ರಾಜಕಾಲುವೆ ಒತ್ತುವರಿಗೆ ಹುನ್ನಾರಕ್ಕೆ ಬ್ರೇಕ್‌

KannadaprabhaNewsNetwork | Published : Dec 18, 2023 2:00 AM

ಸಾರಾಂಶ

ರಾಜಕಾಲುವೆ ಒತ್ತುವರಿಗೆ ಹುನ್ನಾರಕ್ಕೆ ಬ್ರೇಕ್‌ಸ್ಥಳಕ್ಕೆ ದೌಡಾಯಿಸಿದ ಪಾಲಿಕೆ ಅಧಿಕಾರಿಗಳು. ಮಣ್ಣು ತುಂಬಿಸುವ ಕೆಲಸ ಸ್ಥಗಿತ. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉತ್ತರಹಳ್ಳಿಯ ‘ದಿ ಹ್ಯಾಪಿ ವ್ಯಾಲಿ’ ಬಡಾವಣೆಯಲ್ಲಿ ರಾಜಕಾಲುವೆಗೆ ಮಣ್ಣು ಸುರಿದು ಜಾಗ ಕಬ್ಜ ಮಾಡುವ ಹುನ್ನಾರ.

- ಸ್ಥಳಕ್ಕೆ ದೌಡಾಯಿಸಿದ ಪಾಲಿಕೆ ಅಧಿಕಾರಿಗಳು । ಮಣ್ಣು ತುಂಬಿಸುವ ಕೆಲಸ ಸ್ಥಗಿತ

ಕನ್ನಡಪ್ರಭ ವಾರ್ತೆ ಬೆಂಗಳೂರು ದಕ್ಷಿಣ

ಒಂದೆಡೆ ರಾಜಕಾಲುವೆ ಒತ್ತುವರಿ ತೆರವು ಕಾರ್ಯ ನಡೆಸುತ್ತಿದ್ದರೆ ಮತ್ತೊಂದೆಡೆ ರಾಜಕಾಲುವೆಗೆ ಮಣ್ಣು ಸುರಿಯುವ ಮೂಲಕ ಒತ್ತುವರಿ ಮಾಡಲಾಗುತ್ತಿದೆ.ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉತ್ತರಹಳ್ಳಿಯ ‘ದಿ ಹ್ಯಾಪಿ ವ್ಯಾಲಿ’ ಬಡಾವಣೆಯಲ್ಲಿ ರಾಜಕಾಲುವೆಗೆ ಮಣ್ಣು ಸುರಿದು ಜಾಗ ಕಬ್ಜ ಮಾಡುವ ಹುನ್ನಾರ ಮಾಹಿತಿ ತಿಳಿದ ತಕ್ಷಣ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ರಾಜಕಾಲುವೆಗೆ ಮಣ್ಣು ತುಂಬಿಸುವ ಕೆಲಸವನ್ನು ನಿಲ್ಲಿಸಿದ್ದಾರೆ. ಎಷ್ಟೋ ಕಡೆ ರಾಜಕಾಲುವೆಯಿಂದ ಹೂಳನ್ನು ವಿಲೇವಾರಿ ಮಾಡದ ಕಾರಣ ಮಳೆಗಾಲದಲ್ಲಿ ರಾಜಕಾಲುವೆ ಉಕ್ಕಿ ಹರಿದು ಜನನಿಬಿಡ ಪ್ರದೇಶಗಳಲ್ಲಿ ಹರಿದು ಅವಾಂತರ ಸೃಷ್ಠಿಯಾಗುತ್ತದೆ. ಆದರೆ ಕೆಲವೆಡೆ ಇಂದಿಗೂ ತ್ಯಾಜ್ಯ, ಹಳೆ ಕಟ್ಟಡದ ಮಣ್ಣು, ಕಸ, ಪ್ರಾಣಿಗಳ ತ್ಯಾಜ್ಯಗಳನ್ನು ರಾಜಕಾಲುವೆಗೆ ಸುರಿಯಲಾಗುತ್ತಿದೆ.ಜನವಸತಿ ಪ್ರದೇಶಕ್ಕೆ ಬೇಡಿಕೆ ಹೆಚ್ಚಾಗುತ್ತಿರುವ ಕಾರಣ ಅಡಿಯೊಂದಕ್ಕೆ ನಗರ, ಗ್ರಾಮಾಂತರ ಪ್ರದೇಶ ಹಾಗೂ ಪ್ರದೇಶದ ಅನುಗುಣವಾಗಿ ನಿವೇಶನದ ದರ ನಿಗದಿ ಹೆಚ್ಚಾಗುತ್ತಿದ್ದು, ರಿಯಲ್ ಎಸ್ಟೇಟ್ ಉದ್ಯಮ ಗೋಮಾಳ, ರಾಜಕಾಲುವೆಯ ಬಫರ್ ಜೋನ್ ಎಂದು ನೋಡದೆ ಜಾಗ ಕಬಳಿಸಲು ಮುಂದಾಗಿದೆ. ನಿವೇಶನ ಕೊಂಡು ಮನೆ ನಿರ್ಮಿಸಿಕೊಂಡವರಿಗೆ ರಾಜಕಾಲುವೆಯ ಮೇಲೆ ನಾವಿದ್ದೇವೆ ಎಂಬ ಸಂಗತಿ ತಿಳಿದಿರುವುದಿಲ್ಲ, ಒತ್ತುವರಿಯಾಗಿರುವ ಅಂಶ ಬೆಳಕಿಗೆ ಬರುವ ಹೊತ್ತಿಗೆ ಕಾಲ ಮೀರಿರುತ್ತದೆ. ಮತ್ತೊಂದೆಡೆ ರಾಜಕಾಲುವೆ ಒತ್ತುವರಿ ಮಾಡಿಕೊಂಡು ಮನೆ ನಿರ್ಮಾಣ ಮಾಡಲು ಬಿಬಿಎಂಪಿ ಅಧಿಕಾರಿಗಳು ನಕ್ಷೆ ಮಂಜೂರಾತಿ , ಖಾತೆ, ಕಂದಾಯ ವಗೈರೆಗಳಿಗೆ ಅನುಮತಿ ನೀಡಿ ಸಾಥ್ ನೀಡಿರುತ್ತಾರೆ. ದಾಖಲಾತಿಗಳ ಅನುಸಾರ ಸ್ವಂತ ಸೂರು ಹೊಂದಬೇಕೆಂಬ ಕನಸು ಹೊತ್ತವರು ಬ್ಯಾಂಕ್ ಲೋನ್ ಮೂಲಕ ಮನೆ ನಿರ್ಮಿಸಿಕೊಂಡು ಜೀವನ ನಡೆಸುತ್ತಿರುವ ಸಂದರ್ಭದಲ್ಲಿ ಬಿಬಿಎಂಪಿ ಅಧಿಕಾರಿಗಳೇ ರಾಜಕಾಲುವೆ ಬಫರ್ ಜೋನ್ ನಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆ ಎಂದು ತೆರವುಗೊಳಿಸುತ್ತಾರೆ ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

ಚಿತ್ರ: ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉತ್ತರಹಳ್ಳಿಯ ದಿ ಹ್ಯಾಪಿ ವ್ಯಾಲಿ ಬಡಾವಣೆಯಲ್ಲಿ ರಾಜಕಾಲುವೆಗೆ ಮಣ್ಣು ಸುರಿದು ಜಾಗ ಕಬ್ಜಕ್ಕೆ ಮುಂದಾಗಿರುವುದು.

Share this article