ಮಹಿಳೆಗೆ ಗೌರವ ನೀಡುವ ದೇಶ ನಮ್ಮದು: ಮಾಜಿ ಸಚಿವ ಕೆಎಸ್ ಈಶ್ವರಪ್ಪ

KannadaprabhaNewsNetwork | Updated : Jan 16 2024, 03:01 PM IST

ಸಾರಾಂಶ

ಜಗತ್ತಿನ ಬೇರೆ ರಾಷ್ಟ್ರಗಳಲ್ಲಿ ಹೆಣ್ಣನ್ನು ಭೋಗದ ವಸ್ತುವನ್ನಾಗಿ ನೋಡಿದರೆ, ನಮ್ಮ ದೇಶದಲ್ಲಿ ತಾಯಿ ಸ್ವರೂಪದಲ್ಲಿ ಕಾಣುತ್ತೇವೆ. ಮಹಿಳೆಗೆ ಗೌರವವನ್ನು ನೀಡುವ ದೇಶ ನಮ್ಮದು.

ಕನ್ನಡಪ್ರಭ ವಾರ್ತೆ ಸವಣೂರು

ನೆಮ್ಮದಿಯ ಬದುಕಿಗಾಗಿ ಬೆಳಗ್ಗೆಯಿಂದ ಸಂಜೆವರೆಗೂ ದುಡಿದು ಬಳಿಕ ದೇವಸ್ಥಾನ ಹಾಗೂ ಮಠ, ಮಂದಿರಗಳಿಗೆ ತೆರಳಿ, ಸ್ವಾಮೀಜಿಯವರ ಆಶೀರ್ವಾದ ಪಡೆದು ನೆಮ್ಮದಿ, ಶಾಂತಿಯಿಂದ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವೆಂದು ಜಗತ್ತಿಗೆ ಸಾರಿದವರು ಭಾರತೀಯರು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಹೂವಿನ ಶಿಗ್ಲಿ ವಿರಕ್ತಮಠದ 45ನೇ ಜಾತ್ರಾ ಮಹೋತ್ಸವ ಹಾಗೂ ನಿರಂಜನ ಮಹಾಸ್ವಾಮೀಜಿಗಳ 14ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಮಹಾರಥೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಗತ್ತಿನ ಬೇರೆ ರಾಷ್ಟ್ರಗಳಲ್ಲಿ ಹೆಣ್ಣನ್ನು ಭೋಗದ ವಸ್ತುವನ್ನಾಗಿ ನೋಡಿದರೆ, ನಮ್ಮ ದೇಶದಲ್ಲಿ ತಾಯಿ ಸ್ವರೂಪದಲ್ಲಿ ಕಾಣುತ್ತೇವೆ. ಮಹಿಳೆಗೆ ಗೌರವವನ್ನು ನೀಡುವ ದೇಶ ನಮ್ಮದು ಎಂದು ಹೇಳಿದರು.

ಸಾನಿಧ್ಯ ವಹಿಸಿದ್ದ ಹೊಸರಿತ್ತಿಯ ಸಿದ್ದಲಿಂಗೇಶ್ವರ ಮಠದ ಗುದ್ದಲಿಂಗೇಶ್ವರ ಮಹಾಸ್ವಾಮಿಗಳು ಮಾತನಾಡಿ, ಜನರಿಗೆ ಆರೋಗ್ಯದ ಜೊತೆಗೆ ದೈವತ್ವದ ಬೆಳಕು ಕಾಣಬೇಕು, ಮಠ, ಮಂದಿರಗಳು ಜನರಿಗಾಗಿ ಜನರಿಗೋಸ್ಕರ ಇವೆ. ಈ ಪರಂಪರೆಯನ್ನು ಕಾಪಾಡಿಕೊಂಡು ಹೋಗುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಕ್ಕಿಆಲೂರು ವಿರಕ್ತಮಠದ ಶಿವಬಸವ ಮಹಾಸ್ವಾಮಿಗಳು ಮಾತನಾಡಿ, ಹಬ್ಬ ಹರಿದಿನಗಳಲ್ಲಿ ದೇವರ ಸ್ಮರಣೆ, ಸಾಹಿತ್ಯದ ಮೂಲಕ ಜನರಿಗೆ ಉತ್ತಮ ವಿಚಾರಧಾರೆಗಳನ್ನು ನೀಡುವಂತಹ ಕಾರ್ಯಕ್ರಮಗಳನ್ನೂ ಮಾಡಲಾಗುತ್ತದೆ. ಸಾರ್ವಜನಿಕರು ಭಾಗವಹಿಸಿ ಉತ್ತಮವಾದ ಸಂದೇಶಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ನಿರಂಜನ ಮಹಾಸ್ವಾಮೀಜಿ ಅವರ ಸ್ಮರಣೋತ್ತರವಾಗಿ ವೈದ್ಯ ನಿರಂಜನ ಪ್ರಶಸ್ತಿಯನ್ನು ಪ್ರತಿ ವರ್ಷ ಜಾತ್ರಾ ಮಹೋತ್ಸವದಲ್ಲಿ ನೀಡಲಾಗುವುದು. 2024ನೇ ಸಾಲಿನ ಪ್ರಶಸ್ತಿಯನ್ನು ಡಾ. ಅಶ್ವಿನಿ ವಸ್ತ್ರದ ಅವರಿಗೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಹಿರಿಮಲ್ಲನ್ಕೇರಿಯ ವಿರಕ್ತಮಠದ ಬಸವರಾಜ್ ಮಹಾಸ್ವಾಮಿಗಳು, ಕುಂದಗೊಳದ ಕಲ್ಯಾಣಪುರ ಮಠದ ಅಭಿನವ ಬಸವಣ್ಣ ಅಜ್ಜನವರ, ಶ್ರೀದೇವಿ ತಾಯಿ ಹಿರೇಮಠ ಹುಲ್ಯಾಳ, ಹೂವಿನಶಿಗ್ಲಿ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Share this article