ಕ್ಷೇತ್ರದಲ್ಲಿ ಮನೆ ಮಗನಾಗಿ ಶಾಸಕ ಎಚ್.ಟಿ.ಮಂಜು ಕೆಲಸ ಮಾಡುತ್ತಿದ್ದಾರೆ. ನನ್ನ ಮನಸಲ್ಲಿ ಮಂಜಣ್ಣ ಇದ್ದಾರೆ. ಮಂಜಣ್ಣನ ಮನಸಲ್ಲಿ ನಾನು ಇದ್ದೀನಿ. ಮುಂದಿನ 2028ರ ಚುನಾವಣೆ ಜೆಡಿಎಸ್‌ನ ಭವಿಷ್ಯದ ಚುನಾವಣೆಯಲ್ಲ. ಕರ್ನಾಟಕದ 7.5 ಕೋಟಿ ಭವಿಷ್ಯ ನಿರ್ಧಾರವಾಗುವ ಚುನಾವಣೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಮುಂದಿನ ವಿಧಾನಸಭಾ ಚುನಾವಣೆ ಶಾಸಕ ಎಚ್.ಟಿ.ಮಂಜು ಅವರ ಮುಂದಾಳತ್ವದಲ್ಲಿ ನಡೆಯಲಿದೆ. ಕ್ಷೇತ್ರದ ಮುಖಂಡರು, ಕಾರ್ಯಕರ್ತರು ಅವರ ಜೊತೆಯಲ್ಲಿ ನಿಲ್ಲುತ್ತೀರಿ ಎಂಬ ಆತ್ಮವಿಶ್ವಾಸವಿರುವುದಾಗಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ಶಾಸಕ ಎಚ್.ಟಿ.ಮಂಜು ಅವರ 51ನೇ ಹುಟ್ಟುಹಬ್ಬದ ಅಂಗವಾಗಿ ಮಂಗಳವಾರ ಜೆಡಿಎಸ್ ಕಾರ್ಯಕರ್ತರಿಂದ ಎಂ.ಟಿ.ಮಂಜು ಅದ್ಧೂರಿ ಅಭಿಮಾನೋತ್ಸವ ಉದ್ಘಾಟಿಸಿ ಮಾತನಾಡಿದರು.
ಯಾವುದೇ ಕ್ಷೇತ್ರದಲ್ಲಿ ಪರ, ವಿರೋಧ ಸಾಮಾನ್ಯ. ಕಾರ್ಯಕರ್ತರು 2028ಕ್ಕೆ ರಾಜ್ಯದಲ್ಲಿ ಜನಪರ ಸರ್ಕಾರ ಮಾಡಲು ಕುಮಾರಣ್ಣ ಹಾಗೂ ಮಂಜಣ್ಣನ ಪರವಾಗಿ ಕಾರ್ಯಕರ್ತರು ಸಂಘಟನೆಗೆ ಕಾರ್ಯನ್ಮುಖರಾಗಬೇಕು. ಯುವ ಕಾರ್ಯಕರ್ತನಾಗಿ ನಾನು ನಿಮ್ಮ ಜತೆ ಇರುತ್ತೇನೆ. ಅವರಿಗಾಗಿ ಕಾರ್ಯಕರ್ತರು ಕೆಲಸ ಮಾಡಬೇಕಾಗಿ ಕಾರ್ಯಕರ್ತರಿಗೆ ಕರೆ ನೀಡಿದರು.
ಕ್ಷೇತ್ರದಲ್ಲಿ ಮನೆ ಮಗನಾಗಿ ಶಾಸಕ ಎಚ್.ಟಿ.ಮಂಜು ಕೆಲಸ ಮಾಡುತ್ತಿದ್ದಾರೆ. ನನ್ನ ಮನಸಲ್ಲಿ ಮಂಜಣ್ಣ ಇದ್ದಾರೆ. ಮಂಜಣ್ಣನ ಮನಸಲ್ಲಿ ನಾನು ಇದ್ದೀನಿ. ಮುಂದಿನ 2028ರ ಚುನಾವಣೆ ಜೆಡಿಎಸ್‌ನ ಭವಿಷ್ಯದ ಚುನಾವಣೆಯಲ್ಲ. ಕರ್ನಾಟಕದ 7.5 ಕೋಟಿ ಭವಿಷ್ಯ ನಿರ್ಧಾರವಾಗುವ ಚುನಾವಣೆ ಎಂದರು.
ಮುಂದಿನ ಚುನಾವಣೆಯಲ್ಲಿ ಕ್ಷೇತ್ರದ ವಿಷಯದಲ್ಲಿ ಮಾಧ್ಯಮಗಳಲ್ಲಿ ಅಪಪ್ರಚಾರವಾಗಿತು. ಆ ಬಗ್ಗೆ ನಾನು ಏನು ಅಂತಾ ಹೇಳುವುದಿಲ್ಲ. ಕಾರ್ಯಕರ್ತರು ಆ ವಿಷಯಕ್ಕೆ ಕಿವಿಗೊಡುವ ಅವಶ್ಯಕತೆಯಿಲ್ಲ. ನಿಮ್ಮೆಲ್ಲರಿಗಿಂತ ಹೆಚ್ಚಾಗಿ ಶಾಸಕ ಏನು ಎಂಬುದು ನನಗೆ ಚನ್ನಾಗಿ ಗೊತ್ತಿದೆ ಎಂದರು.
ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಸಿಎಂ ಕುಮಾರಣ್ಣನಿಗೆ ಕ್ಷೇತ್ರದ ಶಾಸಕರ ಮೇಲೆ ವಿಶ್ವಾಸವಿದೆ. ನಾನು ಆ ಪಕ್ಷ, ಈ ಪಕ್ಷ ಅಂತಾ ಹೇಳೋಕೆ ಹೋಗೋದಿಲ್ಲ. ಇತ್ತೀಚಿನ ಪ್ರಸ್ತುತ ರಾಜಕಾರಣದಲ್ಲಿ ನಿಷ್ಠಾವಂತರು, ಪ್ರಾಮಾಣಿಕರು ಸಿಗುವುದು ತುಂಬಾ ಕಷ್ಟ. ಶಾಸಕರು ಪಕ್ಷಕ್ಕೆ, ನಾಯಕರಿಗೆ ನಿಷ್ಠೆ ಆಗಿದ್ದಾರೆ ಎಂದರು.
ಎಚ್.ಟಿ.ಮಂಜು ಪ್ರಾಮಾಣಿಕರು, ನಿಷ್ಠಾವಂತರಾಗಿದ್ದಾರೆ. ಇಂತಹ ಯುವ ನಾಯಕರಿಗೆ ರಾಜ್ಯದ 2028ರ ಚುನಾವಣೆಗೆ ಆದ್ಯತೆ ನೀಡಲಾಗುತ್ತದೆ. ಜೊತಗೆ ಸ್ಥಳೀಯ ಚುನಾವಣೆಯಲ್ಲೂ ಪಕ್ಷಕ್ಕಾಗಿ ದುಡಿಯುತ್ತಿರುವ ಯುವಕರಿಗೆ ಆದ್ಯತೆ ನೀಡಲು ಕುಮಾರಣ್ಣ ತೀರ್ಮಾನಿಸಿದ್ದಾರೆ ಎಂದರು.
ಕಾಂಗ್ರೆಸ್ ಸರ್ಕಾರದಲ್ಲಿ ಮೂರು ವರ್ಷದಿಂದ ಕ್ಷೇತ್ರಕ್ಕೆ ನೀಡುತ್ತಿರುವ ಅನುದಾನದ ಕೊರತೆಯ ನಡುವೆಯೂ ಮಂಜು ಅವರು ಆದಷ್ಟು ಕೆಲಸಗಳನ್ನು ಮಾಡುತ್ತಿದ್ದಾರೆ. ಗ್ಯಾರಂಟಿ ಕೊಡುವ ನೆಪದಲ್ಲಿ ಸರ್ಕಾರ ಕ್ಷೇತ್ರದ ಗ್ರಾಮೀಣ ಪ್ರದೇಶದ ಮೂಲಸೌಕರ್ಯ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಳ್ಳುವಂತೆ ಮಾಡಿದೆ ಎಂದು ದೂರಿದರು.
ಮೊದಲ ಬಾರಿಗೆ ಶಾಸಕ ಎಚ್.ಟಿ.ಮಂಜು ಮೇಲೆ ನಿರೀಕ್ಷೆಯನ್ನು ಇರಿಸಿದ್ದೀರಿ. ಜೊತಗೆ ಒತ್ತಡವನ್ನು ಹಾಕಿದ್ದೀರಿ. ಸರ್ಕಾರ ಅನುದಾನ ಬಿಡುಗಡೆ ಮಾಡಿದರೆ ಅಭಿವೃದ್ಧಿ ಮಾಡಲು ಸಾಧ್ಯ. ಈ ನಡುವೆ ಎಚ್.ಟಿ.ಮಂಜು ಪಕ್ಷಕಾಗಿ, ಕ್ಷೇತ್ರಕ್ಕಾಗಿ ಅವರಿಗೆ ಸಿಕ್ಕಿರುವ ಅವಕಾಶವನ್ನು ಕ್ಷೇತ್ರದ ಜನತೆ ಜತೆ ನಿಂತು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ವೈಯಕ್ತಿಕವಾಗಿ ಕೂಡ ಮನೆ ಮಗನಾಗಿ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಇದಕ್ಕೂ ಮುನ್ನ ಪಟ್ಟಣದ ಮುಖ್ಯ ಬೀದಿಯಲ್ಲಿ ಮೆರವಣಿಗೆಯಲ್ಲಿ ತಾಲೂಕು ರೈತ ಮೋರ್ಚಾ ಅಧ್ಯಕ್ಷ ನಂಜಪ್ಪ ನೇತೃತ್ವದಲ್ಲಿ ಬೃಹತ್ ಬೆಲ್ಲದ ಹಾರ ಹಾಕಿ ಶಾಸಕ ಎಚ್.ಟಿ.ಮಂಜು ಅವರನ್ನು ಸ್ವಾಗತಿಸಲಾಯಿತು. ಪಟ್ಟಣದ ಮುಖ್ಯ ರಸ್ತೆಗಳಲ್ಲಿ ತೆರದ ವಾಹನದಲ್ಲಿ ಶಾಸಕರನ್ನು ಅದ್ಧೂರಿ ಮೆರವಣಿಗೆ ಮೂಲಕ ವೇದಿಕೆ ತನಕ ಕರತರಲಾಯಿತು.
ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯ ವಕ್ತಾರ ಅಶ್ವಿನ್ ಕುಮಾರ್, ಶ್ರವಣಬೆಳಗೊಳ ಶಾಸಕ ಸಿ.ಎನ್.ಬಾಲಕೃಷ್ಣ, ಹುಣಸೂರು ಶಾಸಕ ಹರೀಶ್‌ಗೌಡ, ಹಾಸನ ಶಾಸಕ ಸ್ವರೂಪ್, ನಾಗಮಂಗಲ ಕ್ಷೇತ್ರದ ಮಾಜಿ ಶಾಸಕ ಸುರೇಶ್ ಗೌಡ, ಮನ್ಮುಲ್ ಮಾಜಿ ಅಧ್ಯಕ್ಷ ರಾಮಚಂದ್ರ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ ರಮೇಶ್, ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ರವಿ ಕಂಸಾಗರ, ಕಡೂರು ಜೆಡಿಎಸ್ ಮುಖಂಡ ಶೇಖರ್‌ಗೌಡ, ತಾಲೂಕು ಜೆಡಿಎಸ್ ಅಧ್ಯಕ್ಷ ಮೋಹನ್, ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷ ರೇಖಾ ಲೋಕೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಬಲದೇವ್, ಜೆಡಿಎಸ್ ರಾಜ್ಯ ವಕ್ತಾರ ಎ.ಆರ್.ರಘು, ದಿಶಾ ಸಮಿತಿ ಸದಸ್ಯ ನರಸನಾಯಕ, ಹುಬ್ಬನಹಳ್ಳಿ ಬಲರಾಮು, ತಾಲೂಕಿನ ಜೆಡಿಎಸ್ ಮುಖಂಡರು ಸೇರಿದಂತೆ ಸಾವಿರಾರು ಜೆಡಿಎಸ್ ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.