ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರವು 18 ಸಾವಿರ ಕೋಟಿ ರು.ಗಳ ನಷ್ಟ ಎಂದು ವರದಿ ನೀಡಿದ್ದು, ಹಣಕಾಸು ಆಯೋಗದ ಪ್ರಕಾರ 4900 ಸಾವಿರ ಕೋಟಿ ರು. ಪರಿಹಾರ ಬರಬೇಕು ಎಂದು ಸ್ವತಃ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೇ ಹೇಳಿದ್ದರು. ಅದರಂತೆ ಕೇಂದ್ರ ಇದೀಗ 3500 ಕೋಟಿ ರು. ಹಣ ಬಿಡುಗಡೆ ಮಾಡಿದೆ. ಈಗ ರಾಜ್ಯ ಸರ್ಕಾರ ತನ್ನ ಪಾಲಿನ ಹಣ ಸೇರಿಸಬೇಕಲ್ಲವೇ? ಅದನ್ನು ರೈತರ ಖಾತೆಗೆ ಹಾಕಬೇಕಲ್ಲವೇ? ಇದರ ಬಗ್ಗೆ ಅಧಿಕಾರಿಗಳಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು. ಬರೀ ಚುನಾವಣೆಯಲ್ಲಿಯೇ ಮುಳುಗಿದರೆ ಆಗದು ಎಂದರು.
ಆರೇಳು ತಿಂಗಳಿಂದ ಸರ್ಕಾರ ಏನೂ ಮಾಡುತ್ತಿಲ್ಲ. ತೀವ್ರ ಬರಗಾಲದಿಂದ ಸಂಕಷ್ಟ ಎದುರಿಸುತ್ತಿರುವ ರೈತರ ನೆರವಿಗೆ ಬಂದಿಲ್ಲ. ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ ಎಂದು ಕೇಂದ್ರದ ವಿರುದ್ಧ ಸದಾ ವಾಗ್ದಾಳಿ ನಡೆಸುವುದೇ ಇವರ ಮಾಮೂಲಿ ನಡೆಯಾಗಿತ್ತು. ಇನ್ನೊಂದೆಡೆ ‘ನನ್ನ ತೆರಿಗೆ ನನ್ನ ಹಕ್ಕು’ ಎಂದು ಹೇಳುತ್ತಾ ಗಲಾಟೆ ಎಬ್ಬಿಸಿದರು. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರದೊಡನೆ ಸಂಘರ್ಷ ಮಾಡುತ್ತಾ ಕೂರುವುದು ಸರಿಯಲ್ಲ. ಪರಸ್ಪರ ಅನುಸರಿಸಿ ಹೋಗಬೇಕು. ಕೇಂದ್ರದಲ್ಲಿ ಮನಮೋಹನ್ ಸಿಂಗ್ ಅವಧಿ ಹತ್ತು ವರ್ಷದಲ್ಲಿ ಕೇವಲ ಎರಡು ಸಾವಿರ ಕೋಟಿ ರು. ಬಂದಿದೆ. ಈಗ ಒಂದೇ ವರ್ಷದಲ್ಲಿ ಮೂರೂವರೆ ಸಾವಿರ ಕೋಟಿ ರು. ಬಂದಿದೆ. ಇದನ್ನು ಸರಿಯಾಗಿ ಬಳಕೆ ಮಾಡಿ ಎಂದು ಸಲಹೆ ನೀಡಿದರು.ರಾಜ್ಯ ಸರ್ಕಾರ ಬರೀ ಗ್ಯಾರಂಟಿಗಳ ಭಜನೆ ಮಾಡುತ್ತಿದೆ. ಅದರ ಹೊರತಾಗಿ ಇನ್ನೊಂದು ವಿಷಯದ ಕುರಿತು ಚರ್ಚೆ ಮಾಡುತ್ತಿಲ್ಲ. ಮೋದಿ ಬಗ್ಗೆ ವಾಗ್ದಾಳಿ ನಡೆಸುವುದಷ್ಟೇ ಇವರ ಕೆಲಸವಾಗಿದೆ ಎಂದು ಟೀಕಾ ಪ್ರಹಾರ ನಡೆಸಿದರು.
ನಾನು ಕೇಂದ್ರ ಸರ್ಕಾರದ ಪರ ವಕಾಲತ್ತು ವಹಿಸುತ್ತೇನೆ ಎಂದುಕೊಳ್ಳಬೇಕಾಗಿಲ್ಲ. ಬದಲಾಗಿ ರಾಜ್ಯ ಸರ್ಕಾರ ಜನರಿಗಾಗಿ ಏನು ಮಾಡುತ್ತಿದೆ ಎಂದು ಪ್ರಶ್ನಿಸುತ್ತೇನೆ. ನನ್ನನ್ನು ನಾಡದ್ರೋಹಿ ಎಂದು ಕಾಂಗ್ರೆಸ್ ಮುಖಂಡರು ಟೀಕಿಸಿದರು. ಮುಂದೆ ಯಾರು ನಾಡದ್ರೋಹಿ ಎಂದು ಗೊತ್ತಾಗುತ್ತದೆ. ಚುನಾವಣೆ ಫಲಿತಾಂಶ ಬಂದಾಗ ಏನೇನು ಆಗಬಹುದು ಎಂಬುದನ್ನು ನೋಡೋಣ ಎಂದರು.
ಸಂಸದ, ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮಾತನಾಡಿ, ಕುಮಾರಸ್ವಾಮಿಯವರು ನನ್ನ ಪರವಾಗಿ ಜಿಲ್ಲೆಯಲ್ಲಿ ಮೂರು ಸಭೆಗಳಲ್ಲಿ ಭಾಗಿಯಾಗಲಿದ್ದು, ಎರಡೂ ಪಕ್ಷಗಳು ಸೇರಿ ಮೋದಿ ಕೈ ಬಲಪಡಿಸಲಾಗುವುದು. ಇಲ್ಲಿ ಗೆಲುವು ಶತ ಸಿದ್ಧ ಎಂದರು.