ರಾಯಚೂರು, ಮಾನ್ವಿ, ಸಿರವಾರದಲ್ಲಿ ಜೆಡಿಎಸ್ ಪಕ್ಷದಿಂದ ಬರ ವೀಕ್ಷಣೆ । ಆತ್ಮಹತ್ಯೆ ಮಾಡಿಕೊಂಡ ರೈತ ಬಸವರಾಜ ಕುಟುಂಬಕ್ಕೆ ಸಾಂತ್ವಾನಕನ್ನಡಪ್ರಭ ವಾರ್ತೆ ರಾಯಚೂರು/ಮಾನ್ವಿ
ಮಾಜಿ ಸಚಿವ ವೆಂಕಟರಾವ್ ನಾಡಗೌಡ ನೇತೃತ್ವದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ರಾಯಚೂರು ತಾಲೂಕಿನ ಗೋನಾಳ ಗ್ರಾಮದ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಹಾನಿಯ ಪರಿಶೀಲನೆ ನಡೆಸಿ, ನಂತರ ಆತ್ಮಹತ್ಯೆ ಮಾಡಿಕೊಂಡ ರೈತ ಬಸವರಾಜ ಕುಟುಂಬಕ್ಕೆ ಸಾಂತ್ವಾನ ಹೇಳಿ 20 ಸಾವಿರ ರು. ಸಹಾಯಧನ ವಿತರಿಸಿದರು.
ಬಳಿಕ ಸಿರವಾರ ತಾಲೂಕಿನ ಕಲ್ಲೂರು, ಮಾನ್ವಿ ಪಟ್ಟಣ, ಹಿರೇಕೊಟ್ನಿಕಲ್ ಹಾಗೂ ಪೋತ್ನಾಳದಲ್ಲಿರುವ ರೈತ ಸಂಪರ್ಕ ಕೇಂದ್ರಗಳ ವ್ಯಾಪ್ತಿಗೆ ಸೇರಿದಂತೆ ವಿವಿಧ ಗ್ರಾಮಗಳ ಜಮೀನುಗಳಿಗೆ ಭೇಟಿ ನೀಡಿ ಮಳೆಯ ಕೊರತೆಯಿಂದ ಹಾಳಾದ ತೊಗರಿ, ಹತ್ತಿ, ಮೆಣಸಿನಕಾಯಿ, ಜೋಳ, ಭತ್ತ, ಸೂರ್ಯಕಾಂತಿ ಬೆಳೆಗಳನ್ನು ವೀಕ್ಷಿಸಿ ರೈತರಿಂದ ಮಾಹಿತಿ ಪಡೆದರು.ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ವೆಂಕಟರಾವ್ ನಾಡಗೌಡ, ರಾಜ್ಯ ಸರ್ಕಾರವು ಬರ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದ್ದು, ಈಗ ಕೇಂದ್ರ ಸರ್ಕಾರದ ಮೇಲೆ ಗೂಬೆಕೂರಿಸುವ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದರು.
ಮಾಜಿ ಶಾಸಕ ವೆಂಕಟಪ್ಪ ನಾಯಕ ಮಾತನಾಡಿ, ಮಳೆಯ ಕೊರತೆಯಿಂದಾಗಿ ಬಹುತೇಕ ರೈತರು ಬೆಳೆಗಳನ್ನು ಕಳೆದುಕೊಂಡಿದ್ದಾರೆ. ಈಗಾಗಲೇ ಬಿತ್ತನೆ ಮಾಡಿದ ಬೆಳೆ ಚೆನ್ನಾಗಿ ಮೊಳಕೆ ಬಂದಿದೆಯಾದರೂ ಸರಿಯಾದ ಸಮಯಕ್ಕೆ ಮಳೆ ಬಾರದ ಕಾರಣ ಫಸಲು ಬರಬೇಕಾದ ಬೆಳೆ ಕೈ ಕೊಟ್ಟಿದೆ. ಆದ್ದರಿಂದ ಸರ್ಕಾರ ಕೂಡಲೇ ರೈತರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ ಮಹಾಂತೇಶ ಪಾಟೀಲ್, ಜಿಲ್ಲಾಧ್ಯಕ್ಷ ಎಂ. ವಿರುಪಾಕ್ಷಿ, ಮುಖಂಡರಾದ ಸಿದ್ದು ಬಂಡಿ, ನರಸಿಂಹ ನಾಯಕ್, ಎನ್. ಶಿವಶಂಕರ ವಕೀಲರು, ಲಕ್ಷ್ಮಿಪತಿ ಗಾಣದಾಳ್ ಸೇರಿದಂತೆ ವಿವಿಧ ಘಟಕಗಳ ನಾಯಕರು, ಕಾರ್ಯಕರ್ತರು ಇದ್ದರು.
17ಕೆಪಿಆರ್‌ಸಿಆರ್01: