊಡ್ಡ ಬಿಲ್ಡಿಂಗ್‌ ಕಟ್ಟಬಹುದು, ಆದರೆ ಅದಕ್ಕೆ ಬೇಕಾದ ಜನಸಂಪನ್ಮೂಲ ಒದಗಿಸುವುದು ಸವಾಲಿನ ಸಂಗತಿ ಎಂದರು.ಪ್ರವಾಸೋದ್ಯಮದ ಅವಕಾಶ ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ಉನ್ನತ ಗುಣಮಟ್ಟದ ಶೈಕ್ಷಣಿಕ ಕಲಿಕೆಗೆ ವ್ಯವಸ್ಥೆಗಳು ಸಜ್ಜಾಗಬೇಕು. ಘಟ್ಟದ ಮೇಲ್ಭಾಗ ಮತ್ತು ಕರಾವಳಿ ಭಾಗದಲ್ಲಿ ಪ್ರತ್ಯೇಕ ಸಾಫ್ಟ್‌ವೇರ್ ಪಾರ್ಕ್‌ಗಳು ನಿರ್ಮಾಣವಾದರೆ ದೊಡ್ಡ ಪ್ರಮಾಣದಲ್ಲಿ ಪ್ರತಿಭಾ ಪಲಾಯನ ತಪ್ಪಿಸಬಹುದು ಎಂದು ಹೇಳಿದರು.

ವೈಭವ ಸಮಿತಿ ಗೌರವಾಧ್ಯಕ್ಷ ರಾಜಗೋಪಾಲ ಅಡಿ ಮಾತನಾಡಿ, ಜಿಲ್ಲೆಯ ಹೊರಗೆ ಖ್ಯಾತಿ ಗಳಿಸಿರುವ ಇಲ್ಲಿನ ಪ್ರತಿಭೆ ಹಾಗೂ ಸಾಧಕರನ್ನು ಸೇರಿಸುವ ಉದ್ದೇಶವಿದೆ. ಕ್ಷೇತ್ರದ ಆಗುಹೋಗುಗಳ ಚಿಂತನೆ ಮಾಡಬೇಕಾದ ಅಗತ್ಯವಿದೆ ಎಂದರು.ತಾಂಡವ ಕಲಾನಿಕೇತನದ ಸಂಸ್ಥಾಪಕ ಮಂಜುನಾಥ ನಾಯ್ಕ, ಕಲೆ ಹಾಗೂ ಸಂಸ್ಕೃತಿಯೆರಡೂ ಮಾನವನ ಬದುಕಿನ ಅವಿಭಾಜ್ಯ ಅಂಗ. ಹಾಗೆಯೇ ಕುಮಟಾ ವೈಭವ ಕಾರ್ಯಕ್ರಮವೂ ಕಲೆ ಹಾಗೂ ಸಂಸ್ಕೃತಿ ಉಳಿಸಿ ಬೆಳೆಸುವ ಪ್ರಕ್ರಿಯೆಯ ಒಂದು ಭಾಗವಾಗಿ ಕಳೆದ ೬ ವರ್ಷಗಳಿಂದ ಜನಸಹಯೋಗದಿಂದ ನಡೆದುಕೊಂಡು ಬಂದಿದೆ ಎಂದರು.

ಜಿಪಂ ಮಾಜಿ ಸದಸ್ಯ ರತ್ನಾಕರ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿದರು. ಪುರಸಭೆ ಸದಸ್ಯರಾದ ಸಂತೋಷ ನಾಯ್ಕ, ಸೂರ್ಯಕಾಂತ ಗೌಡ, ಕಸಾಪ ತಾಲೂಕಾಧ್ಯಕ್ಷ ಸುಬ್ಬಯ್ಯ ನಾಯ್ಕ, ಸುಜಯ ಶೆಟ್ಟಿ, ಡಾ. ಸುಮಲತಾ ಮಣಕಿಕರ್, ಡಾ. ಪ್ರಣವ ಮಣಕಿಕರ, ಮಂಜುನಾಥ ಹರಿಕಂತ್ರ, ಎಸ್.ಜಿ. ಹೆಗಡೆ, ಯತಿರಾಜ, ಮಂಜುನಾಥ ನಾಯ್ಕ, ಕೃಷ್ಣಾನಂದ ಭಟ್ ಉಪ್ಲೆ ಇದ್ದರು. ಬಳಿಕ ಸುಗ್ಗಿಕುಣಿತ, ಯಕ್ಷಗಾನ, ಗುಮಟೆಪಾಂಗ, ಭರತನಾಟ್ಯ, ಎದೆತುಂಬಿ ಹಾಡುವೆನು ತಂಡದಿಂದ ಸಂಗೀತ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು.

Share this article