ಬಂಗಾರಪೇಟೆ: ಶಾಸಕ ಎಸ್.ಎನ್ ನಾರಾಯಣಸ್ವಾಮಿಗೆ ಸಚಿವ ಸ್ಥಾನ ದೊರಕಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಶಾಂತಿನಗರದ ವೆಂಕಟೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ೧೦೧ ಈಡುಗಾಯಿ ಒಡೆದರು.
ಈ ವೇಳೆ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಮಾತನಾಡಿ, ಬಂಗಾರಪೇಟೆ ಕ್ಷೇತ್ರದ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಮೂರನೇ ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಗೆಲುವನ್ನು ಸಾಧಿಸಿದ್ದಾರೆ. ಈ ತಿಂಗಳಲ್ಲಿ ರಾಜ್ಯದ ಸಂಪುಟ ವಿಸ್ತರಣೆ ಆಗುತ್ತಿದ್ದು, ಶಾಸಕರನ್ನು ಮಂತ್ರಿಯನ್ನಾಗಿ ಮಾಡಬೇಕು ಎಂದು ವೆಂಕಟೇಶ್ವರಸ್ವಾಮಿಗೆ ಪೂಜೆಯನ್ನು ಸಲ್ಲಿಸಿ ಈಡುಗಾಯಿ ಒಡೆಯುವ ಮೂಲಕ ದೇವರಲ್ಲಿ ಪ್ರಾರ್ಥನೆಯನ್ನು ಮಾಡಿದ್ದೇವೆ. ಕೋಲಾರ ಜಿಲ್ಲೆಯಿಂದ ೪ ಜನ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದು, ಈಗಿನ ಸಂಪುಟದಲ್ಲಿ ಜಿಲ್ಲೆಗೆ ಯಾವುದೇ ಪ್ರಾತಿನಿಧ್ಯ ಸಿಕ್ಕಿಲ್ಲ. ಆದ್ದರಿಂದ ಈ ಬಾರಿ ಶಾಸಕ ಎಸ್.ಎನ್ ನಾರಾಯಣಸ್ವಾಮಿಗೆ ಮಂತ್ರಿ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಹೈಕಮಾಂಡ್‌ಗಳಾದ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿಗೆ ಮನವಿಯನ್ನು ಸಲ್ಲಿಸಲು ಮುಂದಾಗಿದ್ದೇವೆ. ಈಗಾಗಲೇ ಶಾಸಕರ ಜೊತೆ ಸಿಎಂ, ಡಿಸಿಎಂ ಎಐಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿ ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂದು ಮನವಿ ಮಾಡಿದ್ದೇವೆ. ಇದರೊಟ್ಟಿಗೆ ಪುರಸಭೆಯಿಂದ ಒಂದು ಠರಾವು ಹೊರಡಿಸಿ ಸಚಿವ ಸ್ಥಾನಕ್ಕೆ ಒತ್ತಾಯ ಮಾಡುತ್ತೇವೆ. ಶಾಸಕರು ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಕೈಗೊಂಡು ಮಾದರಿ ಕ್ಷೇತ್ರವನ್ನಾಗಿ ಮಾಡಿದ್ದಾರೆ ಎಂದರು.ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮುನಿರಾಜು, ಪುರಸಭೆ ಅಧ್ಯಕ್ಷ ಗೋವಿಂದ, ಉಪಾಧ್ಯಕ್ಷೆ ಚಂದ್ರವೇಣಿ ಮಂಜುನಾಥ, ಸದಸ್ಯರಾದ ವೆಂಕಟೇಶ್, ವಸಂತ್, ಮುಖಂಡರಾದ ಸುಹೇಲ್, ಅ.ನಾ ಹರೀಶ್, ಕರವೇ ಚಲಪತಿ, ಎಸ್.ನಾರಾಯಣ, ಹರೀಶ್ ಕುಮಾರ್, ಎಂಎಂ.ಮಂಜುನಾಥ ಇದ್ದರು.