ಕುಡಿಯುವ ನೀರಿಗೆ ಒಳ ಚರಂಡಿ ನೀರು ಸೇರ್ಪಡೆ

KannadaprabhaNewsNetwork | Published : Jan 17, 2024 1:45 AM

ಸಾರಾಂಶ

ಒಳ ಚರಂಡಿ ನೀರಿನ ಸಂಪರ್ಕ ಹಾಗೂ ಕುಡಿಯುವ ನೀರಿನ ನಲ್ಲಿ ಸಂಪರ್ಕ ಒಂದೇ ಕಡೆ ಕೊಟ್ಟಿದ್ದಾರೆ. ಹೀಗಾಗಿ ಕುಡಿಯುವ ನೀರಿನ ಪೈಪ್‌ಗಳು ಒಡೆದು, ಚರಂಡಿ ನೀರು ಮಿಕ್ಸ್‌ ಆಗಿ ನಲ್ಲಿಗಳಲ್ಲಿ ಬರುತ್ತಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನಗರದಲ್ಲಿ ಕುಡಿಯುವ ನೀರಿಗೆ ಓಳ ಚರಂಡಿ (ಯುಜಿಡಿ) ನೀರು ಮಿಶ್ರಣವಾಗುತ್ತಿದ್ದು, ನಗರಸಭೆ ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ ಎಂದು 5ನೇ ವಾರ್ಡಿನ ತಿಮ್ಮಕ್ಕ ಬಡಾವಣೆಯ ನಿವಾಸಿಗಳು ಆರೋಪಿಸಿದ್ದಾರೆ.

ಬರದಿಂದಾಗಿ ಸರಿಯಾಗಿ ಜನರಿಗೆ ಕುಡಿಯಲು ನೀರು ಸಿಗುತ್ತಿಲ್ಲ. ಎಲ್ಲೆಡೆ ನೀರಿಲ್ಲದೇ ಜನ, ಜಾನುವಾರುಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹನಿ ನೀರಿಗೂ ಹಾಹಾಕಾರ ಉಂಟಾಗುತ್ತಿದೆ. ಆದರೆ ನಲ್ಲಿಯಲ್ಲಿ ಒಳ ಚರಂಡಿ ನೀರು ಸೇರುತ್ತಿರುವುದರಿಂದ ನೀರನ್ನು ಹಿಡಿಟ್ಟುಕೊಳ್ಳಲು ಆಗುತ್ತಿಲ್ಲ ಎಂದು ಕುಡಿಯುವ ನೀರನ್ನು ಚರಂಡಿಗೆ ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.ವಾರಕ್ಕೊಮ್ಮೆ ನೀರು ಪೂರೈಕೆ

ಒಳ ಚರಂಡಿ ನೀರಿನ ಸಂಪರ್ಕ ಹಾಗೂ ಕುಡಿಯುವ ನೀರಿನ ನಲ್ಲಿ ಸಂಪರ್ಕ ಒಂದೇ ಕಡೆ ಕೊಟ್ಟಿದ್ದಾರೆ. ಹೀಗಾಗಿ ಕುಡಿಯುವ ನೀರಿನ ಪೈಪ್‌ಗಳು ಒಡೆದು, ಚರಂಡಿ ನೀರು ಮಿಕ್ಸ್‌ ಆಗಿ ನಲ್ಲಿಗಳಲ್ಲಿ ಬರುತ್ತಿದೆ. ಬಳಸಲೂ ಯೋಗ್ಯವಲ್ಲದ ಕೊಳಚೆ ನೀರು ಕುಡಿಯುವುದರಿಂದ ವಾಂತಿ ಭೇದಿ ಸೇರಿದಂತೆ ನಾನಾ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇದೆ. ಈ ಬಡಾವಣೆಯಲ್ಲಿ ವಾರಕ್ಕೊಮ್ಮೆ ಬರುವ ಕುಡಿಯುವ ನೀರು ಪೂರೈಸಲಾಗುತ್ತಿದೆ. ಅದರಲ್ಲಿ ಕೊಳಚೆ ನೀರು ಬರುತ್ತಿದೆ ಎಂದರು. ಕಳೆದ ಎರಡು ದಿನಗಳಿಂದ ಈ ಸಮಸ್ಯೆ ಬಹಿರಂಗವಾಗಿದ್ದು, ಕುಡಿಯುವ ನೀರಿನ ಪೈಪ್ ಲೈನ್ ಒಡೆದು ಅದಕ್ಕೆ ಯುಜಿಡಿ ಸೇರುತ್ತಿದೆಯಾ ಅಥವಾ ಮ್ಯಾನ್ ಹೋಲ್ ಇಲ್ಲವೇ ವಾಲ್ವ್ ಗಳ ಬಳಿ ಸೇರುತ್ತಿದೆಯಾ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಈ ಬಡಾವಣೆಯ ನಾಲ್ಕೈದು ಮನೆಗಳಲ್ಲಿ ಸದ್ಯಕ್ಕೆ ಸಮಸ್ಯೆ ಪತ್ತೆಯಾಗಿದೆ.

ನಗರಸಭೆ ಸದಸ್ಯ ನಾಗರಾಜ್‌ ಮಾತನಾಡಿ, ನಗರಸಭೆ ಆರೋಗ್ಯ ನಿರೀಕ್ಷಕರು ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ತಿಮ್ಮಕ್ಕ ಬಡಾವಣೆಗೆ ಆಗಮಿಸಿ, ಪರಿಶೀಲನೆ ನಡೆಸುವ ಜೊತೆಗೆ, ಸಮಸ್ಯೆಗೆ ಕಾರಣ ಪತ್ತೆ ಮಾಡಬೇಕು. ಪೈಪ್ ಒಡೆದಿದ್ದರೆ ಕೂಡಲೇ ಬದಲಾಯಿಸಬೇಕು ಎಂದು ಒತ್ತಾಯಿಸಿದರು. ಇಲ್ಲಿ ಗಮನಿಸಬಹುದಾದ ಮತ್ತೊಂದು ಅಂಶ ಎಂದರೆ ನಗರಸಭೆ ಅಧ್ಯಕ್ಷರ ಎರಡನೇ ಅವಧಿಗೆ ಅಧ್ಯಕ್ಷರ ಆಯ್ಕೆ ಆಗಿಲ್ಲ. ಈಗ ಅಧ್ಯಕ್ಷರೇ ಇಲ್ಲದಿರುವ ಕಾರಣ ಸಂಪೂರ್ಣ ಆಡಳಿತದ ಹೊಣೆಗಾರಿಕೆ ನಗರಸಭೆ ಆಯುಕ್ತರ ಮೇಲೆ ಇದೆ. ಚಿಕ್ಕಬಳ್ಳಾಪುರದ ಎಲ್ಲ ವಾರ್ಡ್ ಗಳ ಸಮಸ್ಯೆಗಳನ್ನು ಪೌರಾಯುಕ್ತರೇ ನಿವಾರಿಸಬೇಕಾಗಿದೆ.

ಸಿಕೆಬಿ-4 ಚಿಕ್ಕಬಳ್ಳಾಪುರ ನಗರದ 5ನೇ ವಾರ್ಡ್‌ನ ನೀರಿಗೆ ಒಳ ಚರಂಡಿ ನೀರು ಮಿಶ್ರಣ ಆಗಿರುವುದನ್ನು ನಗರಸಭಾ ಸದಸ್ಯ ನಾಗರಾಜ್‌ ಪರಿಶೀಲಿಸಿದರು.

Share this article