ಕನ್ನಡಪ್ರಭ ವಾರ್ತೆ ಸೊರಬ
ತಾಲೂಕಿನ ಉಳವಿ ಹೋಬಳಿಯ ಕಾನಹಳ್ಳಿ, ಮೈಸಾವಿ, ಕಣ್ಣೂರು ಸುತ್ತಮುತ್ತಲಿನ ಗ್ರಾಮಗಳ ರೈತರ ಜಮೀನುಗಳಲ್ಲಿ ಕಾಡಾನೆಗಳು ಸಂಚರಿಸುತ್ತಿವೆ ಎನ್ನುವ ಮಾಹಿತಿ ಮೇರೆಗೆ ಡಿ.೨ರಂದು ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯೋನ್ಮುಖರಾಗಿ ಆನೆಗಳ ಹುಡುಕಾಟದಲ್ಲಿ ತೊಡಗಿದ್ದರು. ಡ್ರೋಣ್ ಕ್ಯಾಮೆರಾ ಕಣ್ಣಿನಲ್ಲಿ ಸುಮಾರು ೬ ಆನೆಗಳ ಹಿಂಡು ಸೆರೆಯಾಗಿವೆ ಎಂದು ತಿಳಿದು ಬಂದಿದ್ದು, ಎಸಿಎಫ್ ಸುರೇಶ್ ಕಲ್ಲಳ್ಳಿ, ಆರ್‌ಎಫ್‌ಒ ಶ್ರೀಪಾದ ನಾಯ್ಕ, ಎಆರ್‌ಎಫ್‌ಒ ಯೋಗರಾಜ್, ರಾಮಪ್ಪ, ಪರಶುರಾಮ್ ಸೇರಿದಂತೆ ಸಕ್ರೆಬೈಲು ಬಿಡಾರದ ಆನೆ ಮಾವುತರು ಆನೆಗಳ ಹಿಂಡನ್ನು ಕಾಡಿನೊಳಗೆ ಓಡಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.
ಕಳೆದ ಎರಡು ದಿನಗಳಿಂದ ತಾಲೂಕಿನ ಕಾನಹಳ್ಳಿ, ಕಣ್ಣೂರು ಮತ್ತು ಮೈಸಾವಿ ಗ್ರಾಮಗಳ ಸುತ್ತಮುತ್ತಲಿನಲ್ಲಿ ಬೆಳೆ ಕಟಾವು ಮಾಡಿದ ರೈತರ ಜಮೀನಿನಲ್ಲಿ ಆನೆಗಳು ಸಂಚರಿಸಿರುವ ಬಗ್ಗೆ ಹೆಜ್ಜೆ ಗುರುತುಗಳು ಮತ್ತು ಲದ್ದಿ ಲಭ್ಯವಾಗಿತ್ತು. ಡಿ. ೨ರ ರಾತ್ರಿ ಕೂಡಾ ಕಾನಹಳ್ಳಿ, ಕೈಸೋಡಿ ಗ್ರಾಮಗಳ ರೈತರ ಜಮೀನುಗಳಿಗೆ ದಾಳಿ ನಡೆಸಿರುವ ಆನೆಗಳ ಹಿಂಡು ಕಾನಹಳ್ಳಿ ಗ್ರಾಮದ ಚೌಡಪ್ಪ ಕೆರೋಡಿ ಎನ್ನುವವರ ಜಮೀನಿನಲ್ಲಿ ಕಟಾವು ಮಾಡಿ ತೂರಿಟ್ಟ ಸುಮಾರು ೪ ಕ್ವಿಂಟಾಲ್ ಭತ್ತವನ್ನು ಹಾಳು ಮಾಡಿವೆ ಅಲ್ಲದೇ ಕುಸಗೋಡು ಮಂಜುಪ್ಪ, ಕುಸಗೋಡು ನಾರಾಯಣ ಅವರ ಅಡಿಕೆ ತೋಟಕ್ಕೆ ನುಗ್ಗಿ ೩೦ ಅಡಿಕೆ ಗಿಡ ಮತ್ತು ಹನಿ ನೀರಿಗಾಗಿ ಅಳವಡಿಸಿದ್ದ ಸುಮಾರು ೪೫ ಸಾವಿರ ರೂ. ಮೌಲ್ಯದ ಜಟ್ ಪೈಪ್‌ಗಳನ್ನು ತುಳಿದು ಹಾನಿಗೊಳಿಸಿವೆ ಎಂದು ತೋಟದ ಮಾಲೀಕರು ತಿಳಿಸಿದ್ದಾರೆ.ಕಳೆದ ೨-೩ ದಿನಗಳಿಂದ ಉಳವಿ ಹೋಬಳಿಯ ಪತ್ರೆಸಾಲು, ಕರ್ಜಿಕೊಪ್ಪ, ಕಣ್ಣೂರು, ಕಾನಹಳ್ಳಿ, ಕೈಸೋಡಿ, ಮೈಸಾವಿ ಗ್ರಾಮಗಳಲ್ಲಿ ಸಂಚರಿಸಿ ಕೂಗಳತೆಯ ದೂರದಲ್ಲಿ ಬೀಡು ಬಿಟ್ಟಿರುವ ಆನೆಗಳ ಹಿಂಡು ಈಗಾಗಲೇ ಗ್ರಾಮಗಳ ಪಕ್ಕದಲ್ಲಿಯೇ ಇರುವ ಹೊಲ-ಗದ್ದೆ, ತೋಟಗಳ ಮೇಲೆ ದಾಳಿ ನಡೆಸಿದ್ದು, ಊರೊಳಗೆ ಬಂದು ಮನೆಗಳಿಗೆ ನುಗ್ಗಿ ಪ್ರಾಣ ಹಾನಿ ಮಾಡಬಹುದು ಎನ್ನುವ ಭಯದ ವಾತಾವರಣದಲ್ಲಿ ಗ್ರಾಮಸ್ಥರಿದ್ದಾರೆ.
ಕಾನಹಳ್ಳಿ, ಕೈಸೋಡಿ ಸುತ್ತಮುತ್ತಲಿನ ಕಾಡು ಪ್ರದೇಶದಲ್ಲಿ ಡ್ರೋನ್ ಮೂಲಕ ೬ ಆನೆಗಳು ಕಂಡು ಬಂದಿದ್ದು, ಶ್ರೀ ವೀರಭದ್ರೇಶ್ವರ ದೇವಸ್ಥಾನದ ಮುಖಾಂತರ ಸಂಚರಿಸಿ ಕಣ್ಣೂರು ಗುಡ್ಡದ ಕಾಡಿನಲ್ಲಿ ಬೀಡು ಬಿಟ್ಟಿವೆ ಎಂಬ ಮಾಹಿತಿ ಇದೆ. ಈಗಾಗಲೇ ೩-೪ ಕಿ.ಮೀ. ಕ್ರಯಿಸಿರುವ ಆನೆಗಳು ಬಂದ ದಾರಿಯಲ್ಲೇ ಮರಳುತ್ತಿವೆ. ಹಾಗಾಗಿ ಸಾಗರ ತಾಲೂಕಿನ ಮುಳುಕೇರಿ ಗ್ರಾಮದ ಕಡೆ ಸಾಗುವ ಸಾಧ್ಯತೆ ಇದೆ. ಮುನ್ನೆಚ್ಚರಿಕೆ ಕ್ರಮವಾಗಿ ಸಂಜೆ ಪಟಾಕಿ ಸಿಡಿಸಿ ಗ್ರಾಮಗಳ ಹೊಲ-ಗದ್ದೆಗಳಿಗೆ ನುಗ್ಗದಂತೆ ನೋಡಿಕೊಳ್ಳಲಾಗುವುದು.ಯೋಗರಾಜ್ ಉಪ ವಲಯ ಅರಣ್ಯಾಧಿಕಾರಿ, ಸೊರಬ.