ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರ, ಭಾರತೀಯ ಕೃಷಿ ಸಂಶೋಧನಾ ಪರಿಷತ್ತು , ಕೇಂದ್ರ ಸರ್ಕಾರ ಪ್ರಾಯೋಜಿತ ಎಸ್‌ಸಿ- ಎಸ್‌ಪಿ ಕಾರ್ಯಕ್ರಮದ ದತ್ತು ಗ್ರಾಮವಾದ ಹೊಸಹಳ್ಳಿಯಲ್ಲಿ ಅಧಿಕ ಇಳುವರಿಯ ಸುಗಂಧರಾಜ ಹೂವಿನ ತಳಿ ಅರ್ಕಾ ಪ್ರಜ್ವಲ್‌ನ ಮುಂಚೂಣಿ ಪ್ರಾತ್ಯಕ್ಷಿಕೆಯನ್ನು 10 ರೈತರ ತಾಕಿನಲ್ಲಿ ಕೈಗೊಳ್ಳಲಾಗಿತ್ತು.ಈ ಪ್ರಾತ್ಯಕ್ಷಿಕೆಯ ಕ್ಷೇತ್ರೋತ್ಸವವನ್ನು ಕೃಷಿ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶಕ ಡಾ. ವೈ.ಎನ್. ಶಿವಲಿಂಗಯ್ಯ ಉದ್ಘಾಟಿಸಿದರು.
ಅವರು ಮಾತನಾಡಿ, ತಂತ್ರಜ್ಞಾನ ವರ್ಗಾವಣೆಯಲ್ಲಿ ಕೃಷಿ ವಿಜ್ಞಾನ ಕೇಂದ್ರದ ಪಾತ್ರವು ಪ್ರಮುಖವಾಗಿದೆ, ಕೇಂದ್ರದಿಂದ ಕೈಗೊಳ್ಳುವ ಪ್ರಾತ್ಯಕ್ಷಿಕೆಗಳ ಮುಖಾಂತರ ನೂತನವಾಗಿ ಬಿಡುಗಡೆಯಾದ ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಪಾಲನೆ, ಆಹಾರ ವಿಜ್ಞಾನ ಮತ್ತು ಮೌಲ್ಯವರ್ಧನೆಗಳಿಗೆ ಸಂಬಂಧಿಸಿದ ತಂತ್ರಜ್ಞಾನಗಳು, ತಳಿಗಳ ಪರಿಚಯಗಳನ್ನು ರೈತರಿಗೆ ತಲುಪಿಸುವಲ್ಲಿ ಕೇಂದ್ರವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.ಸ್ಥಳೀಯವಾಗಿ ದೊರೆಯುವ ಬೆಳೆಗಳ ಬೀಜಗಳನ್ನು ಸಂರಕ್ಷಿಸಿಕೊಂಡು ಬಳಸ ಬೇಕೆಂದು ತಿಳಿಸಿಕೊಟ್ಟರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಹನುಮಂತರಾಯ ಮಾತನಾಡಿ, ಬೆಂಗಳೂರಿನ ಭಾರತೀಯ ತೋಟಗಾರಿಕ ಸಂಶೋಧನಾ ಸಂಸ್ಥೆಯಿಂದ ಬಿಡುಗಡೆಗೊಳಿಸಿರುವ ಸುಗಂಧರಾಜ ಹೂವಿನ ತಳಿಯಾದ ಅರ್ಕಾ ಪ್ರಜ್ವಲ್ ತಳಿಯು ಬೇರೆ ತಳಿಗಳಿಗೆ ಹೋಲಿಸಿದರೆ ಗಿಡಗಳು ಎತ್ತರವಾಗಿ ಬೆಳೆದು ಹೂ ಗೊಂಚಲಿನ ಕಡ್ಡಿ ಗಟ್ಟಿಯಾಗಿದ್ದು, ಮೊಗ್ಗುಗಳು ಗಾತ್ರದಲ್ಲಿ ದಪ್ಪನಾಗಿದ್ದು, ಎರಡು ಪಟ್ಟು ಅಧಿಕ ಇಳುವರಿ ನೀಡುತ್ತದೆ. ಅರ್ಕಾ ಪ್ರಜ್ವಲ್ ತಳಿಯು ಬೇರು ಜಂತು ಹುಳು, ಸಸ್ಯ ಹೇನು ಮತ್ತು ಕೊಳೆ ರೋಗಗಳ ಬಾಧೆಯನ್ನು ತಡೆದುಕೊಳ್ಳುವ ಶಕ್ತಿಯನ್ನು ಸಹ ಹೊಂದಿದೆಯೆಂದು ತಿಳಿಸಿದರು.ಕೇಂದ್ರದ ವಿಜ್ಞಾನಿಗಳಾದ ಡಾ. ಜಿ. ಈಶ್ವರಪ್ಪ, ಡಾ. ಜಿ.ಕೆ.ನಿಂಗರಾಜು, ಡಾ. ವೈ.ಎಂ. ಗೋಪಾಲ್ ಮತ್ತು ಡಾ. ಎಸ್. ಸುಪ್ರಿಯಾ ಹಾಗೂ ಹೊಸಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಾಗರತ್ನಮ್ಮ ಲಕ್ಷ್ಮಿನಾರಾಯಣ, ಮುಖಂಡ ಅಶ್ವತ್ಥನಾರಾಯಣ ಕುಮಾರ್, ಮಣಿಕಂಠರವರು ಹಾಗೂ ಹೊಸಹಳ್ಳಿ ಗ್ರಾಮ ಮತ್ತು ಸುತ್ತಮುತ್ತಲಿನ ರೈತರು, ರೈತ ಮಹಿಳೆಯರು ಭಾಗವಹಿಸಿದ್ದರು.