ಕನ್ನಡಪ್ರಭ ವಾರ್ತೆ ಮಂಗಳೂರು
ಬಿಜೆಪಿ ಸದಸ್ಯತ್ವ ವಿವಾದ ಕರಾವಳಿಯ ಪ್ರಸಿದ್ದ ತುಳು ನಟ, ನಿರ್ದೇಶಕ ದೇವದಾಸ್ ಕಾಪಿಕಾಡ್ ಅವರನ್ನು ಸುತ್ತಿಕೊಂಡಿದೆ.ತುಳುನಾಡಿನ ಖ್ಯಾತ ನಟ ನಿರ್ದೇಶಕ, ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಅವರ ಬಿಜೆಪಿ ಸದಸ್ಯತ್ವ ವಿವಾದ ಸೃಷ್ಟಿಸಿದೆ. ಬಿಜೆಪಿ ಸದಸ್ಯತ್ವ ಪಡೆದ ಕಾರಣಕ್ಕೆ ಸೌದಿ ಅರೇಬಿಯಾದಲ್ಲಿ ದೇವದಾಸ್ ಕಾಪಿಕಾಡ್ ಅವರ ಕಾಮಿಡಿ ಶೋ ಕಾರ್ಯಕ್ರಮಕ್ಕೆ ಬಹಿಷ್ಕಾರದ ಬೆದರಿಕೆ ಬಂದಿದೆ. ಕಾಪಿಕಾಡ್ ಶೋ ಬಹಿಷ್ಕಾರದ ಪೋಸ್ಟರ್ ಇದೀಗ ವೈರಲ್ ಆಗುತ್ತಿದೆ. ಇದರ ಬೆನ್ನಲ್ಲೇ ದೇವದಾಸ್ ಕಾಪಿಕಾಡ್ ಅವರು ‘ಬಿಜೆಪಿ ಸೇರ್ಪಡೆಯಾಗಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿ ಸದಸ್ಯತ್ವ ಆನ್‌ಲೈನ್ ಅಭಿಯಾನದ ಅಂಗವಾಗಿ ಬುಧವಾರ ಕೇಂದ್ರ ಮಾಜಿ ಸಚಿವ ಡಿ.ವಿ. ಸದಾನಂದ ಗೌಡ ಸಮ್ಮುಖದಲ್ಲಿ ಕಾಪಿಕಾಡ್ ಮನೆಯಲ್ಲೇ ನಡೆದ ಸರಳ ಕಾರ್ಯಕ್ರಮದಲ್ಲಿ ದೇವದಾಸ್ ಕಾಪಿಕಾಡ್ ಬಿಜೆಪಿ ಸದಸ್ಯತ್ವ ಪಡೆದಿದ್ದರು.ಈ ಬಗ್ಗೆ ಬಿಜೆಪಿ ಅಧಿಕೃತವಾಗಿ ಪ್ರಕಟಣೆ ಕೂಡ ನೀಡಿತ್ತು. ದೇವದಾಸ್ ಕಾಪಿಕಾಡ್ ಬಿಜೆಪಿ ಸದಸ್ಯತ್ವ ಪಡೆದ ಬಗ್ಗೆ ಬಿಜೆಪಿಯಿಂದ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಕೂಡ ಹಾಕಲಾಗಿತ್ತು. ಬಿಜೆಪಿ ಹಿರಿಯ ನಾಯಕ, ಮಾಜಿ ಸಿಎಂ ಡಿ.ವಿ.ಸದಾನಂದ ಗೌಡರು ಕೂಡ ಅಧಿಕೃತ ಫೇಸ್‌ಬುಕ್ ಖಾತೆ, ರಾಜ್ಯ ಮತ್ತು ದ.ಕ ಜಿಲ್ಲಾ ಬಿಜೆಪಿ ಕೂಡ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದರು. ಫೋಸ್ಟ್ ವೈರಲ್ ಬೆನ್ನಲ್ಲೇ ದೇವದಾಸ್ ಕಾಪಿಕಾಡ್‌ಗೆ ಬಹಿಷ್ಕಾರದ ಬಿಸಿ ತಟ್ಟಿದೆ.ಸೆ.13 ಹಾಗೂ 14 ರಂದು ಸೌದಿಯ ಜುಬೈಲ್‌ನ ಪುಲಿ ರೆಸ್ಟೋರೆಂಟ್‌ನಲ್ಲಿ ಆಯೋಜನೆಯಾಗಿರುವ ಕಾಪಿಕಾಡ್ ಕಾಮಿಡಿ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕುವ ಬೆದರಿಕೆಗಳು ಬಂದಿವೆ. ಬಿಜೆಪಿ ಸದಸ್ಯತ್ವ ಪಡೆದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಬಹಿಷ್ಕರಿಸಿ ಎಂದು ಪೋಸ್ಟ್‌ಗಳನ್ನು ಹರಿಯಬಿಡಲಾಗಿದ್ದು ವೈರಲ್ ಆಗುತ್ತಿದೆ. ಇದರ ಬೆನ್ನಲ್ಲೇ ಕಾಪಿಕಾಡ್ ತಾನು ಬಿಜೆಪಿ ಸದಸ್ಯತ್ವ ಪಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಸದ್ಯ ಸಾಮಾಜಿಕ ತಾಣಗಳಲ್ಲಿ ಸ್ಪಷ್ಟನೆಯ ಆಡಿಯೋ ಕೂಡ ವೈರಲ್ ಆಗುತ್ತಿದೆ.
ಬಿಜೆಪಿ ನಾಯಕರ ಜೊತೆ ಕೇವಲ ಸೌಹಾರ್ದ ಭೇಟಿ ನಡೆದಿದೆ, ನಾನು ಯಾವುದೇ ಪಕ್ಷಕ್ಕೂ ಸೇರಿದವನಲ್ಲ, ಯಾವುದೇ ಪಕ್ಷಕ್ಕೆ ನಾನು ಸೇರ್ಪಡೆಯಾಗಿಲ್ಲ.ಎಲ್ಲ ಪಕ್ಷಗಳ ಮುಖಂಡರ ಜೊತೆ ನನಗೆ ಉತ್ತಮ ಸಂಬಂಧ ಇದೆ ಎಂಬ ಸ್ಪಷ್ಟನೆಯನ್ನು ಆಡಿಯೋದಲ್ಲಿ ಹೇಳಿದ್ದಾರೆ.