ಲೋಕಸಭಾ ಚುನಾವಣೆ ಸೋಲನ್ನು ಸ್ವೀಕರಿಸುತ್ತೇವೆ. ಈ ಸೋಲಿನಿಂದ ಕಾರ್ಯಕರ್ತರು ವಿಚಲಿತರಾಗದೇ ಮುಂಬರುವ ತಾಪಂ, ಜಿಪಂ, ಎಪಿಎಂಸಿ ಚುನಾವಣೆ, ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆಗೆ ಸಿದ್ಧಗೊಳ್ಳಬೇಕು.
ಹಾವೇರಿ: ಲೋಕಸಭಾ ಚುನಾವಣೆ ಸೋಲನ್ನು ಸ್ವೀಕರಿಸುತ್ತೇವೆ. ಈ ಸೋಲಿನಿಂದ ಕಾರ್ಯಕರ್ತರು ವಿಚಲಿತರಾಗದೇ ಮುಂಬರುವ ತಾಪಂ, ಜಿಪಂ, ಎಪಿಎಂಸಿ ಚುನಾವಣೆ, ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆಗೆ ಸಿದ್ಧಗೊಳ್ಳಬೇಕು. ಸೋಲಿಗೆ ಧೃತಿಗೆಡದೇ ಪಕ್ಷ ಸಂಘಟನೆಗೆ ಮುಂದಾಗಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಕಾರ್ಯಕರ್ತರಿಗೆ ಕರೆ ನೀಡಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಕಾರ್ಯಕರ್ತರು ಬೂತ್ ಮಟ್ಟದಿಂದ ಸಂಘಟನೆ ಬಲಪಡಿಸಿ ಸರ್ಕಾರದ ಸಾಧನೆಗಳ ಪ್ರಚಾರ ಕೈಗೊಳ್ಳಬೇಕು. ಪಕ್ಷದ ಜಿಲ್ಲಾ ಘಟಕವನ್ನು ಹೊಸದಾಗಿ ರಚಿಸಬೇಕಾಗಿದೆ. ನಿಷ್ಕ್ರಿಯರನ್ನು ತೆಗೆದು ಹಾಕಿ ಸಕ್ರಿಯ ಕಾರ್ಯಕರ್ತರನ್ನು, ಪದಾಧಿಕಾರಿಗಳನ್ನು ಮುಂದಿನ ದಿನಗಳಲ್ಲಿ ಅಣಿಗೊಳಿಸಬೇಕಿದೆ.
ಶ್ರಾವಣ ಮಾಸದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತದೆ ಎಂದರು. ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆಗೆ ಪಕ್ಷದ ನಾಯಕರ ಹೆಸರು ಹೇಳಿಕೊಂಡು ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುವ ಕಾರ್ಯವನ್ನು ಕೆಲವರು ಮಾಡುತ್ತಿದ್ದಾರೆ. ಪಕ್ಷಕ್ಕಾಗಿ ದುಡಿದವರಿಗೆ ಪಕ್ಷ ಟಿಕೆಟ್ ನೀಡುತ್ತದೆ. ಪಕ್ಷದ ಶಿಸ್ತನ್ನು ಕಾಪಾಡಿಕೊಂಡು ಸಂಘಟನೆ ಮಾಡಲು ತೊಂದರೆಯಿಲ್ಲ.
ಧಾರವಾಡ ಲೋಕಸಭಾ ೮೫೦೦ ಲೀಡ್ ಕೊಟ್ಟಿರುವ ಶಿಗ್ಗಾಂವಿ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.ಸಿಎಂ, ಡಿಸಿಎಂ ಹೇಳಿದ್ದಾರೆ ಎಂಬ ಪ್ರಚಾರ ನಡೆಸಿ ನಾಯಕರ ಹೆಸರಿನ ದುರುಪಯೋಗ ನಡೆದಿದೆ. ಟಿಕೆಟ್ ನೀಡುವ ಕುರಿತ ಪಕ್ಷ ನಿರ್ಧರಿಸುತ್ತದೆ. ನಾನೂ ಆಕಾಂಕ್ಷಿ ಇದ್ದೇನೆ. ಪಕ್ಷದ ತೀರ್ಮಾನ ಅಂತಿಮ. ಲೋಕಸಭಾ ಚುನಾವಣೆ ಸೋಲು ಬೇಸರ ತರಿಸಿದೆ. ಇದಕ್ಕಾಗಿ ಆತ್ಮಾವಲೋಕನ ಸಭೆ ಮಂಗಳವಾರ ರಾಣಿಬೆನ್ನೂರ, ಹಾನಗಲ್ಲ, ನಂತರ ಬುಧವಾರ ಹಿರೇಕೆರೂರ, ಭಾನುವಾರ ಹಾವೇರಿಯಲ್ಲಿ ನಡೆಯಲಿದೆ. ಸೋಲಿನ ಹೊಣೆಯನ್ನು ಸಾಮೂಹಿಕವಾಗಿ ವಹಿಸಿಕೊಳ್ಳುತ್ತೇವೆ. ನಮ್ಮ ಅತಿಯಾದ ವಿಶ್ವಾಸವೇ ಸೋಲಿಗೆ ಕಾರಣ ಎನ್ನಬಹುದು. ಎಲ್ಲ ಶಾಸಕರು, ಸಚಿವರು ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದಾರೆ ಎಂದರು.
ಶಿಗ್ಗಾಂವಿ ಟಿಕೆಟ್: ಪಕ್ಷದ ತೀರ್ಮಾನ ಅಂತಿಮ: ಸವಣೂರಿನ ದೊಡ್ಡ ಹುಣಸೇ ಕಲ್ಮಠದ ಶ್ರೀಗಳಿಂದಲೂ ಶಿಗ್ಗಾಂವಿ-ಸವಣೂರ ಕೈಟಿಕೆಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈ ಕುರಿತು ಜಿಲ್ಲಾಧ್ಯಕ್ಷನಾಗಿ ಅವರ ಜೊತೆಗೆ ಮಾತುಕತೆ ನಡೆಸಲಾಗಿದೆ. ವಿಧಾನಸಭಾ ಚುನಾವಣಾ ವ್ಯಾಪ್ತಿಯ ಕುರಿತು ತಿಳಿಸಿದ್ದೇನೆ. ಇನ್ನು ಹಲವರು ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಇದರಲ್ಲಿ ಪಕ್ಷದ ತೀರ್ಮಾನವೇ ಅಂತಿಮ ಎಂದು ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.