ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ಮಹಾನಗರ ಪಾಲಿಕೆ ಜನತೆಯ ಎಲ್ಲ ರೀತಿಯ ಕುಂದುಕೊರತೆಗಳಿಗೆ ಸಾಧ್ಯವಾದಷ್ಟು ಸ್ಥಳದಲ್ಲೇ ಪರಿಹಾರ ಕೈಗೊಳ್ಳಲು ಮೇಯರ್ ನೇತೃತ್ವದಲ್ಲಿ ‘ಜನಸ್ಪಂದನ’ ಕಾರ್ಯಕ್ರಮಕ್ಕೆ ಡಿ.18ರಂದು ಚಾಲನೆ ಸಿಗಲಿದೆ. ಮಂಗಳೂರು ಪುರಭವನದಲ್ಲಿ ಬೆಳಗ್ಗೆ 10 ಗಂಟೆಗೆ ಜನಸ್ಪಂದನ ಉದ್ಘಾಟನೆಯಾಗಲಿದ್ದು, ದಿನಪೂರ್ತಿ ಜನರ ಅಹವಾಲು ಸ್ವೀಕಾರ ಹಾಗೂ ಅರ್ಜಿ ವಿಲೇವಾರಿ ನಡೆಯಲಿದೆ. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಹಾಗೂ ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಕೂಡ ಭಾಗವಹಿಸಲಿದ್ದಾರೆ ಎಂದು ಮೇಯರ್ ಸುಧೀರ್ ಶೆಟ್ಟಿ ತಿಳಿಸಿದ್ದಾರೆ. ನಾಲ್ಕು ನೋಂದಣಿ ಕೌಂಟರ್:ಶುಕ್ರವಾರ ಪಾಲಿಕೆ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕು ವಿಭಾಗಗಳಾಗಿ ವಿಂಗಡಿಸಿದ್ದು, ಆರೋಗ್ಯ, ಎಂಜಿನಿಯರಿಂಗ್, ನಗರ ಯೋಜನೆ ಮತ್ತು ಕಂದಾಯ ವಿಭಾಗಗಳ ಕೌಂಟರ್ ತೆರೆಯಲಾಗುವುದು. ಬೆಳಗ್ಗೆ 10 ಗಂಟೆಯಿಂದಲೇ ನೋಂದಣಿ ಹಾಗೂ ಅಹವಾಲು ಸ್ವೀಕಾರ ಆನ್‌ಲೈನ್ ಮೂಲಕ ನಡೆಯಲಿದೆ. ನಾಗರಿಕರು ತಮ್ಮ ಅಹವಾಲುಗಳನ್ನು ಅರ್ಜಿ ಮೂಲಕ ಆನ್‌ಲೈನ್‌ನಲ್ಲಿ ಕೌಂಟರ್‌ಗಳಲ್ಲಿ ಸಲ್ಲಿಸಬೇಕು. ಬಳಿಕ ಕ್ರಮವಾಗಿ ಅರ್ಜಿಗಳ ಇತ್ಯರ್ಥಗೊಳಿಸುವ ಪ್ರಕ್ರಿಯೆ ನಡೆಯುತ್ತದೆ. ಈ ವೇಳೆ ಮೇಯರ್ ಮಾತ್ರವಲ್ಲ ಶಾಸಕರು, ಉಪ ಮೇಯರ್, ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಆಯುಕ್ತರು ಸೇರಿದಂತೆ ಎಲ್ಲ ವಿಭಾಗಗಳ ಅಧಿಕಾರಿಗಳು ಉಪಸ್ಥಿತರಿರುತ್ತಾರೆ. ರಸ್ತೆ, ಕುಡಿವ ನೀರು, ದಾರಿದೀಪ, ಘನತ್ಯಾಜ್ಯ, ಕಟ್ಟಡ ಪರವಾನಿಗೆ, ಮಾರುಕಟ್ಟೆ, ವಾಣಿಜ್ಯ, ತೆರಿಗೆ, ಇ ಖಾತಾ ಸೇರಿದಂತೆ ಯಾವುದೇ ಸಮಸ್ಯೆಗಳಿಗೆ ಜನಸ್ಪಂದನದಲ್ಲಿ ಉತ್ತರ ಸಿಗಲಿದೆ ಎಂದರು. ಸ್ಥಳದಲ್ಲೇ ಇತ್ಯರ್ಥಕ್ಕೆ ಆದ್ಯತೆ: ಸ್ಥಳದಲ್ಲೇ ಇತ್ಯರ್ಥಕ್ಕೆ ಆದ್ಯತೆ ನೀಡಲಾಗುವುದು. ಅದು ಸಾಧ್ಯವಾಗದ ಸಮಸ್ಯೆಗಳಿಗೆ 15 ದಿನಗಳಲ್ಲಿ ಸಮರ್ಪಕ ಪರಿಹಾರ ಒದಗಿಸಲಾಗುವುದು. ಜನಸ್ಪಂದನದಲ್ಲಿ ನೇರವಾಗಿ ಮೇಯರ್ ಹಾಗೂ ಶಾಸಕರ ಜತೆ ಸಂವಾದ ನಡೆಸಲು ಅವಕಾಶ ಇದೆ. ಜನವರಿಯಲ್ಲಿ ಸುರತ್ಕಲ್ ವಲಯ ಹಾಗೂ ಕದ್ರಿ ವಲಯಗಳಲ್ಲಿ ಇದೇ ರೀತಿ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಜನಸ್ಪಂದನ ಕಾರ್ಯಕ್ರಮ ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯಲಿದೆ. ಜನಸ್ಪಂದನ ನಡೆಸಿದರೂ ಫೋನ್-ಇನ್ ಹಾಗೂ ಮೇಯರ್ ವಾರ್ಡ್ ಭೇಟಿ ಕಾರ್ಯಕ್ರಮ ಮುಂದುವರಿಯಲಿದೆ ಎಂದರು. ಉಪ ಮೇಯರ್ ಸುನಿತಾ, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾದ ಭರತ್ ಕುಮಾರ್, ಗಣೇಶ್, ವರುಣ್ ಚೌಟ ಇದ್ದರು. ಜನಸ್ಪಂದನ 8 ಯೋಜನೆಗಳಿಗೆ ಸೇರ್ಪಡೆ ಲಾಭಜನಸ್ಪಂದನದಲ್ಲಿ ಪ್ರಧಾನಮಂತ್ರಿ ಸ್ವನಿಧಿ ಯೋಜನೆ ಸೇರ್ಪಡೆಗೆ ಅವಕಾಶ ಇದ್ದು, ಈ ಯೋಜನೆಗೆ ಸೇರುವವರಿಗೆ ಕೇಂದ್ರ ಸರ್ಕಾರದ ಇತರೆ ಎಂಟು ವಿವಿಧ ಯೋಜನೆಗಳಿಗೆ ಸೇರುವ ಲಾಭ ಸಿಗಲಿದೆ. ಪ್ರಧಾನಮಂತ್ರಿ ಜೀವನ್ ಸುರಕ್ಷಾ ಬಿಮಾ ಯೋಜನೆ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ, ಪ್ರಧಾನ ಮಂತ್ರಿ ಶ್ರಮಯೋಗಿ ಮನ್ ಧನ್ ಯೋಜನೆ, ಒಂದು ರಾಷ್ಟ್ರ ಒಂದು ಪಡಿತರ ಚೀಟಿ, ಪ್ರಧಾನ ಮಂತ್ರಿ ಜನ್ ಧನ್ ಯೋಜನೆ, ಬಿಒ ಸಿಡಬ್ಲ್ಯೂ ಅಡಿ ನೋಂದಣಿ, ಪ್ರಧಾನ ಮಂತ್ರಿ ಜನನಿ ಸುರಕ್ಷಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಗಳಿಗೆ ಸುಲಭದಲ್ಲಿ ಸೇರ್ಪಗೊಳ್ಳಲು ಅವಕಾಶವಿದೆ ಎಂದು ಮೇಯರ್ ಸುಧೀರ್ ಶೆಟ್ಟಿ ಹೇಳಿದರು. ಸ್ವನಿಧಿ ಯೋಜನೆಡಿ ಸ್ಥಳದಲ್ಲೇ ಮೊದಲ ಹಂತದಲ್ಲಿ 10 ಸಾವಿರ ರು. ಸೌಲ ಸೌಲಭ್ಯ ಸಿಗಲಿದ್ದು, ಇದರಲ್ಲಿ ಶೇ. 7ರಷ್ಟು ಮೊತ್ತವನ್ನು ಪಾಲಿಕೆ ಭರಿಸಲಿದೆ. ಬೀದಿಬದಿ ವ್ಯಾಪಾರಿಗಳು, ಪತ್ರಿಕಾ ವಿತರಕರು, ದೋಬಿ, ಬಡಗಿ, ಚಮ್ಮಾರ, ಎಳನೀರು ವ್ಯಾಪಾರಿ, ನೈಯ್ಗೆಯವರು ಸೇರಿದಂತೆ ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡವರು ಸ್ವನಿಧಿ ಸಾಲ ಸೌಲಭ್ಯ ಪಡೆಯಬಹುದು. ಇದಕ್ಕೆ ಆಧಾರ್ ಕಾರ್ಡ್, ಬ್ಯಾಂಕ್ ಖಾತೆಯ ಪ್ರತಿ ಹಾಗೂ ಅರ್ಜಿದಾರರು ವ್ಯಾಪಾರ ಮಾಡುತ್ತಿರುವ ಫೋಟೋ ಈ ದಾಖಲೆಗಳನ್ನು ಹಾಜರುಪಡಿಸಬೇಕು. ಈ ಕಾರ್ಯಕ್ರಮದಲ್ಲಿ ಬ್ಯಾಂಕ್ ಅಧಿಕಾರಿಗಳೂ ಇರುವುದರಿಂದ ಸಂಜೆ ವರೆಗೆ ಸ್ವನಿಧಿ ಯೋಜನೆಯ ಸಾಲ ಸೌಲಭ್ಯ ಸ್ಥಳದಲ್ಲೇ ಮಂಜೂರುಗೊಳಿಸಲು ಅವಕಾಶವಿದೆ ಎಂದರು.