ಕನ್ನಡಪ್ರಭ ವಾರ್ತೆ ಕಲಬುರಗಿ
ನಗರದ ವರ್ತುಲ ಮಾರ್ಗದಲ್ಲಿರುವ ಸೇವಾ ರಸ್ತೆಯ ಸುಧಾರಣೆಗೆ ಕೇಂದ್ರ ಸಚಿವರು 57 ಕೋಟಿ ರು.ಗಳು ಮಂಜೂರು ಮಾಡಿದ್ದಾರೆ ಎಂದು ಸಂಸದ ಡಾ. ಉಮೇಶ್ ಜಾಧವ್ ತಿಳಿಸಿದ್ದಾರೆ.ಹಲವಾರು ವರ್ಷಗಳಿಂದ ಖರ್ಗೆ ಪೆಟ್ರೋಲ್ ಪಂಪ್‍ನಿಂದ ಹುಮನಾಬಾದ್ ಕ್ರಾಸ್ ವರ್ತುಲ ಮಾರ್ಗದವರೆಗೂ ಅತಿಕ್ರಮಣವಾಗಿರುವುದರಿಂದ ಅಲ್ಲಿ ಸೇವಾ ರಸ್ತೆ ನಿರ್ಮಿಸಲು ಸಾಧ್ಯವಾಗಿಲ್ಲ. ಹೀಗಾಗಿ ಅನೇಕ ಬಾರಿ ಸಚಿವರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿಯ ಮೇಲಾಧಿಕಾರಿಗಳಿಗೆ ಭೇಟಿಯಾಗಿ ಅತಿಕ್ರಮಣ ಹಾಗೂ ಅಪೂರ್ಣ ಸೇವಾ ರಸ್ತೆಯಿಂದ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಅದಕ್ಕೆ ಸರಿಪಡಿಸಬೇಕು ಎಂದು ಕೋರಿದಾಗ ಅದಕ್ಕೆ ಮನ್ನಣೆ ಕೊಟ್ಟು ಹಣ ಮಂಜೂರು ಮಾಡಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಶಹಾಬಾದ್ ರೈಲ್ವೆ ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಒಪ್ಪಿಗೆ:ಜಿಲ್ಲೆಯ ಶಹಾಬಾದ್ ರೈಲ್ವೆ ನಿಲ್ದಾಣದಲ್ಲಿ ಬಿಜಾಪುರ-ಹೈದರಾಬಾದ್ ಎಕ್ಸ್‌ಪ್ರೆಸ್ (ಗಾಡಿ ಸಂಖ್ಯೆ 17029/17230) ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ಭುವನೇಶ್ವರ್ ಕೋಣಾರ್ಕ್ ಎಕ್ಸ್‌ಪ್ರೆಸ್ (ಗಾಡಿ ಸಂಖ್ಯೆ 11019/11020), ಈ ಎರಡು ರೈಲುಗಳ ನಿಲುಗಡೆಗೆ ರೈಲ್ವೆ ಇಲಾಖೆ ಒಪ್ಪಿದೆ ಎಂದು ಕಲಬುರಗಿ ಸಂಸದ ಡಾ. ಉಮೇಶ ಜಾಧವ್ ತಿಳಿಸಿದ್ದಾರೆ.
ರೈಲುಗಳ ನಿಲುಗಡೆ ಬಗ್ಗೆ ಈ ಭಾಗದ ಜನರು ಬಹು ದಿನಗಳ ಬೇಡಿಕೆ ಇಟ್ಟಿದ್ದರು, ಅವುಗಳನ್ನೀಗ ರೇಲ್ವೆ ಸಚಿವಾಲಯ ಈಡೇರಿಸಿದೆ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಸಂಸದರು ಕಲಬುರ್ಗಿ ಕ್ಷೇತ್ರದಲ್ಲಿ 4G ಸ್ಯಾಚುರೇಶನ್ ಮೊಬೈಲ್ ಟವರ್‌ಗೆ ಅನುಮೋದನೆಗಾಗಿ ಕೇಂದ್ರ ಸಚಿವರಿಗೆ ಆಗ್ರಹಿಸಿದ್ದಾರೆ.ಕೇಂದ್ರ ರೈಲ್ವೆ ಮತ್ತು ಸಂವಹನ ಮತ್ತು ಮಾಹಿತಿ ತಂತ್ರಜ್ಞಾನದ ಸಚಿವ ಅಶ್ವಿನಿ ವೈಷ್ಣವರನ್ನು ನವದೆಹಲಿಯಲ್ಲಿ ಭೇಟಿಯಾದ ಸಂಸದರು, ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಕೇವಲ ಎರಡು(2) 4G ಸ್ಯಾಚುರೇಶನ್ ಮೊಬೈಲ್ ಟವರ್ ಅನ್ನು ಅನುಮೋದಿಸಲಾಗಿದೆ ಆದರೆ ಜಿಲ್ಲೆಯಲ್ಲಿ ಸುಮಾರು 36 ಹಳ್ಳಿಗಳಲ್ಲಿ ಯಾವುದೇ ಮೊಬೈಲ್ ಸಿಗ್ನಲ್ ಇಲ್ಲದ ಪ್ರದೇಶವೆಂದು ಗುರುತಿಸಲಾಗಿದೆ.
ಈ ಗ್ರಾಮಗಳಿಗೆ 4G ಮೊಬೈಲ್ ಟವರ್, ಸಿಗ್ನಲ್ ಒದಗಿಸುವುದರಿಂದ ಇ-ಆಡಳಿತ, ಮೊಬೈಲ್ ವಾಣಿಜ್ಯ ಸೌಲಭ್ಯಗಳನ್ನು ಬಳಸಲು ಅನುಕೂಲವಾಗುತ್ತದ್ದೆ ಮತ್ತು ಈ ಎಲ್ಲಾ ಗ್ರಾಮಗಳು ಯಾವುದೇ ರೀತಿಯ ಡೇಟಾ ಸಂವಹನಕ್ಕಾಗಿ ತಾಲೂಕಗಳಿಗೆ ಅವಲಂಬಿತವಾಗಿವೆ ಎಂದು ಅಲ್ಲಿನ ಜನರ ತೊಂದರೆಗಳನ್ನು ವಿವರಿಸಿದ್ದಾರೆ.ಕಲ್ಬುರ್ಗಿ ಜಿಲ್ಲೆಯ ಅಫ್ಜಲ್ಪುರ ತಾಲೂಕಿನಲ್ಲಿ 5 ಗ್ರಾಮ, ಸೇಡಂ ತಾಲೂಕಿನ 3 ಗ್ರಾಮಗಳು, ಚಿತ್ತಾಪುರ ತಾಲೂಕಿನ 2 ಗ್ರಾಮಗಳು, ಜೇವರ್ಗಿ ತಾಲೂಕಿನ 5 ಗ್ರಾಮಗಳು, ಕಲ್ಬುರ್ಗಿ ಗ್ರಾಮಾಂತರ ತಾಲೂಕಿನಲ್ಲಿ 9 ಗ್ರಾಮಗಳು ಮತ್ತು ಚಿಂಚೋಳಿ ಆಳಂದ ತಾಲೂಕಿನ ತಲಾ 4 ಗ್ರಾಮಗಳಲ್ಲಿ ಮೊಬೈಲ್ ಸಿಗ್ನಲ್ ಇಲ್ಲದಂತಿದೆ. ಹಾಗೆಯೇ ಈ ಗ್ರಾಮಗಳಿಗೆ ಮೊಬೈಲ್ ಟವರ್ ಅಳವಡಿಸಲು ಕೋರಿದರು.
ಸಂಸದ ಡಾ. ಜಾದವ್ ಬೇಡಿಕೆಗೆ ಸ್ಪಂದಿಸಿದ ಕೇಂದ್ರ ಸಚಿವರು, ಅತಿ ಶೀಘ್ರದಲ್ಲಿಯೇ ಈ ಗ್ರಾಮಗಳಿಗೆ ಡಿಜಿಟಲೀಕರಣ ಗೊಳಿಸುವುದಾಗಿ ಭರವಸೆ ನೀಡಿದರು.ಕಲಬುರಗಿ ಮಹಾನಗರ ಪಾಲಿಕೆಯ ಮಾಜಿ ವಿರೋಧ ಪಕ್ಷದ ನಾಯಕ ವಿಠ್ಠಲ್ ಜಾದವ್, ಶಹಾಬಾದ್ ತಾಲೂಕಿನ ಬಿ ಬಿ ನಾಯಕ್, ಅಬ್ದುಲ್ ವಹಿದ್ ಮುನೀರ್ ಇದ್ದರು.