ಹಾವೇರಿ: ಕುಡಿವ ನೀರಿನ ಬಹುತೇಕ ಎಲ್ಲ ಯೋಜನೆಗಳ ಅನುಷ್ಠಾನಕ್ಕೆ ನಿಗದಿಪಡಿಸಿದ್ದ ಅವಧಿ ಮುಗಿದು ಎರಡು ವರ್ಷಗಳ ಮೇಲಾಗಿದೆ. ಗುತ್ತಿಗೆದಾರರ ಬಿಲ್ ಕೂಡ ಶೇ. 90ರಷ್ಟು ಪಾವತಿಯಾಗಿದೆ. ಆದರೂ ಯೋಜನೆ ಅನುಷ್ಠಾನಗೊಂಡಿಲ್ಲ. ಯೋಜನೆಗಳನ್ನು ಯಾವಾಗ ಪೂರ್ಣಗೊಳಿಸುತ್ತೀರಿ ಲಿಖಿತವಾಗಿ ಕೊಡಿ, ಇಲ್ಲವೇ ಗುತ್ತಿಗೆದಾರರನ್ನು ಕಪ್ಪ್ಪು ಪಟ್ಟಿಗೆ ಸೇರಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರಿಸಿದರು.
ಜಲಜೀವನ್ ಮಿಷನ್, ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆ ಸೇರಿದಂತೆ ಜಿಲ್ಲೆಯ ಎಲ್ಲ ಯೋಜನೆಗಳ ಅನುಷ್ಠಾನಕ್ಕೆ ಇದ್ದ ತಾಂತ್ರಿಕ ಅಡಚಣೆಗಳನ್ನು ನಾನೇ ಖುದ್ದಾಗಿ ಪರಿಹರಿಸಿದ್ದೇನೆ. ಆದರೂ ಯಾಕೆ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿಲ್ಲ. ನಿಮ್ಮ ಕರ್ತವ್ಯಲೋಪಕ್ಕೆ ಸಚಿವರು, ಶಾಸಕರು ಜಿಲ್ಲೆಯ ಜನರ ಕೋಪಕ್ಕೆ ತುತ್ತಾಗಬೇಕಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ ಕೆಡಿಪಿ ಸಭೆಯ ಹೊರತಾಗಿಯೂ ನೀರಿನ ಯೋಜನೆಗಳ ಅನುಷ್ಠಾನಕ್ಕೆ ಹಲವು ಪ್ರತ್ಯೇಕ ಸಭೆಗಳನ್ನು ನಡೆಸಿದ್ದೇನೆ. ಆದರೂ ಸಹ ನೀವು ಗಂಭೀರವಾಗಿ ಪರಿಗಣಿಸಿಲ್ಲ. ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳೂ ಈ ಬಗ್ಗೆ ಗಮನಹರಿಸಬೇಕಾಗಿದ್ದು, ಸಭೆ ನಡೆಸಲು ಅವರಿಗೆ ಸೂಚನೆ ನೀಡಿ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರಿಗೆ ಸೂಚಿಸಿದರು.
ಅರಣ್ಯ ಇಲಾಖೆ ಅನುಮತಿ ಅಗತ್ಯವಿದೆ ಎಂದು ಈಗ ಹೇಳುತ್ತಿದ್ದೀರಿ, ಈ ಸಮಸ್ಯೆಯನ್ನೂ ಈಗಾಗಲೇ ಪರಿಹರಿಸಲಾಗಿದೆ. ಗುತ್ತಿಗೆದಾರರ ಮೇಲೆ ನಿಮಗೆ ನಿಯಂತ್ರಣ ಇಲ್ಲ. ಲೋಪ ಎಸಗಿರುವ ಅಷ್ಟು ಗುತ್ತಿಗೆದಾರರಿಗೆ ನೋಟಿಸ್ ಕೊಟ್ಟಿದ್ದೀರಿ ಹೇಳಿ ಎಂದು ಪ್ರಶ್ನಿಸಿದರು.ಕಳೆದ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸರ್ಕಾರದಿಂದ ಎಷ್ಟು ಹಣ ಬಿಡುಗಡೆಯಾಗಿದೆ. ಯಾವ ಯಾವ ಉದ್ದೇಶಕ್ಕೆ ಎಷ್ಟು ಬಳಕೆ ಮಾಡಲಾಗಿದೆ ಎಂಬ ಮಾಹಿತಿ ಕೇಳಿದ ಸಚಿವರು, ಬ್ಯಾಡಗಿ ತಾಲೂಕಿನಲ್ಲಿ ಸ್ಯಾಂಪಲ್ ಸರ್ವೇ ಮಾಡಿ, ಹಾವೇರಿ ನಗರದ ಕುಡಿಯುವ ನೀರು ಪೂರೈಕೆ ಹಾಗೂ ಒಳಚರಂಡಿ ಯೋಜನೆಗೆ 2000ದಿಂದ ಇದುವರೆಗೆ ಎಷ್ಟು ಅನುದಾನ ಬಿಡುಗಡೆಯಾಗಿದೆ? ಎಷ್ಟು ಅನುದಾನ ಯಾವ ಯಾವ ಉದ್ದೇಶಕ್ಕೆ ಬಳಕೆಯಾಗಿದೆ. ಪೂರ್ಣ ಮಾಹಿತಿಯ ವರದಿಯನ್ನು ತಕ್ಷಣ ಕೊಡಿ ಎಂದು ಸೂಚಿಸಿದರು.ಆಣೂರು ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆ ಬಹುತೇಕ ಮುಕ್ತಾಯ ಹಂತಕ್ಕೆ ಬಂದಿದೆ. ಜೋನ್ 1 ಮತ್ತು ಜೋನ್ 3ಕ್ಕೆ ಈ ತಿಂಗಳ 15ರೊಳಗೆ ನೀರು ಪೂರೈಕೆ ಮಾಡಲಿದ್ದು, ಜೋನ್ 3ಗೆ ನೀರು ಪೂರೈಕೆ ಮಾಡಲು ಸ್ವಲ್ಪ ಸಮಯ ಬೇಕಾಗಲಿದೆ ಎಂದು ಅಧಿಕಾರಿಗಳು ತಿಳಿಸಿದರು.ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಅಂತರ್ಜಲಮಟ್ಟ ಕುಸಿದಿದ್ದು, ಬೇಸಿಗೆ ದಿನಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸಬಹುದಾದ ಗ್ರಾಮಗಳನ್ನು ಗುರುತಿಸಲಾಗಿದೆ. ಏಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ಸಮಸ್ಯೆಯಾಗಲಿದ್ದು, ಪರಿಹಾರ ಕ್ರಮಗಳಿಗೆ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ ಎಂದರು.ಜಿಪಂ ಸಿಇಒ ರುಚಿ ಬಿಂದಾಲ್ ಅವರು, ಬಹುಗ್ರಾಮ ನೀರು ಪೂರೈಕೆ ಯೋಜನೆಗಳು ಬಹುತೇಕ ಅಂತಿಮ ಹಂತಕ್ಕೆ ಬಂದಿದ್ದು, ಟ್ರಯಲ್ ರನ್ ಮಾಡಲಾಗಿದೆ ಎಂದು ತಿಳಿಸಿದರು.ಸಭೆಯಲ್ಲಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಬಸವರಾಜ ಶಿವಣ್ಣನವರ, ವಿಧಾನಸಭೆ ಉಪಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ, ಶಾಸಕ ಪ್ರಕಾಶ ಕೋಳಿವಾಡ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್.ಗಾಜಿಗೌಡ್ರ, ಎಸ್ಪಿ ಯಶೋದಾ ವಂಟಿಗೋಡಿ ಇದ್ದರು. ಒಳ್ಳೆಯ ಸುದ್ದಿಗಳೇ ಇಲ್ಲ!: ಜಿಲ್ಲೆಯ ಬಗ್ಗೆ ಪತ್ರಿಕೆಗಳಲ್ಲಿ ಪ್ರತಿನಿತ್ಯ ಸಮಸ್ಯೆಗಳು, ಇಲ್ಲವೇ ನಕಾರಾತ್ಮಕ ಸುದ್ದಿಗಳು ಇರುತ್ತವೆಯೇ ಹೊರತು, ಒಳ್ಳೆಯ ಸುದ್ದಿಗಳು ಬರುತ್ತಿಲ್ಲ. ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಕೆಲಸ ಮಾಡಬೇಕು. ಹಾವೇರಿ ಪತ್ರಿಕೆಗಳನ್ನು ತೆರೆದರೆ ಲೋಕಾಯುಕ್ತ ದಾಳಿ, ಎಲ್ಲೆಂದರಲ್ಲಿ ಕಸ... ಇಂತಹ ಸುದ್ದಿಗಳೇ ಕಣ್ಣಿಗೆ ಬೀಳುತ್ತವೆ. ಮೆಚ್ಚುಗೆಯ ವರದಿಗಳೂ ಬರುವಂತೆ ಕೆಲಸ ಮಾಡಿ ತೋರಿಸಿ. ಒಳ್ಳೆಯ ಕಾರಣಕ್ಕೆ ಸುದ್ದಿಯಾಗಬೇಕೇ ಹೊರತು ನಕಾರಾತ್ಮಕ ಕಾರಣಗಳಿಗೆ ಅಲ್ಲ. ಹಾವೇರಿ ನಗರದ ಅವ್ಯವಸ್ಥೆಯ ಬಗ್ಗೆ ಪೌರಾಯುಕ್ತರನ್ನು ಪ್ರಶ್ನೆ ಮಾಡಿದ ಸಚಿವರು, ಇದುವರೆಗೆ ಎಲ್ಲೆಲ್ಲಿ ಕೆಲಸ ಮಾಡಿ ಬಂದಿದ್ದೀರಿ, ಅಲ್ಲೆಲ್ಲ ಇದೇ ದಕ್ಷತೆಯಿಂದ ಕೆಲಸ ಮಾಡಿ ಬಂದಿದ್ದೀರಾ ಎಂದ ಅವರು, ಪ್ರತಿ ದಿನ ವಾರ್ಡ್ ರೌಂಡ್ ಹಾಕಿ, ಎಲ್ಲೆಲ್ಲಿ ಸಮಸ್ಯೆಗಳಿವೆ ಕಂಡು ಕೊಂಡು ಪರಿಹರಿಸಲು ಪ್ರಯತ್ನಿಸಿ ಎಂದು ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಸೂಚಿಸಿದರು.