ನಟ ಬಿ.ಸಿ.ಪಾಟೀಲ್‌ ಅಳಿಯ ಪ್ರತಾಪಕುಮಾರ ಅಂತ್ಯಕ್ರಿಯೆ: ಶೋಕಸಾಗರದಲ್ಲಿ ಕತ್ತಲಗೆರೆ

KannadaprabhaNewsNetwork | Published : Jul 10, 2024 12:30 AM

ಸಾರಾಂಶ

ಮಾಜಿ ಸಚಿವ ಬಿ.ಸಿ.ಪಾಟೀಲರ ಅಳಿಯ ಕೆ.ಜಿ.ಪ್ರತಾಪ ಕುಮಾರ ಸೋಮವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ವಗ್ರಾಮ ಚನ್ನಗಿರಿ ತಾಲೂಕಿನ ಕತ್ತಲಗೆರೆಯಲ್ಲಿ ಮಂಗಳವಾರ ವೀರಶೈವ ಸಮುದಾಯದ ಪದ್ಧತಿಯಂತೆ ಅಂತ್ಯಕ್ರಿಯೆ ನೆರವೇರಿತು.

- ಹಿರಿಯ ನಟ, ಮಾಜಿ ಸಚಿವ ಬಿ.ಸಿ.ಪಾಟೀಲ್‌ ಅಳಿಯ ಅಕಾಲಿಕ ಸಾವಿಗೆ ಕಣ್ಣೀರಿಟ್ಟ ಕುಟುಂಬಸ್ಥರು, ಗ್ರಾಮಸ್ಥರು, ಗೆಳೆಯರು - ವೀರಶೈವ ಸಮುದಾಯ ಪದ್ಧತಿಯಂತೆ ತಂದೆ ಸಮಾಧಿ ಪಕ್ಕವೇ ಪ್ರತಾಪಕುಮಾರ ಅಂತ್ಯಕ್ರಿಯೆ- - -

ಕನ್ನಡಪ್ರಭ ವಾರ್ತೆ, ದಾವಣಗೆರೆ

ಮಾಜಿ ಸಚಿವ ಬಿ.ಸಿ.ಪಾಟೀಲರ ಅಳಿಯ ಕೆ.ಜಿ.ಪ್ರತಾಪ ಕುಮಾರ ಸೋಮವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ವಗ್ರಾಮ ಚನ್ನಗಿರಿ ತಾಲೂಕಿನ ಕತ್ತಲಗೆರೆಯಲ್ಲಿ ಮಂಗಳವಾರ ವೀರಶೈವ ಸಮುದಾಯದ ಪದ್ಧತಿಯಂತೆ ಅಂತ್ಯಕ್ರಿಯೆ ನೆರವೇರಿತು.

ಕತ್ತಲಗೆರೆ ಗ್ರಾಮದ ಪ್ರತಾಪ ಕುಮಾರ ಅವರ ಮನೆಯಲ್ಲಿ ಬೆಳಗ್ಗೆ ಸಾರ್ವಜನಿಕರಿಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಅನಂತರ ಟ್ರ್ಯಾಕ್ಟರ್‌ನಲ್ಲಿ ಶವವನ್ನು ತೋಟದವರೆಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಅನಂತರ ತಂದೆಯ ಸಮಾಧಿ ಪಕ್ಕದಲ್ಲೇ ಪ್ರತಾಪ ಕುಮಾರ ಅವರ ಶವದ ಅಂತ್ಯಕ್ರಿಯೆ ನಡೆಸಲಾಯಿತು.

ಮಾಜಿ ಸಚಿವ ಹಾಗೂ ಮಾವ ಬಿ.ಸಿ.ಪಾಟೀಲ, ಪತ್ನಿ ವನಜಾ ಪಾಟೀಲ, ಹಿರಿಯ ಪುತ್ರಿ ಸೌಮ್ಯ ಪಾಟೀಲ್‌, ಕಿರಿಯ ಪುತ್ರಿ ಸೃಷ್ಠಿ ಪಾಟೀಲ್‌ ಸೇರಿದಂತೆ ಎರಡೂ ಕುಟುಂಬ ವರ್ಗದವರು ಹಾಜರಿದ್ದರು.

ಪ್ರತಾಪ ಕುಮಾರ ಆತ್ಮಹತ್ಯೆಗೆ ನಿಖರ ಕಾರಣಗಳು ಗೊತ್ತಾಗಿಲ್ಲ. ಪತಿಯನ್ನು ಕಳೆದುಕೊಂಡ ಸೌಮ್ಯ ಪಾಟೀಲರನ್ನು ತಾಯಿ ವನಜಾ ಪಾಟೀಲ್, ಸಹೋದರಿ ಸೃಷ್ಠಿ ಪಾಟೀಲ ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದರು. ಪ್ರತಾಪಕುಮಾರನ ತಾಯಿ ವಸಂತಮ್ಮ, ಸಹೋದರಿ, ಬಂಧು-ಬಳಗವು ಪಾರ್ಥಿವ ಶರೀರದ ಮುಂದೆ ಕುಳಿತು ರೋದಿಸುತ್ತಿದ್ದ ದೃಶ್ಯ ಹೃದಯ ಹಿಂಡಿದಂತಿತ್ತು.

ಹಿರೇಕೆರೂರು ಶಾಸಕ ಯು.ಬಿ. ಬಣಕಾರ್‌ ಕತ್ತಲಗೆರೆ ಗ್ರಾಮದಲ್ಲಿ ಮೃತ ಪ್ರತಾಪಕುಮಾರ ಅವರ ಅಂತಿಮ ದರ್ಶನ ಪಡೆದರು. ಪಾರ್ಥಿವದ ಮೇಲೆ ಬಿಲ್ವ ಪತ್ರೆ, ಹೂವುಗಳನ್ನು ಹಾಕಿ, ನಮಿಸಿದರು. ಬಿ.ಸಿ.ಪಾಟೀಲ್ ಮತ್ತು ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು. ಅಂತ್ಯಕ್ರಿಯೆ ವೇಳೆ ಬಂಧು-ಬಳಗ, ಸ್ನೇಹಿತರು, ಹಿತೈಷಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.

- - - ಬಾಕ್ಸ್

* ನನ್ನ ಮಗ, ನನ್ನ ಬಲಗೈ ಕಳೆದುಕೊಂಡೆ - ಪ್ರತಾಪ ಕುಮಾರ ಸಾವಿಗೆ ಕಣ್ಣೀರಿಟ್ಟ ಮಾಜಿ ಸಚಿವ ಬಿ.ಸಿ.ಪಾಟೀಲ

ಕನ್ನಡಪ್ರಭ ವಾರ್ತೆ, ದಾವಣಗೆರೆ

ನನ್ನ ಹಿರಿಯ ಮಗಳ ಗಂಡನಾಗಿದ್ದರೂ ಪ್ರತಾಪ ನನಗೆ ಮಗನಾಗಿದ್ದ. ನನ್ನ ಬಲಗೈ ಆಗಿದ್ದ. ಅಂತಹ ನನ್ನ ಮಗ, ನನ್ನ ಬಲಗೈಯನ್ನೇ ಕಳೆದುಕೊಂಡ ಸಂಕಟ ನನಗಾಗುತ್ತಿದೆ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ಕಣ್ಣೀರಿಟ್ಟರು.

ಚನ್ನಗಿರಿ ತಾಲೂಕಿನ ಕತ್ತಲಗೆರೆ ಗ್ರಾಮದಲ್ಲಿ ಪ್ರತಾಪ ಅವರ ತೋಟದಲ್ಲಿ ಅಳಿಯನ ಅಂತ್ಯಕ್ರಿಯೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 16 ವರ್ಷದಿಂದಲೂ ನನ್ನ ಜಮೀನು, ನಮ್ಮೆಲ್ಲಾ ವ್ಯವಹಾರವನ್ನೂ ಅಳಿಯ ಪ್ರತಾಪನೇ ನೋಡಿಕೊಳ್ಳುತ್ತಿದ್ದ ಎಂದರು.

ಪ್ರತಾಪನ ಸಾವಿನಿಂದ ನನಗೆ ತುಂಬಲಾರದ ನಷ್ಟವಾಗಿದೆ. ಹಿರಿಯ ಮಗನಂತಿದ್ದ. ಪ್ರತಾಪನ ಅಸಹಜ ಸಾವಿನ ಹಿನ್ನೆಲೆ ಸಹೋದರ ಪ್ರಭುದೇವ ಹೊನ್ನಾಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವೈದ್ಯರು ಮರಣೋತ್ತರ ಪರೀಕ್ಷೆಯನ್ನು ನಡೆಸಿದ್ದಾರೆ. ಮಕ್ಕಳಿಲ್ಲವೆಂಬ ಕೊರಗಿನಲ್ಲಿ ವಿಷ ಸೇವಿಸಿ, ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮಾವ ಬಿ.ಸಿ.ಪಾಟೀಲ ಭಾವುಕರಾದರು.

- - - - (ಫೋಟೋ ಬರಲಿವೆ)

Share this article