ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ
ಹಿರಿಯ ಚಿತ್ರನಟಿ ದಿ.ಲೀಲಾವತಿ ಅವರ ಪುತ್ರ, ಕನ್ನಡ ಚಲನಚಿತ್ರ ರಂಗದ ಹಿರಿಯ ನಟ ವಿನೋದ್ ರಾಜ್ ಅವರು ಕೇವಲ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳದೆ ಸಾಮಾಜಿಕ ಸೇವೆಗಳಲ್ಲೂ ತೊಡಗಿದ್ದಾರೆ. ಇದೀಗ ಇನ್ನೊಂದು ಹೆಜ್ಜೆ ಮುಂದಿಟ್ಟಿದ್ದು ತಾವೇ ಸ್ವತಃ ತಮ್ಮ ತೋಟದ ಜಮೀನಿನ ಗದ್ದೆಯಲ್ಲಿ ಭತ್ತ ಬೆಳೆದು, ಕಟಾವಿಗೂ ಮೊದಲು ಪೂಜೆ ನೆರವೇರಿಸಿ ಭತ್ತವನ್ನು ಸ್ವತಃ ತಾವೇ ಕಟಾವು ಮಾಡಿ ರೈತರಿಗೆ ಮಾದರಿಯಾಗಿದ್ದಾರೆ.ಸೋಲದೇವನಹಳ್ಳಿಯಲ್ಲಿ ವಾಸವಾಗಿರುವ ನಟ ವಿನೋದ್ ರಾಜ್ ಅವರು ತಮ್ಮ ತೋಟದಲ್ಲಿ ತುಂತುರು ನೀರಾವರಿ ಪದ್ಧತಿಯಲ್ಲಿ ಅವರೇ ಉತ್ತಮ ತಳಿಯ ಭತ್ತವನ್ನು ನಾಟಿ ಮಾಡಿದ್ದರು, ಉತ್ತಮ ಭತ್ತದ ಬೆಳೆ ಬೆಳೆದಿದ್ದು, ಸಮಗ್ರ ಕೃಷಿ ಜೊತೆಗೆ ತೋಟಗಾರಿಕೆ ಬೆಳೆಗಳಿಗೆ ಮುಂದಾಗಿದ್ದಾರೆ. ಭತ್ತದ ಬೆಳೆಯ ಕಟಾವಿಗೂ ಮೊದಲು ಪೂಜೆ ಮಾಡಿ ತೋಟದ ಕೆಲಸಗಾರರ ಜೊತೆ ಭತ್ತವನ್ನು ಕಟಾವು ಮಾಡಿ ಅವರೇ ಗದ್ದೆಯಿಂದ ಟ್ರ್ಯಾಕ್ಟರ್ ಮೂಲಕ ಭತ್ತವನ್ನು ಮನೆಗೆ ರವಾನಿಸಿದ್ದಾರೆ.
ನಂತರ ಅವರು ಮಾತನಾಡಿ, ನಮ್ಮ ತಾಯಿ ಲೀಲಾವತಿ ಅಮ್ಮನವರ ಆಶೀರ್ವಾದದಿಂದ ನಮ್ಮ ಭೂಮಿಯಲ್ಲಿ ಉತ್ತಮವಾಗಿ ಭತ್ತದ ಬೆಳೆ ಬಂದಿದೆ. ಡಾ.ಲೀಲಾವತಿ ಅಮ್ಮನವರು ಒಂದೊಂದು ತೆನೆಯಲ್ಲಿಯೂ ನಾನಿದ್ದೇನೆ ಎಂದು ಹೇಳುತ್ತಿದ್ದರು. ಇದೇ ಭೂಮಿ ತಾಯಿ ಹಾಗೂ ನಮ್ಮ ಅಮ್ಮನವರ ಮಹಿಮೆ. ನಮ್ಮ ಅಮ್ಮ ಭೂಮಿ ತೂಕದ ವ್ಯಕ್ತಿಯಾಗಿದ್ದಾರೆ. ಕಷ್ಟಪಟ್ಟು ಕೆಲಸ ಮಾಡಿದಾಗ ಮಾತ್ರ ಉತ್ತಮವಾದ ಫಲ ನಿರೀಕ್ಷೆ ಮಾಡಲು ಸಾಧ್ಯವಾಗುತ್ತದೆ. ಕಟಾವು ನಂತರ ಮೇವನ್ನು ಒಣಗಿಸಿ ಮೇದೆ ಹಾಕಿ ಹಸುಗಳಿಗೆ ನೀಡಲಾಗುತ್ತದೆ. ಮಳೆಯ ಬಂದಾಗ ನೆಲಕ್ಕೆ ಬಿದ್ದಿರುವ ಭತ್ತದ ಮೇವನ್ನು ಬಿಡದೆ ಆದನ್ನು ಆಯ್ದು ಹೊರೆಕಟ್ಟುತ್ತೇವೆ. ಕೈ ಕೆಸರಾದಾಗ ಮಾತ್ರ ಬಾಯಿ ಮೊಸರಾಗುತ್ತದೆ, ಹಾಗಾಗಿ ಕೆಲಸ ಮಾಡಿ ದುಡಿದಾಗ ಮಾತ್ರ ನಾವು ಪಡುವ ಶ್ರಮಕ್ಕೆ ಬೆಲೆ ಸಿಗುತ್ತದೆ ಎಂದು ನಟ ವಿನೋದ್ ರಾಜ್ ಹರ್ಷ ವ್ಯಕ್ತಪಡಿಸಿದರು.