ಗದಗ: ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿಯಲ್ಲಿ ಜು. 1ರಂದು ರಾತ್ರಿ 10ರಿಂದ ಜು. 2ರಂದು ಬೆಳಗ್ಗೆ 5.30ರ ನಡುವೆ ಸೋಗಿಹಾಳ ರಸ್ತೆಗೆ ಇರುವ ಮನೆ ಕಳ್ಳತನ ಮಾಡಿದ ಮೂವರ ಪೈಕಿ ಇಬ್ಬರನ್ನು ಬಂಧಿಸಿದ್ದು, ಓರ್ವ ಪರಾರಿಯಾಗಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಹೇಳಿದರು.
ಮನೆಯ ಕೀಲಿ ಮುರಿದು ತಿಜೋರಿಯಲ್ಲಿಟ್ಟಿದ್ದ 5 ಗ್ರಾಂ ತೂಕದ ಒಂದು ಬಂಗಾರದ ಬೋರಮಳ ಸರ, 2.5 ಗ್ರಾಂ ತೂಕದ ಬಂಗಾರದ ಬೆಂಡವಾಲಿ, 5 ಗ್ರಾಂ ತೂಕದ ಬಂಗಾರದ ಕೊರಳಚೈನ್, 2.5 ಗ್ರಾಂ ತೂಕದ ಬಂಗಾರದ ಡ್ರಾಪ್ ಗುಂಡುಗಳು ಸೇರಿ ಒಟ್ಟು 15 ಗ್ರಾಂ ತೂಕದ ಬಂಗಾರದ ಆಭರಣಗಳು ಕಳ್ಳತನವಾಗಿದ್ದವು. ಕಳ್ಳತನ ಮಾಡಿದ ಮೂವರ ಪೈಕಿ ಇಬ್ಬರನ್ನು ಬಂಧಿಸಿದ್ದು, ಓರ್ವ ಪರಾರಿಯಾಗಿದ್ದಾನೆ ಎಂದು ಹೇಳಿದರು.
ಅದೇ ದಿನ ಆದರಹಳ್ಳಿ ಗ್ರಾಮದ ಬಸ್ ಸ್ಟ್ಯಾಂಡ್ ಹತ್ತಿರ ಇರುವ ಮಾನಪ್ಪ ಸಣ್ಣರಾಮಪ್ಪ ವಡ್ಡರ, ಇವರ ಗ್ರಾಮ ಒನ್ ಆನ್‌ಲೈನ್ ಸೆಂಟರ್ ಅಂಗಡಿ ಕೀಲಿ ಮುರಿದು ಅಂಗಡಿಯಲ್ಲಿದ್ದ ಒಟ್ಟು 18 ಸಾವಿರ ಮೊತ್ತದ ಒಂದು ಲ್ಯಾಪ್ ಟಾಪ್ ಹಾಗೂ ಅದರ ಚಾರ್ಜರ್ ಸಮೇತ ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಮಂಗೇಶ ಮಾಮಲೇಶಪ್ಪ ಲಮಾಣಿ ಲಕ್ಷ್ಮೇಶ್ವರ ಠಾಣೆಯಲ್ಲಿ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಅಧಿಕಾರಿಗಳು ಆರೋಪಿಗಳನ್ನು ಪತ್ತೆ ಹಚ್ಟುವಲ್ಲಿ ಯಶಸ್ವಿಯಾಗಿದ್ದಾರೆ.ಆರೋಪಿತರ ಪೈಕಿ ಆರೋಪಿ ಎ1 ಮತ್ತು ಎ2 ಆರೋಪಿಗಳನ್ನು ಜು.17ರಂದು ಬಂಧಿಸಲಾಗಿದೆ. ಜೊತೆಗೆ, ಲಕ್ಷೇಶ್ವರ, ಶಿರಹಟ್ಟಿ. ಮುಳಗುಂದ ಮತ್ತು ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮನೆಗಳ್ಳತನ ಹಾಗೂ ಮೋಟಾರ್ ಸೈಕಲ್ ಕಳ್ಳತನ ಮಾಡಿದ ಪ್ರಕರಣಗಳಲ್ಲಿ ಆರೋಪಿತರಿಂದ ಒಂದು ಹೊಂಡಾ ಶೈನ್ ಬೈಕ್, ಎರಡು ಬಜಾಜ್ ಪಲ್ಸರ್ ಬೈಕ್, ಒಂದು ಹಿರೋ ಎಚ್.ಎಫ್.ಡಿಲೆಕ್ಸ್ ಕಂಪೆನಿಯ ಬೈಕ್ ಸೇರಿ ಒಟ್ಟು 4 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.