ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಲಲಿತ ಮಹಲ್ ರಸ್ತೆಯಲ್ಲಿರುವ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಂಸ್ಥೆಯಲ್ಲಿ ಭಾರತ ಸರ್ಕಾರದ ಪಂಚಾಯತ್ ರಾಜ್ ಮಂತ್ರಾಲಯ ಹಾಗೂ ಟ್ರಾನ್ಸಾಫಾರ್ಮ್ ರೂರಲ್ ಇಂಡಿಯಾ ಫೌಂಡೇಷನ್ (TRIF)ಸಹಯೋಗದಲ್ಲಿ ಸೋಮವಾರ ಆರಂಭವಾದ ಐದು ದಿನಗಳ ರಾಷ್ಟ್ರ ಮಟ್ಟದ ಬೋಧಕರ ಅಭಿವೃದ್ಧಿ ಕಾರ್ಯಕ್ರಮಕ್ಕೆ ರಾಜ್ಯದ ಆರ್.ಡಿ.ಪಿ.ಆರ್. ಇಲಾಖೆಯ ಪಂಚಾಯತ್ ರಾಜ್ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಅವರು ಚಾಲನೆ ನೀಡಿ ಮಾತನಾಡಿದರು.
ಕರ್ನಾಟಕದ ಆರ್.ಡಿ.ಪಿ.ಆರ್.ಇಲಾಖೆಯು ಗ್ರಾಮೀಣ ಪ್ರದೇಶಗಳಲ್ಲಿ ಅನುಷ್ಟಾನಗೊಳಿಸಿರುವ ವಿವಿಧ ಅಭಿವೃದ್ಧಿ ಮಾದರಿಗಳು, ಉಪ ಕ್ರಮಗಳು ಹಾಗೂ ಉತ್ತಮ ಅಭ್ಯಾಸಗಳು ಇತರರಿಗೆ ಅತ್ಯಂತ ಪ್ರೇರಣಾದಾಯಕವಾಗಿವೆ. ದೇಶದ ಇತರೆ ರಾಜ್ಯಗಳಲ್ಲಿ ಸ್ಥಳೀಯ ಪರಿಸರಕ್ಕೆ ಅನುಗುಣವಾಗಿ ಪ್ರೇರಣಾ ಅಂಶಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಗ್ರಾಮೀಣ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಸಾಧಿಸಬಹುದೆಂದು ಅಭಿಪ್ರಾಯ ವ್ಯಕ್ತಪಡಿಸಿದರು.ಎಎನ್ಎಸ್ಎಸ್ಐಆರ್ಡಿಪಿಆರ್ ನಿರ್ದೇಶಕ ಕೆ. ಲಕ್ಷ್ಮೀಪ್ರಿಯಾ ಬೋಧಕರ ಕಾರ್ಯಕ್ಷಮತೆ ಉತ್ತಮಪಡಿಸಿಕೊಳ್ಳಲು ಈ ತರಬೇತಿ ಸಹಕಾರಿಯಾಗುವುದೆಂದು ತಿಳಿಸಿದರು.
ಪ್ರಶಿಕ್ಷಣಾರ್ಥಿ ನಡುವಿನ ಕೊರತೆಯನ್ನು ಅರ್ಥೈಸಿಕೊಂಡು ಪ್ರಸ್ತುತ ಅಗತ್ಯತೆಗೆ ತಕ್ಕಂತೆ ನಡವಳಿಕೆಗಳಂತೆ ಮುಂದುವರಿಯುವುದು, ತರಬೇತುದಾರನ ಪಾತ್ರ, ತರಬೇತಿಯ ಚೌಕಟ್ಟುಗಳು ಮತ್ತು ಬಳಕೆಗಳನ್ನು ವಿವರಿಸುವುದು, ವ್ಯಕ್ತಿತ್ತ್ವಗಳನ್ನು ಅರ್ಥಮಾಡಿಕೊಳ್ಳುವುದು, ಸಂವಹನ ಕೌಶಲ್ಯಗಳು ಹಾಗೂ ಪೂರಕ ಕಾರ್ಯಕ್ಷೇತ್ರ ಭೇಟಿ ಅಂಶಗಳನ್ನು ಅಳವಡಿಸಿದೆ.
ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ಗುಜರಾತ್, ಡಯುಡಾಮನ್, ಜಮ್ಮು-ಕಾಶ್ಮೀರ್, ಲಡಾಕ್, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಸಿಕ್ಕಿಂ, ತೆಲಂಗಾಣ, ತ್ರಿಪುರ ಮತ್ತು ಕರ್ನಾಟಕದ ಒಟ್ಟು 40 ಬೋಧಕರುಗಳು ತರಬೇತಿಯಲ್ಲಿ ಪಾಲ್ಗೊಂಡಿದ್ದಾರೆ.