ಮಹೇಶ ಛಬ್ಬಿ
ಕನ್ನಡಪ್ರಭ ವಾರ್ತೆ ಗದಗಉತ್ತರ ಕರ್ನಾಟಕದ ವಿದೇಶಿ ಹಕ್ಕಿಗಳ ತಾಣ, ಗದಗ ಜಿಲ್ಲೆಯ ಪಕ್ಷಿ ಸಂರಕ್ಷಣೆಯ ಖ್ಯಾತಿಯ ಮಾಗಡಿ ಕೆರೆಯು ರಾಮ್ಸರ್ ವೆಟ್‌ಲ್ಯಾಂಡ್ ಸೈಟ್ ಪಟ್ಟಿಗೆ ಸೇರ್ಪಡೆಯಾಗಿದ್ದು, ಪ್ರವಾಸೋದ್ಯಮ ಉತ್ತೇಜನದ ಜತೆಗೆ ಅಭಿವೃದ್ಧಿಗೆ ಸಹಕಾರಿಯಾಗಲಿದೆ.
ಜನರಲ್ ಆಫ್ ದಿ ಕನವೆನ್ಶನ್ ಆನ್ ವೆಟ್‌ಲ್ಯಾಂಡ್ಸ್ ನ ಡಾ. ಮುಸಂಡ ಮುಂಬಾ ಅವರು ಅಧಿಕೃತವಾಗಿ ದೇಶದ ಒಟ್ಟು ೫ ಚೌಗು ಪ್ರದೇಶಗಳು ರಾಮ್ಸರ್ ವೆಟ್ ಲ್ಯಾಂಡ್ ಸೈಟ್ ಪಟ್ಟಿಗೆ ಸೇರ್ಪಡೆಗೊಂಡಿದೆ ಎಂದು ಘೋಷಿಸಿರುತ್ತಾರೆ. ಅಂತಹ ೫ ರಾಮ್ಸರ್ ತಾಣಗಳಲ್ಲಿ ರಾಜ್ಯದ ೪ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶಗಳ ಜತೆಗೆ ಗದಗ ಜಿಲ್ಲೆಯ ಮಾಗಡಿ ಕೆರೆ ಸೇರ್ಪಡೆಯಾಗಿರುವುದು ಇಡೀ ಜಿಲ್ಲೆಯ ಜನತೆಗೆ ಖುಷಿ ತಂದಿದೆ.ಕೆಲ ಮಾನದಂಡಗಳು: ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶವನ್ನು ಕೆಲ ಮಾನದಂಡಗಳ ಆಧಾರದ ಮೇಲೆ ರಾಮ್ಸರ್ ವೆಟ್ ಸೈಟ್ ಪಟ್ಟಿಗೆ ಸೇರಿಸಲಾಗುತ್ತದೆ. ಅವುಗಳಲ್ಲಿ ಸಿಹಿ ನೀರು ಪೂರೈಕೆ, ಅಂತರ್ಜಲ ಮಟ್ಟ ಹೆಚ್ಚಾಗುವ, ಪ್ರವಾಹ ನಿಯಂತ್ರಣ, ಆಹಾರ ಮತ್ತು ಕಟ್ಟಡ ಸಾಮಾಗ್ರಿಗಳು ಸಿಗುವ, ಹವಮಾನ ಬದಲಾವಣೆ ನಿಯಂತ್ರಣ ಮಾಡುವ ಅಪರೂಪದ ಅಥವಾ ವಿಶಿಷ್ಟವಾದ ನೈಸರ್ಗಿಕ ಸೂಕ್ತವಾದ ಜೈವಿಕ ಭೌಗೋಳಿಕ ಪ್ರದೇಶದಲ್ಲಿ ಕಂಡು ಬರುವ ತೇವ ಭೂಮಿ, ಸಸ್ಯ, ಪ್ರಾಣಿ, ಜಲಪಕ್ಷಿಗಳ ಜಾತಿಗಳ ಸಂಖ್ಯೆಯನ್ನು ಹೆಚ್ಚಿಸುವ ಹಾಗೇ ಅವುಗಳಿಗೆ ಪ್ರತಿಕೂಲ ಪರಿಸ್ಥಿತಿಗಳಲ್ಲಿ ಆಶ್ರಯ ನೀಡುವ ಸೂಕ್ತವಾದ ತಾಣಗಳು ಸೇರಿದಂತೆ ಇತರೆ ಮಾನದಂಡಗಳ ಆಧಾರದ ಮೇಲೆ ಜಿಲ್ಲೆಯ ಮಾಗಡಿ ಕೆರೆ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶವು ಸೇರ್ಪಡೆಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ದೊರಕ್ಕಿದ್ದು ಜಿಲ್ಲೆಯ ವೈವಿಧ್ಯತೆಯ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ.ವೆಟ್‌ಲ್ಯಾಂಡ್ ಸೈಟ್‌ಗೆ ಪ್ರದೇಶವು ಸೇರ್ಪಡೆಯಾಗುವುದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ದೊರೆಯುತ್ತದೆ. ಈ ಪ್ರದೇಶಗಳಿಗೆ ಕಾನೂನು ರಕ್ಷಣೆಯನ್ನು ಒದಗಿಸುತ್ತದೆ. ಒಂದು ರಾಮ್ಸರ್ ಟ್ಯಾಗ್ ಅಲ್ಲಿನ ರಕ್ಷಣಾ ಆಡಳಿತವನ್ನು ಬಲಪಡಿಸಲು ಅಧಿಕಾರವನ್ನು ನೀಡುತ್ತದೆ ಮತ್ತು ಜೌಗು ಪ್ರದೇಶಗಳ ಮೇಲಿನ ಅತಿಕ್ರಮಣ ಇತ್ಯಾದಿಗಳ ವಿರುದ್ಧ ರಕ್ಷಣೆಯನ್ನು ಒದಗಿಸುತ್ತದೆ. ಒಂದು ಚೌಗು ಪ್ರದೇಶವನ್ನು ರಾಮ್ಸಾರ್ ಸೈಟ್ ಎಂದು ಗೊತ್ತುಪಡಿಸಿದರೆ ಅದು ಹೆಚ್ಚು ಸಾರ್ವಜನಿಕ ಗಮನವನ್ನು ಪಡೆಯುತ್ತದೆ.ರಾಮ್ಸರ್ ವೆಟ್ ಲ್ಯಾಂಡ್ ಸೈಟ್ ಪಟ್ಟಿಗೆ ಸೇರ್ಪಡೆಗೊಂಡ ಪ್ರದೇಶವನ್ನು ಹೆಚ್ಚಿನ ಸಂರಕ್ಷಣೆ ಮಾಡಲು ಕ್ರಮ ವಹಿಸುವುದರ ಜತೆಗೆ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿ ಮಾಡಲಾಗುತ್ತದೆ. ಇದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತದೆ. ಅಷ್ಟೇ ಅಲ್ಲದೆ ಈ ಪ್ರದೇಶಕ್ಕೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಸಂಶೋಧಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಧ್ಯಯನ ನಡೆಸುವುದರಿಂದ ಪ್ರವಾಸೋದ್ಯಮ ಉತ್ತೇಜನ ಜತೆಗೆ ಅಭಿವೃದ್ಧಿಯಾಗುತ್ತದೆ. ಇದು ಪ್ರಸ್ತುತ ಅಗತ್ಯವಿರುವ ಸ್ಥಳೀಯ ಜೈವಿಕ ಮತ್ತು ಪರಿಸರದ ಆರೋಗ್ಯವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.
ಗದಗ ಜಿಲ್ಲೆಯ ಪಕ್ಷಿ ಸಂರಕ್ಷಣಾ ಮೀಸಲು ಮಾಗಡಿ ಕೆರೆಯು ರಾಮ್ಸರ್ ವೆಟ್‌ಲ್ಯಾಂಡ್ ಸೈಟ್ ಪಟ್ಟಿಗೆ ಸೇರ್ಪಡೆಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ದೊರಕಿದ್ದು ಜಿಲ್ಲೆಗೆ ಹೆಮ್ಮೆಯ ವಿಷಯ ಮತ್ತು ಗದಗ ಜಿಲ್ಲೆಯ ಜೀವ ವೈವಿಧ್ಯತೆಯ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ ಎಂದು ಜೀವವೈವಿಧ್ಯ ಸಂಶೋಧಕಮಂಜುನಾಥ ನಾಯಕ ಹೇಳುತ್ತಾರೆ.