ಬಸವರಾಜ ಹಿರೇಮಠ
ಬಿಪಿಎಲ್ ಕಾರ್ಡ್ ಫಲಾನುಭವಿಗಳಾದರೆ ಪಡಿತರ ಸೇರಿದಂತೆ ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳು ಲಭ್ಯವೆಂದು ಅನರ್ಹರು ಸಹ ಬಿಪಿಎಲ್ ಕಾರ್ಡ್‌ಗಳನ್ನು ಮಾಡಿಕೊಂಡಿದ್ದು ಹೊಸದೇನಲ್ಲ. ಆಗಾಗ ಸರ್ಕಾರ ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಮಾಡಿಸಿದವರನ್ನು ಪತ್ತೆ ಹಚ್ಚುವ ಕೆಲಸ ಮಾಡಿದರೂ ಇನ್ನೂ ಅಂತಹ ಸಾಕಷ್ಟು ಬಿಪಿಎಲ್ ಕಾರ್ಡ್‌ದಾರರು ಉಳಿದುಕೊಂಡಿದ್ದಾರೆ. ಈ ಪೈಕಿ ಪಡಿತರ ಕಾರ್ಡ್ ಹೊಂದಿದ್ದರೂ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪದಾರ್ಥ ಪಡೆಯದ ಬಿಪಿಎಲ್ ಕಾರ್ಡ್‌ದಾರರ ವಿರುದ್ಧ ಸರ್ಕಾರ ಚಾಟಿ ಬೀಸಲು ಮುಂದಾಗಿದೆ.
ಸರ್ಕಾರದ ಈ ಕ್ರಮದಿಂದ ಜಿಲ್ಲೆಯಲ್ಲಿ 10709 ಬಿಪಿಎಲ್ ಕಾರ್ಡ್‌ಗಳು ರದ್ದಾಗುವ ಸಾಧ್ಯತೆ ಇದೆ. ಸತತ 6 ತಿಂಗಳ ಕಾಲ ಪಡಿತರ ಪದಾರ್ಥ ಪಡೆಯದವರ ಪಡಿತರ ಚೀಟಿ ರದ್ದತಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಈ ಕಾರ್ಯಕ್ಕಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿ ಕಳೆದ ಆರು ತಿಂಗಳಿಂದ ಪಡಿತರ ಪಡೆಯದವರ ಅಂಕಿ ಅಂಶವನ್ನು ಇಲಾಖೆ ಈಗಾಗಲೇ ಸಿದ್ಧಪಡಿಸಿದೆ.ಆಹಾರ ಇಲಾಖೆ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ ಒಟ್ಟು 3.87 ಲಕ್ಷ ಪಡಿತರ ಚೀಟಿದಾರರಿದ್ದಾರೆ. ಈ ಪೈಕಿ ಕೆಲವರು ಸರ್ಕಾರಿ ಸೌಲಭ್ಯ, ಆರೋಗ್ಯ ಸಂಬಂಧಿ ಶಸ್ತ್ರ ಚಿಕಿತ್ಸೆ ಉದ್ದೇಶಕ್ಕಾಗಿ ಬಿಪಿಎಲ್ ಚೀಟಿ ಪಡೆದಿದ್ದಾರೆ. ಇಂತಹವರು ಹಲವು ತಿಂಗಳಿಂದ ಪಡಿತರ ಪಡೆದಿಲ್ಲ. ಹೀಗಾಗಿ, ಸರ್ಕಾರ ಈ ರೀತಿಯ ಚೀಟಿಗಳ ಮಾಹಿತಿ ಕಲೆ ಹಾಕಿ ಬಂದ್ ಮಾಡಲು ಯೋಚಿಸಿದೆ. ಪಡಿತರ ಪಡೆಯದೆ ಇರುವುದನ್ನು ಮುಂದುವರಿಸಿದರೆ ಪಡಿತರ ಚೀಟಿ ರದ್ದಾಗುವುದರ ಜತೆಗೆ ಸರ್ಕಾರಿ ಸೌಲಭ್ಯಗಳೂ ಬಂದಾಗಲಿವೆ ಎನ್ನುವ ಭಯದಿಂದ ಕೆಲವರು ಆಗಾಗ ಪಡಿತರ ಪಡೆಯಲು ರೇಶನ್ ಅಂಗಡಿಗಳಿಗೂ ಹೋಗುತ್ತಿದ್ದಾರೆ. ಇಂತಹ ಕಾರ್ಡ್‌ದಾರರ ಮೇಲೂ ಇಲಾಖೆ ಹದ್ದಿನ ಕಣ್ಣು ಇಟ್ಟಿದೆ.
ಗ್ರಾಮೀಣ ಪ್ರದೇಶದಲ್ಲಿ ವಾರ್ಷಿಕ ₹12 ಸಾವಿರಗಿಂತ ಕಡಿಮೆ ಆದಾಯ ಹೊಂದಿರುವವರು, ನಗರ, ಪಟ್ಟಣದಲ್ಲಿ ವಾರ್ಷಿಕ ₹17 ಸಾವಿರಗಿಂತ ಕಡಿಮೆ ಆದಾಯ ಹೊಂದಿರುವವರು ಬಿಪಿಎಲ್ ಕಾರ್ಡ್ ಹೊಂದಲು ಅರ್ಹರು. ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರು ಬಿಪಿಎಲ್ ಕಾರ್ಡ್ ಪಡೆಯುವಂತಿಲ್ಲ ಎಂದಿದ್ದರೂ ಸಹ ಸುಳ್ಳು ಮಾಹಿತಿ ನೀಡಿ ಆದಾಯ ಪ್ರಮಾಣ ಪತ್ರ ಒದಗಿಸುವ ಮೂಲಕ ಸಿರಿವಂತರೂ, ಸಾಕಷ್ಟು ಆಸ್ತಿವಂತರೂ ಸಹ ಬಿಪಿಎಲ್ ಕಾರ್ಡ್ ಮಾಡಿಸಿದ್ದು ಸೋಜಿಗದ ಸಂಗತಿ.
ಬಾಕ್ಸ್..
ಧಾರವಾಡ - 2855
ಕಲಘಟಗಿ - 783
ನವಲಗುಂದ -807
ಅಣ್ಣಿಗೇರಿ -528