ಕನ್ನಡಪ್ರಭ ವಾರ್ತೆ ಗುರುಮಠಕಲ್
ರಾಜ್ಯ ಸರ್ಕಾರಿ ನೌಕರರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಈಡೇರಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ನೌಕರರ ಹೋರಾಟಕ್ಕೆ ಸದಾ ಬೆಂಬಲವಾಗಿರುವುದಾಗಿ ಶಾಸಕ ಶರಣಗೌಡ ಕಂದಕೂರು ಹೇಳಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಸರ್ಕಾರಿ ನೌಕರರ ಸಂಘದಿಂದ ಆಯೋಜಿಸಿದ್ದ ಹೋರಾಟದಲ್ಲಿ ಭಾಗಿಯಾಗಿ ಮನವಿ ಸ್ವೀಕರಿಸಿ ಮಾತನಾಡಿದರು.
ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ನೌಕರರ ಪಾತ್ರ ಬಹುಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಶೀಘ್ರವೇ ಬಹುವರ್ಷಗಳ ಬೇಡಿಕೆ ಈಡೇರಿಕೆಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ನೌಕರರ ಸಂಘದ ಅಧ್ಯಕ್ಷ ಸಂತೋಷ ಕುಮಾರ್ ನೀರೆಟಿ ಮಾತನಾಡಿ, ರಾಜ್ಯ ಸರ್ಕಾರವು ನೂತನ ಪಿಂಚಣಿ ಪದ್ಧತಿ (ಎನ್‌ಪಿಎಸ್) ರದ್ದುಪಡಿಸಿ, ಹಳೆ ಪಿಂಚಣಿ ಪದ್ಧತಿ (ಒಪಿಎಸ್) ಜಾರಿಗೆ ತರಬೇಕು. 7ನೇ ವೇತನ ಆಯೋಗದ ವರದಿ ಜಾರಿಗೊಳಿಸಬೇಕು ಎಂದು ಮನವಿ ಮಾಡಿದರು.
ಹಿಂದಿನ ಸರ್ಕಾರವು ರಚಿಸಿದ್ದ ಏಳನೇ ವೇತನ ಆಯೊಗದ ಮಧ್ಯಂತರ ಪರಿಹಾರ ಮಾತ್ರ ಬಂದಿದೆ. ಅಲ್ಲದೆ, ಆಯೋಗದ ಅವಧಿ 2ನೇ ಬಾರಿ ಮುಂದೂಡಿಕೆ ಮಾಡಿರುವುದರಿಂದ ನೌಕರರಿಗೆ ಅನ್ಯಾಯವಾಗಿದೆ. ಅಲ್ಲದೆ, ಹೊಸ ಪಂಚಣಿ ಪದ್ಧತಿ ನೌಕರರ ಪಾಲಿಗೆ ಕಂಟಕವಾಗಿದೆ. ಅನ್ಯಾಯ ಸರಿಪಡಿಸುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು ಎಂದು ಗಮನ ಸೆಳೆದರು.
ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ನಗದು ರಹಿತ ಚಿಕಿತ್ಸೆ ನೀಡುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಮನವಿ ಮಾಡಿದರು.
ಮುಖ್ಯಾಧಿಕಾರಿ ಭಾರತಿ ದಂಡೋತಿ, ಭಾರತಿ ಸಜ್ಜನ್, ಎಜಾಜ್ ಉಲ್ ಹಕ್, ಭೀಮಪ್ಪ ಮನ್ನೆ, ಬಾಲರಾಜ, ಲಕ್ಷ್ಮಿಕಾಂತರೆಡ್ಡಿ, ಕೃಷ್ಣರೆಡ್ಡಿ, ನಾರಾಯಣರೆಡ್ಡಿ ಪೊಲೀಸ್ ಪಾಟೀಲ್, ಸಿಆರ್‌ಪಿ ಬಾಲಪ್ಪ, ಲಕ್ಷ್ಮಣರಾವ, ರವಿ ಕುಮಾರ, ನಾಗೇಶ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಇದ್ದರು.