ಆಪರೇಷನ್ ಬಿಟ್ಟರೆ ಬಿಜೆಪಿಯವರಿಗೆ ಬೇರೇನೂ ಗೊತ್ತಿಲ್ಲ

KannadaprabhaNewsNetwork |  
Published : Feb 03, 2024, 01:46 AM ISTUpdated : Feb 03, 2024, 01:47 AM IST

ಸಾರಾಂಶ

ಜನರ ವಿಶ್ವಾಸ, ನಂಬಿಕೆ ಗಳಿಸುವಲ್ಲಿ ವಿಫಲವಾಗಿರುವ ಬಿಜೆಪಿಗೆ ಆಪರೇಷನ್ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಹಣಕೊಟ್ಟು ಶಾಸಕರನ್ನು ಕೊಂಡುಕೊಂಡು ಬಹುಮತ ಮಾಡಿಕೊಳ್ಳುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಜನರ ವಿಶ್ವಾಸ, ನಂಬಿಕೆ ಗಳಿಸುವಲ್ಲಿ ವಿಫಲವಾಗಿರುವ ಬಿಜೆಪಿಗೆ ಆಪರೇಷನ್ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಹಣಕೊಟ್ಟು ಶಾಸಕರನ್ನು ಕೊಂಡುಕೊಂಡು ಬಹುಮತ ಮಾಡಿಕೊಳ್ಳುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದರು.

ಪಟ್ಟಣದ ಹೆಲಿಪ್ಯಾಡ್‌ನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರು ಕಾಂಗ್ರೆಸ್ಸಿನಿಂದ ಹಲವಾರು ನಾಯಕರು ದುಂಬಾಲು ಬಿದ್ದಿದ್ದಾರೆ ಎಂದು ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಿಂದೆಯೂ ಎರಡು ಬಾರಿ ಹಾಗೇ ಮಾಡಿದ್ದಾರೆ. 2008 ರಿಂದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಇದ್ದಾಗಲೂ ಇದನ್ನೇ ಮಾಡಿದ್ದು. ಎಲ್ಲಾ ಕಡೆ ಕೊಂಡುಕೊಳ್ಳಲು ಪ್ರಯತ್ನ ಮಾಡುತ್ತಾರೆ. ಕೊಂಡುಕೊಳ್ಳಲು ಜನ ಸಿಕ್ಕರೆ ಸರ್ಕಾರ ರಚನೆ ಮಾಡುತ್ತಾರೆ ಎಂದು ದೂರಿದರು.

ಬಿಜೆಪಿಗೆ ಜನ ಪೂರ್ಣ ಅಧಿಕಾರ ಕೊಟ್ಟೇ ಇಲ್ಲ:

ರಾಜ್ಯದಲ್ಲಿ ಜನರು ಬಿಜೆಪಿಗೆ ಜನ ಪೂರ್ಣ ಅಧಿಕಾರ ಕೊಟ್ಟೇ ಇಲ್ಲ. 2008, 2013, 2018ರಲ್ಲಿ ಅವರು ಬಹುಮತದಿಂದ ಗೆದ್ದೇ ಇಲ್ಲ. ಕಾಂಗ್ರೆಸ್ ಪಕ್ಷ 2013ರಲ್ಲಿ ಗದ್ದಿದೆ. 2018ರಲ್ಲಿ ಸೋತು ಪುನಃ 2023ರಲ್ಲಿ 136 ಸ್ಥಾನಗಳನ್ನು ಪಡೆದು ಗೆದ್ದಿದ್ದೇವೆ ಎಂದ ಅವರು, ಕಾಂಗ್ರೆಸ್ ಪಕ್ಷ ಜನರ ವಿಶ್ವಾಸ ಹಾಗೂ ತೀರ್ಪಿನಂತೆ ಅಧಿಕಾರಕ್ಕೆ ಬರುತ್ತದೆ. ಬಿಜೆಪಿಯವರು ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬರುತ್ತಾರೆ ಎಂದು ಆರೋಪಿಸಿದರು.

ರಾಷ್ಟ್ರಧ್ವಜ 140 ಕೋಟಿ ಜನರ ಅಸ್ಮಿತೆಯ ಪ್ರತೀಕ:

ಮಂಡ್ಯದಲ್ಲಿ ಹನುಮಧ್ವಜ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಒತ್ತಾಯಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಮಂಡ್ಯ ಪ್ರಕರಣದ ವಾಸ್ತವಾಂಶವೇ ಅವರಿಗೆ ತಿಳಿದಿಲ್ಲ. ಅಲ್ಲಿ ಕೇವಲ ರಾಷ್ಟ್ರಧ್ವಜ ಹಾಗೂ ಕನ್ನಡ ಧ್ವಜ ಹಾರಿಸುವುದಾಗಿ ಕೆರಗೋಡು ಗ್ರಾಪಂನಲ್ಲಿ ಅನುಮತಿ ಪಡೆದುಕೊಂಡು ಕೇಸರಿ ಧ್ವಜ ಹಾರಿಸಲು ಮುಂದಾಗಿದ್ದರು. ಅವರಿಗೆ ರಾಷ್ಟ್ರಧ್ವಜದ ಬಗ್ಗೆ ಯಾವುದೇ ಗೌರವವಿಲ್ಲ. ರಾಷ್ಟ್ರಧ್ವಜ, ಭಾರತ ದೇಶದ 140 ಕೋಟಿ ಜನರ ಅಸ್ಮಿತೆಯ ಪ್ರತೀಕ. ಇಂತಹ ರಾಷ್ಟ್ರಧ್ವಜವನ್ನು ಹಾಕಲು ಒಪ್ಪದಿರುವವರು ದೇಶಭಕ್ತರೆಂದು ಹೇಳಿಕೊಳ್ಳುತ್ತಾರೆ ಎಂದರು.

ಮಂಡ್ಯದಲ್ಲಿ ರಾಷ್ಟ್ರಧ್ವಜಕ್ಕೆ ಗೌರವ ನೀಡುವ ಕಾಂಗ್ರೆಸ್ ಕಾಶ್ಮೀರದಲ್ಲಿ ರಾಷ್ಟ್ರಧ್ವಜಕ್ಕೆ ಗೌರವ ನೀಡುವುದಿಲ್ಲ ಎಂಬ ಬಿಜೆಪಿಯವರ ಆರೋಪಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಪಕ್ಷ ರಾಷ್ಟ್ರಧ್ವಜಕ್ಕೆ ಸದಾ ಗೌರವ ನೀಡುತ್ತದೆ. 1935ರಲ್ಲಿ ದೇಶಕ್ಕೆ ರಾಷ್ಟ್ರಧ್ವಜವನ್ನು ನೀಡಿದವರು ಕಾಂಗ್ರೆಸ್ ಪಕ್ಷ ಎಂದರು.

ಗೃಹಲಕ್ಮೀ ಯೋಜನೆ ವಿಜಯಪುರ ಜಿಲ್ಲೆಯಲ್ಲಿಯೇ ಅತ್ಯಂತ ಯಶಸ್ವಿಯಾಗಿದೆ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿ ಎಲ್ಲಿ ಹೆಚ್ಚು ನೋಂದಣಿಯಾಗಿದೆಯೋ ಅಲ್ಲಿ ಹೆಚ್ಚಾಗಿರುತ್ತದೆ. ರಾಜ್ಯದಲ್ಲಿ 1.17 ಕೋಟಿ ಮಹಿಳೆಯರಿಗೆ ಡಿಬಿಟಿ ಮೂಲಕ ಹಣ ವರ್ಗಾವಣೆಯಾಗುತ್ತಿದೆ. ವಿಜಯಪುರ ದೊಡ್ಡ ಜಿಲ್ಲೆಯಾಗಿದ್ದು ಇಲ್ಲಿ ಹೆಚ್ಚಾಗಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ