ಕನ್ನಡಪ್ರಭ ವಾರ್ತೆ ಹೊನ್ನಾಳಿ
ಹಿರೇಕಲ್ಮಠದಲ್ಲಿರುವ ಸುಭದ್ರೆ ಹೆಣ್ಣಾನೆಯ ಆರೋಗ್ಯ ತಪಾಸಣೆಯನ್ನು ನಡೆಸಿ ಅದರ ಸಂಪೂರ್ಣ ವರದಿಯನ್ನು ನೀಡುವಂತೆ ಉಚ್ಚ ನ್ಯಾಯಾಲಯ ದಾವಣಗೆರೆಯ ಪ್ರಾದೇಶಿಕ ಅರಣ್ಯ ವಿಭಾಗಕ್ಕೆ ಆದೇಶ ನೀಡಿದ್ದ ಹಿನ್ನೆಲೆಯಲ್ಲಿ ಪ್ರಾದೇಶಿಕ ಅರಣ್ಯ ವಿಭಾಗದ ಅಧಿಕಾರಿಗಳು, ಪಶು ಇಲಾಖೆಯ ಉಪ ನಿರ್ದೇಶಕರಿಗೆ ಪತ್ರ ಬರೆದಿದ್ದರಿಂದ ಅ.11 ರಂದು ಪಶು ವೈದ್ಯಾಧಿಕಾರಿಗಳ ತಂಡ ಹಿರೇಕಲ್ಮಠದಲ್ಲಿರುವ ಸುಭದ್ರೆ ಹೆಣ್ಣಾನೆಯ ಆರೋಗ್ಯ ತಪಾಸಣೆ ನಡೆಸಿತು.ಈ ಸಂದರ್ಭದಲ್ಲಿ ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹಾಗೂ ಅರಣ್ಯ ಇಲಾಖೆಯ ಆರ್‌ಎಫ್‌ಒ ಕಿಶೋರ್ ಉಪಸ್ಥಿತರಿದ್ದರು.
ಆನೆ ಸುಭದ್ರೆಯ ಆರೋಗ್ಯ ತಪಾಸಣೆಯನ್ನು ಪಶು ವೈದ್ಯಕೀಯ ಪ್ರಾದೇಶಿಕ ರೋಗ ತಪಾಸಣಾಧಿಕಾರಿ ಡಾ.ನಾಗರಾಜ್, ಮುಖ್ಯ ಪಶು ವೈದ್ಯಾಧಿಕಾರಿ ಡಾ.ಸತೀಶ್, ನ್ಯಾಮತಿ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಯಲ್ಲಪ್ಪ, ಹೊನ್ನಾಳಿಯ ಮುಖ್ಯ ಪಶು ವೈದ್ಯಾಧಿಕಾರಿ ಡಾ,ರಾಜೇಶ್, ಡಾ.ಚಂದ್ರಶೇಖರಪ್ಪ, ಹರಿಹರ ತಾಲೂಕಿನ ಹೊಳೆಸಿರಿಗೆರೆಯ ಪಶು ಚಿಕಿತ್ಸಾಲಯದ ಡಾ.ಬಾಬು ಬುಡೆನ್ ನಡೆಸಿದರು. ಹೊನ್ನಾಳಿ ಹಿರೇಕಲ್ಮಠದಲ್ಲಿದ್ದ ಆನೆ ಸುಭದ್ರೆಯ ಆರೋಗ್ಯ ತಪಾಸಣೆ ನಡೆಸಿದ ಪಶು ವೈದ್ಯರ ತಂಡದೊಂದಿಗೆ ಆರ್‌ಎಫ್‌ಒ ಕಿಶೋರ್ ಸಹಕರಿಸಿದರು.ಏನಿದು ವಿವಾದ?:
ಈ ಹಿಂದೆ ಉಡುಪಿಯ ಶ್ರೀಮಠದಲ್ಲಿದ್ದ ಸುಭದ್ರೆ ಹೆಣ್ಣಾನೆಗೆ ಆನಾರೋಗ್ಯ ಕಾಡಿದ್ದರಿಂದ ಅದನ್ನು ಶಿವಮೊಗ್ಗದ ಸಕ್ರೆಬೈಲ್‌ನಲ್ಲಿರುವ ಆನೆ ಬಿಡಾರಕ್ಕೆ ತಂದು ಬಿಟ್ಟಿದ್ದರು. ಹೊನ್ನಾಳಿ ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಈ ಆನೆಯನ್ನು ತಮ್ಮ ಮಠಕ್ಕೆ ಕೊಡುವಂತೆ ಮನವಿ ಮಾಡಿದ್ದರು, ಈ ಸಂದರ್ಭದಲ್ಲಿ ಸಕ್ರೆಬೈಲ್‌ನಲ್ಲಿದ್ದ ಆನೆಯನ್ನು ಹಿರೇಕಲ್ಮಠಕ್ಕೆ ತರಲಾಗಿತ್ತು.ಹಿರೇಕಲ್ಮಠದಲ್ಲಿ ಆನೆಗೆ ಚಿಕಿತ್ಸೆ ಕೊಡಿಸಿದ್ದರಿಂದ ಆನೆಯ ಆರೋಗ್ಯ ಸುಧಾರಿಸಿತ್ತು. ನಾಲ್ಕೈದು ವರ್ಷಗಳ ನಂತರ ಉಡುಪಿಯ ಶ್ರೀಮಠದವರು ಆನೆಯನ್ನು ತಮ್ಮ ಮಠಕ್ಕೆ ವಾಪಾಸು ಕಳಿಸಿಕೊಡಿ ಎಂದು ಅರಣ್ಯ ಇಲಾಖೆಯ ಮುಖಾಂತರ ಒತ್ತಾಯ ಮಾಡಿದರು. ಆಗ ಹೊನ್ನಾಳಿಯ ಶ್ರೀ ಮಠದ ಭಕ್ತರು ಆನೆಯನ್ನು ಉಡುಪಿಯ ಶ್ರೀಮಠಕ್ಕೆ ಕೊಡಲು ಒಪ್ಪದಿದ್ದಾಗ ಇದು ವಿವಾದದ ಸ್ವರೂಪ ಪಡೆದುಕೊಂಡಿತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರೇಕಲ್ಮಠ ಉಚ್ಚ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿತು. ಆನೆಯ ಆರೋಗ್ಯ ಕುರಿತು ಕಾಳಜಿ ವ್ಯಕ್ತಪಡಿಸಿರುವ ರಾಜ್ಯ ಉಚ್ಚ ನ್ಯಾಯಾಲಯ, ಅ.17ರಂದು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಈ ಸಂಬಂಧ ವಿಚಾರಣೆ ನಡೆಸುವುದಾಗಿ ಹೇಳಿದ್ದರಿಂದ ಅ.13ರ ಒಳಗೆ ಜಂಟಿಯಾಗಿ ಆನೆಯ ಆರೋಗ್ಯ ತಪಾಸಣೆ ನಡೆಸಿ ವರದಿ ನೀಡುವಂತೆ ಪ್ರಾದೇಶಿಕ ಅರಣ್ಯ ಅಧಿಕಾರಿಗಳು ಹಾಗೂ ಪಶು ಉಪ ನಿರ್ದೇಶಕರಿಗೆ ಪತ್ರ ಬರೆದಿತ್ತು.