ಕನ್ನಡಪ್ರಭವಾರ್ತೆ ತೀರ್ಥಹಳ್ಳಿ ಚಿತ್ರನಟ ಪುನೀತ್ ರಾಜಕುಮಾರ್ ತಮ್ಮ ಜೀವಿತದ ಕೊನೆಯವರೆಗೂ ಸಂಕಷ್ಟದಲ್ಲಿದ್ದವರ ಕಣ್ಣೀರು ಒರೆಸುವ ಕಳಕಳಿ ಹೊಂದಿದ್ದರು. ಮಾನವೀಯತೆ ಮೆರೆದ ಕನ್ನಡಿಗರ ಕಣ್ಮಣಿ ಮನೋಭಾವ ಅನುಕರಣೀಯ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾ ರಮೇಶ್ ಹೇಳಿದರು. ಪಟ್ಟಣದ ರೋಟರಿ ಸಭಾಂಗಣದಲ್ಲಿ ಭಾನುವಾರ ದಿ. ಪುನೀತ್ ರಾಜ್‌ಕುಮಾರ್ ಪುಣ್ಯಸ್ಮರಣೆ ಅಂಗವಾಗಿ ಪುನೀತ್ ಬ್ರಿಗೇಡ್, ವಿಶ್ವಮಾನವ ಕನ್ನಡ ವೇದಿಕೆ, ನಾರಾಯಣ ಗುರು ವಿಚಾರ ವೇದಿಕೆ ಹಾಗೂ ರೋಟರಿ ಕ್ಲಬ್ ವತಿಯಿಂದ ನಡೆದ ರಕ್ತದಾನ ಸೇರಿದಂತೆ ಹಲವು ಜನಪರ ಕಾರ್ಯಕ್ರಮದಲ್ಲಿ ಪ್ರತಿಭಾವಂತ ಕ್ರೀಡಾಪಟುಗಳನ್ನು ಗೌರವಿಸಿ ಅವರು ಮಾತನಾಡಿದರು. ಕರ್ನಾಟಕ ರತ್ನ ಅಪ್ಪು ನಮ್ಮನ್ನಗಲಿ ಎರಡು ವರ್ಷಗಳೇ ಸಂದಿವೆ. ಆದರೂ, ಬದುಕಿನ ಮೌಲ್ಯವನ್ನು ಮೆರೆದ ಅವರ ವ್ಯಕ್ತಿತ್ವ ಸದಾ ಕಣ್ಣ ಮುಂದೆ ಸುಳಿಯುತ್ತದೆ. ಪುನೀತ್ ರಾಜಕುಮಾರ್ ಒಬ್ಬ ನಟನಾಗಿ ಅಭಿಮಾನಿಗಳ ಪ್ರೀತಿಯನ್ನು ಮಾತ್ರವಲ್ಲದೇ ಮಾನವೀಯ ಚಿಂತನೆ ಮೂಲಕ ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ ಎಂದರು. ಪ್ರಭಾವಿ ಕುಟುಂಬದಲ್ಲಿ ಜನಿಸಿದ್ದರೂ ಸಂಕಷ್ಟದಲ್ಲಿ ಇರುವವರ ಬಗೆಗಿನ ಅವರ ಚಿಂತನೆ ಸದಾ ಅನುಕರಣೀಯವಾಗಿದೆ. ಅವರ ಸ್ಮರಣೆಯ ಅಂಗವಾಗಿ ಹಮ್ಮಿಕೊಂಡಿರುವ ಇಂದಿನ ಕಾರ್ಯ ಕೂಡ ಪ್ರಶಂಸನೀಯ ಎಂದು ತಿಳಿಸಿದರು. ಪ.ಪಂ. ಉಪಾಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಸದಸ್ಯೆ ಸುಶೀಲಾ ಶೆಟ್ಟಿ, ನಾರಾಯಣ ಗುರು ವಿಚಾರ ವೇದಿಕೆ ಅಧ್ಯಕ್ಷ ವಿಶಾಲ್ ಕುಮಾರ್, ಸುಧಾಕರ್ ಕುಪ್ಪಳಿ, ಎಚ್.ಪಾಡುರಂಗಪ್ಪ, ಹೊದಲ ಶಿವು, ಟಿ.ರಾಘವೇಂದ್ರ, ನಾಗೇಶ್, ದಿನೇಶ್ ಯಡೂರು ಮುಂತಾದವರು ಇದ್ದರು. - - - -29ಟಿಟಿಎಚ್01: ದಿ. ಪುನೀತ್ ರಾಜ್‌ಕುಮಾರ್ ಪುಣ್ಯಸ್ಮರಣೆ ಅಂಗವಾಗಿ ಭಾನುವಾರ ತೀರ್ಥಹಳ್ಳಿ ಪಟ್ಟಣದಲ್ಲಿ ರಕ್ತದಾನ ಶಿಬಿರ ನಡೆಯಿತು.