ಚಾಮರಾಜನಗರದ ಬಿಸಲವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸಿ.ಬಾಲರಾಜು ಆಯ್ಕೆ

KannadaprabhaNewsNetwork | Published : Sep 7, 2024 1:36 AM

ಸಾರಾಂಶ

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯನ್ನು ಸೋಲಿಸುವ ಸಲುವಾಗಿ ಬಿಜೆಪಿ ಸದಸ್ಯರು ಬಿಎಸ್ಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ, ಬಿಸಲವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಬಿಸಲವಾಡಿ ಗ್ರಾಪಂ ಅಧ್ಯಕ್ಷರಾಗಿ ಬಿಎಸ್ಪಿ ಹಾಗೂ ಬಿಜೆಪಿ ಮೈತ್ರಿ ಅಭ್ಯರ್ಥಿ ಸಿ.ಬಾಲರಾಜು ಆಯ್ಕೆಯಾಗಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯನ್ನು ಸೋಲಿಸುವ ಸಲುವಾಗಿ ಬಿಜೆಪಿ ಸದಸ್ಯರು ಬಿಎಸ್ಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ, ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಗ್ರಾಪಂ ಅಧ್ಯಕ್ಷೆಯಾಗಿದ್ದ ಜಿ.ರಮ್ಯ ನಾಗರಾಜು ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಿತು. ಪರಿಶಿಷ್ಟ ಜಾತಿ ಸಾಮಾನ್ಯಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬಿಎಸ್ಸಿ-ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸಿ.ಬಾಲರಾಜು ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಶೋಭಾ ನಾಮಪತ್ರ ಸಲ್ಲಿಸಿದ್ದರು. 16 ಸದಸ್ಯರ ಬೆಂಬಲದ ಪಂಚಾಯಿತಿಯಲ್ಲಿ ಚುನಾವಣೆ ಮತದಾನ ನಡೆದು, ಮೈತ್ರಿ ಅಭ್ಯರ್ಥಿ ಸಿ.ಬಾಲರಾಜು 9 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶೋಭಾ 7 ಮತಗಳನ್ನು ಪಡೆದುಕೊಂಡರು. ಚುನಾವಣಾಧಿಕಾರಿಯಾಗಿದ್ದ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ನಿರಂಜನ್‌ಮೂರ್ತಿ ಅವರು ಅಧಿಕೃತವಾಗಿ ಅಧ್ಯಕ್ಷರ ಆಯ್ಕೆಯನ್ನು ಘೋಷಣೆ ಮಾಡಿದರು. ಸಹಾಯಕ ಚುನಾವಣಾಧಿಕಾರಿ ಪಿಡಿಒ ರಾಜೇಂದ್ರ, ಕಾರ್ಯದರ್ಶಿ ಗೋವಿಂದರಾಜು ಕರ್ತವ್ಯ ನಿರ್ವಹಿಸಿದರು. ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ದಿಗೆ ಒತ್ತು:

ಬಿಸಲವಾಡಿ ಗ್ರಾಪಂ ಅಧ್ಯಕ್ಷರನ್ನಾಗಿ ಆಯ್ಕೆಯಾಗಲು ಕಾರಣಕರ್ತರಾದ ಬಿಜೆಪಿ ಬೆಂಬಲಿತ ಸದಸ್ಯರು ಹಾಗೂ ನನ್ನನ್ನು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಬೆಂಬಲಿಸಿದ ಎಲ್ಲಾ ಗ್ರಾಪಂ ಸದಸ್ಯರಿಗೂ ಆಭಾರಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಪ್ರಾಮಾಣಿಕವಾಗಿ ದುಡಿಯುತ್ತಿದ್ದೇನೆ. ಸರ್ಕಾರದ ಅನುದಾನಗಳಡಿಯಲ್ಲಿ ವಿವಿಧ ಯೋಜನೆಗಳನ್ನು ಅನುಷ್ಠಾನ ಮಾಡಿ, ಮಾದರಿ ಪಂಚಾಯಿತಿ ಮಾಡಲು ದುಡಿಯುವುದಾಗಿ ತಿಳಿಸಿದರು. ವಿಜಯೋತ್ಸವ: ಬಿಜೆಪಿ-ಬಿಎಸ್ಪಿ ಮೈತ್ರಿ ಅಭ್ಯರ್ಥಿ ಬಾಲರಾಜು ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಎರಡು ಪಕ್ಷಗಳ ಮುಖಂಡರು ಹೂವಿನ ಹಾರ ಹಾಕಿ, ಸಿಹಿ ಹಂಚಿ ಸಂಭ್ರಮ ವ್ಯಕ್ತಪಡಿಸಿದರು. ಬಿಎಸ್ಪಿ ಜಿಲ್ಲಾಧ್ಯಕ್ಷ ನಾಗಯ್ಯ ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿ, ಗ್ರಾಪಂ ಮಟ್ಟದಲ್ಲಿ ಜನರ ಸಂಕಷ್ಟಗಳನ್ನು ಅರಿತು ಕೆಲಸ ಮಾಡುವ ಮೂಲಕ ಜನ ಬೆಂಬಲವನ್ನು ನೂತನ ಅಧ್ಯಕ್ಷರು ಪಡೆಯಬೇಕು. ಬಿಜೆಪಿ ಬೆಂಬಲಿತರ ಸದಸ್ಯರ ಬೆಂಬಲದೊಂದಿಗೆ ನಮ್ಮ ಪಕ್ಷದ ಅಭ್ಯರ್ಥಿ ಬಾಲರಾಜು ಅಧ್ಯಕ್ಷರಾಗಿರುವುದು ಸಂತಸ ತಂದಿದೆ ಎಂದರು.

ಬಿಜೆಪಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ರವಿಕುಮಾರ್ ಮಾತನಾಡಿ, ಪಂಚಾಯಿತಿ ಅಧಿಕಾರವನ್ನು ಕಾಂಗ್ರೆಸ್‌ಗೆ ತಪ್ಪಿಸಬೇಕು ಎಂಬ ಉದ್ದೇಶದಿಂದ ಬಿಎಸ್ಪಿ ಅಭ್ಯರ್ಥಿ ಬಾಲರಾಜುಗೆ ಬೆಂಬಲ ನೀಡಿದ್ದೇವೆ. ಕಾಂಗ್ರೆಸ್ ಆಡಳಿತದ ವಿರುದ್ಧ ಜನರು ಭ್ರಮ ನಿರಸಗೊಂಡಿದ್ದರು. ಇನ್ನುಳಿದ 18 ತಿಂಗಳ ಆಡಳಿತ ಉತ್ತಮವಾಗಿದ್ದು, ಪಂಚಾಯಿತಿ ಅಭಿವೃದ್ಧಿ ಆಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಎಂ.ಕುಮಾರ್, ಎನ್.ಮಲ್ಲೇಶ್, ನಾಗಮ್ಮ, ಸಿದ್ದರಾಜು, ಅಲೋಕ್ ಕುಮಾರ್, ಬಿಜೆಪಿ ಮಂಡಲದ ಉಪಾಧ್ಯಕ್ಷ ಎಲ್. ಮಹೇಶ್, ಬಿಎಸ್ಪಿ ಉಪಾಧ್ಯಕ್ಷ ಬ್ಯಾಡಮೂಡ್ಲು ಬಸವಣ್ಣ, ಪ್ರಧಾನ ಕಾರ್ಯದರ್ಶಿ ಭ.ಮ.ಕೃಷ್ಣಮುರ್ತಿ, ತಾಲೂಕು ಅಧ್ಯಕ್ಷ ಚಂದ್ರಕಾಂತ್, ಮುಖಂಡರಾದ ಶಿವಕುಮಾರ್, ನಂಜಪ್ಪ, ಅನಿಲ್, ಎಸ್‌ಡಿಎಂಸಿ ಅಧ್ಯಕ್ಷ ರವಿ, ಮೋನಿಶ್ ನಾಯಕ, ಗುರುಮಲ್ಲಪ್ಪ, ವೀರಭದ್ರಪ್ಪ, ಬೈಯನಪುರ ಮಲ್ಲಪ್ಪ, ಪರಶಿವಪ್ಪ, ನಾಗೇಶ್, ಬಿ.ಸಿ. ರಾಜು, ಶಿವಣ್ಣ, ಬೈರಲಿಂಗಸ್ವಾಮಿ, ಪ್ರಕಾಶ್, ಜಿಲ್ಲಾ ಕಾರ್ಯದರ್ಶಿ ಕುಮಾರಸ್ವಾಮಿ, ಪ್ರಕಾಶ್, ರಂಗ, ಪ್ರಾನಿಸ್ಸ್, ಲಿಂಗರಾಜು, ಮೋಹನ್, ವಿಜಯಕುಮಾರ್, ಶಿವಪ್ರಸಾದ್ ಇದ್ದರು.

Share this article