ಹಾರಕನಾಳು ಸಣ್ಣ ತಾಂಡಾದಲ್ಲಿ ನೀರಿಗಾಗಿ ಹಾಹಾಕಾರ

KannadaprabhaNewsNetwork |  
Published : Aug 20, 2026, 02:30 AM IST
ಹರಪನಹಳ್ಳಿ ತಾಲೂಕಿನ ಹಾರಕನಾಳು ಸಣ್ಣ ತಾಂಡದಲ್ಲಿ ಕುಡಿಯುವ ನೀರಿಗಾಗಿ ಜನರು ಕೈ ಗಾಡಿ ತೆಗೆದುಕೊಂಡು ಪರದಾಡುತ್ತಿರುವುದು .2)- 19ಎಚ್‌ ಆರ್‌ ಪಿ 2  - ಎಲ್.ಬಿ.ಹಾಲೇಶನಾಯ್ಕ (ಕೋಟ್‌ ಗೆ)  | Kannada Prabha

ಸಾರಾಂಶ

ಹಾರಕನಾಳು ಗ್ರಾಪಂಗೆ ಸೇರಿ ಹರಪನಹಳ್ಳಿ -ಹೂವಿನ ಹಡಗಲಿ ಗಡಿ ಭಾಗದಲ್ಲಿರುವ ಹಾರಕನಾಳು ಸಣ್ಣ ತಾಂಡಾದಲ್ಲಿ ಸುಮಾರು 280 ಮನೆಗಳಿವೆ. ಅಂದಾಜು 2 ಸಾವಿರ ಜನಸಂಖ್ಯೆ ಇದೆ. ಇಂತಹ ಗ್ರಾಮದಲ್ಲಿ ಗ್ರಾಪಂನ 4 ಕೊಳವೆ ಬಾವಿಗಳಿದ್ದು, ಎಲ್ಲವೂ ಬತ್ತಿ ಹೋಗಿವೆ.

ಬಿ. ರಾಮಪ್ರಸಾದ್‌ ಗಾಂಧಿ

ಹರಪನಹಳ್ಳಿ: ತಾಲೂಕಿನ ಹಾರಕನಾಳು ಸಣ್ಣ ತಾಂಡಾದಲ್ಲಿ ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಈವರೆಗೂ ಸಂಬಂಧ ಪಟ್ಟ ಅಧಿಕಾರಿಗಳು ಈ ಕಡೆ ಗಮನಹರಿಸಿಲ್ಲ. ಹಾರಕನಾಳು ಗ್ರಾಪಂಗೆ ಸೇರಿ ಹರಪನಹಳ್ಳಿ -ಹೂವಿನ ಹಡಗಲಿ ಗಡಿ ಭಾಗದಲ್ಲಿರುವ ಹಾರಕನಾಳು ಸಣ್ಣ ತಾಂಡಾದಲ್ಲಿ ಸುಮಾರು 280 ಮನೆಗಳಿವೆ. ಅಂದಾಜು 2 ಸಾವಿರ ಜನಸಂಖ್ಯೆ ಇದೆ. ಇಂತಹ ಗ್ರಾಮದಲ್ಲಿ ಗ್ರಾಪಂನ 4 ಕೊಳವೆ ಬಾವಿಗಳಿದ್ದು, ಎಲ್ಲವೂ ಬತ್ತಿ ಹೋಗಿವೆ.

ಕೆಟ್ಟಿರುವ ಶುದ್ಧ ನೀರಿನ ಘಟಕ

ಇರುವ ಒಂದು ಶುದ್ಧ ಕುಡಿಯುವ ನೀರಿನ ಘಟಕ ಸಹ ಕೆಟ್ಟು 2 ವರ್ಷವಾಗಿದೆ. ದುರಸ್ತಿ ಮಾಡಿಸುವ ಕೆಲಸಕ್ಕೆ ಅಧಿಕಾರಿಗಳು ಕೈ ಹಾಕಿಲ್ಲ. ಗ್ರಾಮಸ್ಥರು ತಾಂಡಾದ ಸುತ್ತಮುತ್ತ ಜಮೀನಿನಲ್ಲಿರುವ ಖಾಸಗಿ ಕೊಳವೆ ಬಾವಿಗಳಿಂದ ಪ್ರತಿದಿನ ಕುಡಿಯಲಿಕ್ಕೆ ನೀರನ್ನು ತರಬೇಕಾಗಿದೆ. ಪ್ರತಿದಿನ ನೀರಿಗಾಗಿಯೇ ತಮ್ಮ ಹೆಚ್ಚು ಸಮಯವನ್ನು ಮೀಸಲಿಡಬೇಕಾಗಿದೆ.

ಗ್ರಾಮದಲ್ಲಿ ಜಲ ಜೀವನ ಮಿಷನ್‌ ಜಾರಿಯಾಗಿದ್ದರೂ ನಳಗಳಲ್ಲಿ ನೀರಿಲ್ಲದಾಗಿದೆ. ಅದು ಕಳಪೆ ಕಾಮಗಾರಿಯಾಗಿದೆ. ಹೀಗೆ ಶುದ್ಧ ಕುಡಿಯುವ ನೀರಿನ ಘಟಕ, ಜಲಜೀವನ ಮಿಷನ್‌ ನಳಗಳು, ನಾಲ್ಕು ಕೊಳವೆ ಬಾವಿಗಳು ಒಟ್ಟಿನಲ್ಲಿ ಮೂರು ರೀತಿಯ ಯೋಜನೆಗಳಿದ್ದರೂ ಕುಡಿಯುವ ನೀರಿಗಾಗಿ ಜನತೆ ಪರದಾಡುವಂತಾಗಿದೆ.

ಈ ಬಗ್ಗೆ ಜನರು ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಮಾಡುತ್ತಲೇ ಬಂದರೂ ನಿರ್ಲಕ್ಷ್ಯ ವಹಿಸಲಾಗಿದೆ. ಶಾಲೆಯಲ್ಲಿ ಮಕ್ಕಳ ಬಿಸಿಯೂಟಕ್ಕೆ ಅಡುಗೆಯವರು ದೂರದ ಜಮೀನಿಗೆ ಹೋಗಿ ನೀರು ತರಬೇಕಿದೆ. ಗ್ರಾಮದಲ್ಲಿ ಬುಡಕಟ್ಟು ಸಮುದಾಯದವರೇ ವಾಸಿಸುತ್ತಲಿದ್ದು, ಬರ ಆವರಿಸಿದ ಈ ದಿನಗಳಲ್ಲಿ ನೀರಿಗಾಗಿ ಹಾಹಾಕಾರ ಪಡುವಂತಾಗಿದೆ.

ಗ್ರಾಮದ ಎಲ್.ಬಿ. ಹಾಲೇಶ ನಾಯ್ಕ, ಲೋಕೇಶ ನಾಯ್ಕ, ಕೆ. ಲಕ್ಷ್ಮಣ ನಾಯ್ಕ ಇತರರು ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದಾರೆ. ಈಗಲಾದರೂ ಗ್ರಾಪಂ ಸೇರಿದಂತೆ ಸಂಬಂಧ ಪಟ್ಟ ಇಲಾಖೆಯವರು ಹಾರಕನಾಳು ಸಣ್ಣ ತಾಂಡಾದ ಜನರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವರೇ ಕಾದು ನೋಡಬೇಕಿದೆ.

ಕಳೆದ 1 ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಇದೆ. ಕೂಲಿ ಮಾಡಿ ಜೀವನ ನಡೆಸುವ ಜನರೇ ಹೆಚ್ಚಿದ್ದು, ಕೂಲಿ ಕೆಲಸ ಬಿಟ್ಟು ನೀರಿಗಾಗಿ ದಿನವಿಡೀ ಪರದಾಡಬೇಕು. ಈ ಬಗ್ಗೆ ಪಿಡಿಒ ಸೇರಿದಂತೆ ಸಂಬಂಧಪಟ್ಟ ಎಂಜಿನಿಯರ್‌ಗಳಿಗೆ ಮನವಿ ಮಾಡಿದರೂ ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗೆ ಮುಂದುವರಿದರೆ ದೊಡ್ಡ ಮಟ್ಟದ ಹೋರಾಟ ಮಾಡಬೇಕಾಗುತ್ತದೆ ಎಂದು ಹಾರಕನಾಳು ಸಣ್ಣ ತಾಂಡಾ ಯುವ ಮುಖಂಡ ಎಸ್.ಬಿ. ಹಾಲೇಶನಾಯ್ಕ ಎಚ್ಚರಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಡಿಮೆ ಶ್ರಮ, ಅಧಿಕ ಇಳುವರಿ ಪಡೆಯಲು ವೈಜ್ಞಾನಿಕ ಕೃಷಿ ಪದ್ಧತಿ ಪೂರಕ: ಬಿ.ಪುಂಡಲೀಕ ಮರಾಠೆ
ಎಸ್‌ಡಿಎಂಎ ಕಾಲೇಜಿನಿಂದ ಸ್ತನ್ಯಪಾನ ಜಾಗೃತಿ ಬೀದಿನಾಟಕ