ಮೂಲ್ಕಿ: ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನ ಸಮೀಪ ಸಮುದ್ರ ತೀರದಲ್ಲಿ ವಿಶೇಷವಾಗಿ ನಿರ್ಮಿಸಿದ ವೇದಿಕೆಯಲ್ಲಿ ಭಾನುವಾರ ರಾತ್ರಿ ಯುವ ಬ್ರಿಗೇಡ್ ಸ್ಥಾಪಕಾಧ್ಯಕ್ಷ ಚಕ್ರವರ್ತಿ ಸೂಲಿಬೆಲೆ ಅವರಿಂದ ಗಂಗೆಗೆ ನುಡಿ ನಮನ, ಅದ್ಧೂರಿ ವೈಭವದ ಗಂಗಾರತಿ ಮೂಲಕ ವೈಭವದ ಬ್ರಹ್ಮಕಲಶೋತ್ಸವ ಸಂಪನ್ನಗೊಂಡಿತು.ಪುರಾಣ ಕಥೆಯ ಪ್ರಕಾರ ಭಗವತಿಯು ಸಾಗರದಿಂದ ಎದ್ದು ಬಂದ ನೆನಪಿಗಾಗಿ ಕಡಲ ತಡಿಯಲ್ಲಿ ಗಂಗಾರತಿ ಆಯೋಜಿಸಿದ್ದು 500 ವರುಷಗಳಿಂದ ಕಾಯುತ್ತಿದ್ದ ಅಯೋಧ್ಯೆ, ಕಾಶಿಯಲ್ಲಿ ದೇವಸ್ಥಾನಗಳು ಎದ್ದು ನಿಂತಂತೆ ನಮ್ಮ ದೇಶ ಎದ್ದು ನಿಂತಿದೆ. ವಿಶ್ವದ ಶ್ರೀಮಂತ ದೇಶಗಳಲ್ಲಿ ನಾಲ್ಕನೇ ಸ್ಥಾನವನ್ನು ಹೊಂದಿದ್ದು ಇನ್ನಾರು ತಿಂಗಳಲ್ಲಿ ಮೂರನೇ ಸ್ಥಾನವನ್ನು ಆರ್ಥಿಕತೆಯಲ್ಲಿ ಹೊಂದಲಿದ್ದೇವೆ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಗಂಗೆಗೆ ನುಡಿ ನಮನ ಸಲ್ಲಿಸಿ ಹೇಳಿದರು.
ಸಮುದ್ರ ತಟದ ಹತ್ತು ವೇದಿಕೆ ಗಳಲ್ಲಿ ಗಂಗಾರತಿ ನಡೆಯಿತು. ಸಹಸ್ರಾರು ಮಂದಿ ಗಂಗಾರತಿ ಕಣ್ತುಂಬಿಕೊಂಡರು. ಬಳಿಕ ‘ವಂದೇ ಮಾತರಂ’, ‘ಬೋಲೋ ಭಾರತ್ ಬೋಲೋ’, ‘ಭಾರತ್ ಮಾತಾ ಕೀ ಜೈ’ ಒಕ್ಕೊರೊಲ ಕೂಗಿನೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ದೇವಸ್ಥಾನದ ಮೊಕ್ತೇಸರ ಚಂದ್ರಶೇಖರ ಬೆಲ್ಚಡ, ಮುಂಬೈ ಸಮಿತಿಯ ವೇದ ಪ್ರಕಾಶ್ ಶ್ರಿಯಾನ್, ನರೇಶ್ ಶೆಣೈ ಮಂಗಳೂರು ಹಾಗೂ ಪದಾಧಿಕಾರಿಗಳು ಇದ್ದರು. ಧಾರ್ಮಿಕ ಸಭೆ ಸಮಾರೋಪ: ಹಿಂದೂ ಸಮಾಜದಲ್ಲಿ ಒಗ್ಗಟ್ಟಿನ ಕೊರತೆಯಿದ್ದು ಧಾರ್ಮಿಕ ಕೇಂದ್ರಗಳಲ್ಲಿ ನಡೆಯುವ ಬ್ರಹ್ಮಕಲಶೋತ್ಸವದಂತಹ ಕಾರ್ಯಕ್ರಮಗಳ ಮೂಲಕ ಸಮಾಜವನ್ನು ಒಗ್ಗೂಡಿಸುವ ಕಾರ್ಯವಾಗಬೇಕು ಎಂದು ಶಾಸಕ ಡಾ. ಭರತ್ ಶೆಟ್ಟಿ ಕರೆ ನೀಡಿದ್ದಾರೆ.ಸಸಿಹಿತ್ಲು ಶ್ರೀ ಭಗವತಿ ಕ್ಷೇತ್ರದಲ್ಲಿ ಭಾನುವಾರ ನಡೆದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಅಧ್ಯಕ್ಷ ಸ್ಥಾನದಿಂದ ಮಾತನಾಡಿ, ಭಗವತಿಯ ಶಕ್ತಿಯಿಂದ ಹಾಗೂ ಇಲ್ಲಿನ ಎಲ್ಲರ ಸಹಕಾರದಿಂದ ಕ್ಷೇತ್ರ ಅಭಿವೃದ್ಧಿಗೊಂಡಿದ್ದು, ಅಭಿವೃದ್ದಿಯ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕೂಡ ಸಹಕಾರ ನೀಡುವುದಾಗಿ ತಿಳಿಸಿದರು. ಕ್ಷೇತ್ರದ ಅನುವಂಶಿಕ ಮೊಕ್ತೇಸರ ಮತ್ತು ಪ್ರಧಾನ ಆರ್ಚಕ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ ಆಶೀರ್ವಚನ ನೀಡಿದರು. ಶಾಸಕಿ ಭಾಗೀರಥಿ ಮುರುಳ್ಯ ಶುಭಶಂಸನೆಗೈದರು. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಐಕಳಬಾವ ದೇವಿಪ್ರಸಾದ್ ಶೆಟ್ಟಿ, ಉದ್ಯಮಿ ಏಕನಾಥ್ ಎಸ್. ಅಮೀನ್, ದೇವಸ್ಥಾನದ ಕಲಿನದ ಆಡಳಿತ ಮೊಕ್ತೇಸರ ಕುಮಾರಸ್ವಾಮಿ, ಚಿರುಂಭ ಶ್ರೀ ಭಗವತೀ ಕ್ಷೇತ್ರ ಉಳ್ಳಾಲದ ನಿಕಟಪೂರ್ವಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಶ್ರೀ ಜಯಕೃಷ್ಣ ಪರಿಸರ ಪ್ರೇಮಿ ಸಮಿತಿ ಮುಂಬೈ ಅಧ್ಯಕ್ಷ ಜಯಕೃಷ್ಣ ಶೆಟ್ಟಿ, ಶ್ರೀ ಭಗವತೀ ದೇವಸ್ಥಾನ, ಉಪ್ಪಳದ ಅಧ್ಯಕ್ಷ ಸುಕುಮಾರ್ ಉಪ್ಪಳ, ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನಾಧಿಕಾರಿ ಗಿರೀಶ್, ಶಾಸಕ ಯಶ್‌ಪಾಲ್ ಸುವರ್ಣ ಮುಖ್ಯ ಅತಿಥಿಗಳಾಗಿದ್ದರು.ಕ್ಷೇತ್ರದ ಆಡಳಿತ ಮೊಕ್ತೇಸರ ಚಂದ್ರಶೇಖರ ಬೆಳ್ಚಡ, ಬ್ರಹ್ಮಕಲಶೋತ್ಸವ ಮುಂಬ್ಯೆ ಸಮಿತಿ ಅಧ್ಯಕ್ಷ ವೇದಪ್ರಕಾಶ್ ಎಂ ಶ್ರೀಯಾನ್, ಸಮಿತಿಯ ಮೋಹನ್ ಕೋಟ್ಯಾನ್ ಮುಂಬೈ, ಪದ್ಮನಾಭ ಬಂಗೇರ, ಡಾ.ಸೋಂದಾ ಭಾಸ್ಕರ ಭಟ್, ಶ್ರೀಪತಿ ಭಟ್ ಹೊಯ್ಗೆ ಗುಡ್ಡೆ, ಮುರ ಸದಾಶಿವ ಶೆಟ್ಟಿ ಮತ್ತಿತರರಿದ್ದರು.ಕ್ಷೇತ್ರದ ಅಭಿವೃದ್ದಿಗೆ ಸಹಕರಿಸಿದವರು, ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ವಾಮನ್ ಇಡ್ಯಾ, ಆಡಳಿತ ಮೊಕ್ತೇಸರ ಚಂದ್ರಶೇಖರ ಬೆಳ್ಚಡ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು, ಅನುವಂಶಿಕ ಮೊಕ್ತೇಸರ ಶ್ರೀನಿವಾಸ್ ಯಾನೆ ಅಪ್ಪು ಪೂಜಾರಿ, ದೇವಳದ ಅರ್ಚಕ ವರ್ಗ, ದಾನಿಗಳನ್ನು, ಅಭಿವೃದ್ದಿಯಲ್ಲಿ ಸಹಕರಿಸಿದವರನ್ನು ಗೌರವಿಸಲಾಯಿತು.ಕ್ಷೇತ್ರದ ವಿಶ್ವಸ್ತ ಮಂಡಳಿ ಅಧ್ಯಕ್ಷ ವಾಮನ್ ಇಡ್ಯಾ ಸ್ವಾಗತಿಸಿದರು. ರಾಜೇಂದ್ರ ಪ್ರಸಾದ್ ಎಕ್ಕಾರು ನಿರೂಪಿಸಿದರು.