ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪುರಸಭೆ ವ್ಯಾಪ್ತಿಯ ಒಳಚರಂಡಿ ಮಲೀನ ನೀರು, ಕೈಗಾರಿಕೆಗಳ ತ್ಯಾಜ್ಯ ನೀರು ಹೇಮಾವತಿ ನದಿ ಹಾಗೂ ಕೆರೆ ಕಟ್ಟೆಗಳನ್ನು ಸೇರಿ ಪರಿಸರ ಮಾಲಿನ್ಯವಾಗುತ್ತಿದ್ದರೂ ಯಾವುದೇ ಕ್ರಮ ವಹಿಸದ ವಿವಿಧ ಇಲಾಖೆಗಳ ಅಧಿಕಾರಿಗಳ ವಿರುದ್ಧ ಶಾಸಕ ಎಚ್.ಟಿ.ಮಂಜು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ಹೊರವಲಯದ ರೇಷ್ಮೆ ತರಬೇತಿ ಕೇಂದ್ರದ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆಯಿಂದ ನದಿ ಮತ್ತು ಕೆರೆ, ಕಟ್ಟೆಗಳಿಗೆ ಮಲೀನ ನೀರು ಸೇರುತ್ತಿದೆ. ಪರಿಸರ ಇಲಾಖೆ, ಪುರಸಭೆ, ಕೃಷಿ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳು ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನೆ ಮಾಡಿದರು.
ಪುರಸಭೆ ಒಳಚರಂಡಿ ಯೋಜನೆ ಪೂರ್ಣಗೊಳ್ಳದಿದ್ದರೂ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಅದನ್ನು ಪುರಸಭೆ ಹಸ್ತಾಂತರ ಮಾಡಿಕೊಂಡಿದೆ. ಪಟ್ಟಣದ ಕಾಗುಂಡಿ ಹಳ್ಳದ ಬಳಿ ವೆಟ್ ವೆಲ್ ಕಾರ್ಯನಿರ್ವಹಿಸುತ್ತಿಲ್ಲ. ಪಟ್ಟಣದ ಮಲಯುಕ್ತ ಕಲುಷಿತ ನೀರು ಕಾಗುಂಡಿ ಹಳ್ಳದ ಮೂಲಕ ಹೊಸಹೊಳಲು ಕೆರೆ ಸೇರಿ ನೀರು ಕಲುಷಿತಗೊಳ್ಳುತ್ತಿದೆ ಎಂದರು.ತಾಲೂಕಿನ ಕೋರಮಂಡಲ್ ಸಕ್ಕರೆ ಕಾರ್ಖಾನೆಯ ಹಾರು ಬೂದಿ ಸಮಸ್ಯೆಯಿಂದ ಕಾರ್ಖಾನೆ ಸುತ್ತಮುತ್ತಲ ಹತ್ತಾರು ಗ್ರಾಮಗಳ ಜನ ನರಕಯಾತನೆ ಅನುಭವಿಸುತ್ತಿದ್ದಾರೆ. ರೈತರ ಹೊಲಗದ್ದೆಗಳು ಹಾಳಾಗುತ್ತಿವೆ. ಬೆಳೆಗಳಲ್ಲಿ ಇಳುವರಿ ಕುಸಿತವಾಗಿದೆ ಎಂದು ಕಿಡಿಕಾರಿದರು.
ತೆಂಡೇಕೆರೆ ಬಳಿ ಫುಡ್ ಪಾರ್ಕ್ ಘಟಕಗಳ ತ್ಯಾಜ್ಯ ನೀರು ಕೆಳಭಾಗದ ಕೆರೆ ಕಟ್ಟೆಗಳಿಗೆ ಸೇರಿ ಕೆರೆ ನೀರು ಕಲುಷಿತಗೊಂಡಿದೆ. ಈ ಬಗ್ಗೆ ಪರಿಸರ ಇಲಾಖೆ ಕೇವಲ ಕಾಟಾಚಾರದ ನೋಟಿಸ್ ನೀಡಿ ಕೈ ತೊಳೆದುಕೊಳ್ಳುತ್ತಿದೆ. ನೀರಾವರಿ ಇಲಾಖೆ ಈ ಬಗ್ಗೆ ಮೌನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ತಾಲೂಕಿನ ಹೇಮಗಿರಿ, ಮಂದಗೆರೆ ನಾಲೆಗಳಲ್ಲಿ ಹೂಳೆತ್ತದಿದ್ದರೂ ಸರ್ಕಾರಿ ಹಣ ದುರುಪಯೋಗದ ಬಗ್ಗೆ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರ ಆನಂದ್ ಅವರನ್ನು ಬಹಿರಂಗವಾಗಿಯೇ ಶಾಸಕರು ತರಾಟೆ ತೆಗೆದುಕೊಂಡರು.
ಹೇಮಾವತಿ ಜಲಾಶಯದಲ್ಲಿ ಸಾಕಷ್ಟು ನೀರಿದ್ದರೂ ನಾಲೆ ಕೊನೆ ಭಾಗದ ರೈತರಿಗೆ ನಿಮ್ಮಿಂದ ನೀರು ಕೊಡಲಾಗಲಿಲ್ಲ. ತಕ್ಷಣವೇ ನಾಲೆಗಳಲ್ಲಿ ಹೂಳೆತ್ತಿಸಿ ನಾಲೆಗಳ ಕೊನೆ ಭಾಗದ ಅಚ್ಚುಕಟ್ಟು ರೈತರಿಗೆ ನೀರುಕೊಡಿ ಎಂದು ತಾಕೀತು ಮಾಡಿದರು.ತಾಲೂಕಿನಾದ್ಯಂತ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಸೋಮನಹಳ್ಳಿ ಶಾಲೆ ಮತ್ತು ದೇವಾಲಯ ಸಮೀಪವೇ ಮದ್ಯದಂಗಡಿ ಇದ್ದು, ಅಂಗಡಿ ಸ್ಥಳಾಂತರ ಮಾಡುವಂತೆ ಗ್ರಾಮಸ್ಥರು ದೂರು ನೀಡಿದ್ದರೂ ಅಬಕಾರಿ ಇಲಾಖೆ ಕ್ರಮ ವಹಿಸುತ್ತಿಲ್ಲ. ಕೂಡಲೇ ತೆರವುಗೊಳಿಸುವಂತೆ ಅಬಕಾರಿ ಅಧಿಕಾರಿ ದೀಪಕ್‌ಗೆ ಸೂಚಿಸಿದರು.
ಕೆಡಿಪಿ ಸಭೆಗೆ ತಾಲೂಕಿನ ಪಟ್ಟಣ, ಗ್ರಾಮಾಂತರ ಮತ್ತು ಕಿಕ್ಕೇರಿ ಪೊಲೀಸ್ ಠಾಣೆ ಪೊಲೀಸರು ಪಿಎಸ್ ಐ ಗಳು ಹಾಜರಾಗದೆ ತಮ್ಮ ಅಧೀನ ಸಿಬ್ಬಂದಿಯನ್ನು ಕಳುಹಿಸಿದ್ದಾರೆ. ಪೊಲೀಸ್ ಇಲಾಖೆ ಸರ್ಕಾರಿ ನಿಯಮಗಳನ್ನು ಪಾಲಿಸದೆ ಅಸಹಕಾರ ಧೋರಣೆ ಖಂಡಿಸಿ, ಸಾರ್ವಜನಿಕ ಸಮಸ್ಯೆಯನ್ನು ಯಾರೊಂದಿಗೆ ಚರ್ಚಿಸಬೇಕು. ಶಾಸಕನಾಗಿ ನಾನೇ ಠಾಣೆಗೆ ಬಂದು ಸಮಸ್ಯೆ ಹೇಳಿಕೊಳ್ಳಬೇಕಾ?, ಈ ಬಗ್ಗೆ ಪೊಲೀಸ್ ಕಮೀಷನರ್ ಅವರಿಗೆ ವರದಿ ಮಾಡುವಂತೆ ಸಭೆಯಲ್ಲಿ ಸೂಚಿಸಿದರು.ಪಟ್ಟಣದಲ್ಲಿ ಸ್ಲಂ ಬೋರ್ಡ್ 500 ಮನೆಗಳ ನಿಮಾಣಕ್ಕೆ ಮಂಜೂರಾತಿ ಸಿಕ್ಕದೆ. ಆದರೆ, 15 ಮನೆಗಳನ್ನು ಮಾತ್ರ ನಿರ್ಮಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದಾಗ ಸ್ಲಂ ಬೋರ್ಡ್ ಎಂಜಿನಿಯರ್ ಕುಮಾರೇಶ್ವರ, ಪಟ್ಟಣ ವ್ಯಾಪ್ತಿ 15, ಫಲಾನುಭವಿಗಳು ಹಣ ಸಂದಾಯ ಮಾಡದ ಕಾರಣ 65 ಮನೆಗಳ ಕಾಮಗಾರಿ ಅರ್ಧಕ್ಕೆ ನಿಂತಿದೆ ಎಂದರು.
ತಾಲೂಕಿನ ವಿವಿಧೆಡೆ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದ ಶಾಸಕರು ಹಣವಿದ್ದರೂ ಕಾಮಗಾರಿ ಪೂರ್ಣಗೊಳಿಸದ ನಿರ್ಮಿತಿ ಕೇಂದ್ರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ವಿವಿಧ ಕಾಮಗಾರಿಗಳಿಗೆ ಅಧಿಕಾರಿಗಳು ಗುತ್ತಿಗೆದಾರನಿಗೆ ಬಿಲ್ ಪಾವತಿಸಿರುವ ಬಗ್ಗೆ ಶಾಸಕರು ತನಿಖೆಗೆ ಸೂಚಿಸಿದರು.ಸಭೆಯಲ್ಲಿ ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್, ತಾಪಂ ಆಡಳಿತಾಧಿಕಾರಿ ರಾಜಮೂರ್ತಿ, ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ತಾಪಂ ಇಒ ಕೆ.ಸುಸ್ಮಾ, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಎ.ಬಿ.ಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.