ವಿಶ್ವದಲ್ಲೇ ಮೊದಲು ಪ್ರಜಾಪ್ರಪ್ರಭುತ್ವ ತಂದ ಬಸವಣ್ಣ: ಶಾಸಕ ಸಿ.ಎನ್.ಬಾಲಕೃಷ್ಣ

KannadaprabhaNewsNetwork | Published : Jun 25, 2024 12:33 AM

ಸಾರಾಂಶ

ಹನ್ನೆರಡನೇ ಶತಮಾನದ ಕ್ರಾಂತಿ ಪುರುಷ ಬಸವಣ್ಣ ವಿಶ್ವದಲ್ಲೇ ಮೊದಲ ಬಾರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿ ಮಾಡಿ ಸಮಾಜದಲ್ಲಿ ಹೊಸ ಕ್ರಾಂತಿಯನ್ನು ಮಾಡಿದ ಶರಣರಲ್ಲಿ ಅಗ್ರಗಣ್ಯರು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಅಭಿಪ್ರಾಯಪಟ್ಟರು. ಚನ್ನರಾಯಪಟ್ಟಣದಲ್ಲಿ ಬಸವೇಶ್ವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಗಜ್ಯೋತಿ ಬಸವೇಶ್ವರ ಜಯಂತ್ಯುತ್ಸವ, ಪ್ರತಿಭಾ ಪುರಸ್ಕಾರ

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಹನ್ನೆರಡನೇ ಶತಮಾನದ ಕ್ರಾಂತಿ ಪುರುಷ ಬಸವಣ್ಣ ವಿಶ್ವದಲ್ಲೇ ಮೊದಲ ಬಾರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿ ಮಾಡಿ ಸಮಾಜದಲ್ಲಿ ಹೊಸ ಕ್ರಾಂತಿಯನ್ನು ಮಾಡಿದ ಶರಣರಲ್ಲಿ ಅಗ್ರಗಣ್ಯರು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಅಭಿಪ್ರಾಯಪಟ್ಟರು.

ಪಟ್ಟಣದ ಮೇಗಲಕೇರಿ ಕಾಡುಬಸವೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚನ್ನರಾಯಪಟ್ಟಣ ತಾಲೂಕು ಘಟಕ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಯುಗ ಮಾನೋತ್ಸವ ಮತ್ತು ಜಗಜ್ಯೋತಿ ಬಸವೇಶ್ವರ ಜಯಂತ್ಯುತ್ಸವ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

೧೨ನೇ ಶತಮಾನದ ಬಹುದೊಡ್ಡ ಸಮಾಜ ಸುಧಾರಕ ಬಸವಣ ಅವರ ಸಾರಥ್ಯದಲ್ಲಿ ನಡೆದ ಸುಧಾರಣೆಯ ಪ್ರಯತ್ನ ಒಂದು ಸಾಮಾಜಿಕ ಚಳವಳಿಯಾಗಿ ರೂಪುಗೊಂಡಿತು. ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಬುನಾದಿ ಹಾಕಿದ್ದು, ಸಂಸತ್ ರಚನೆ ಮಾಡಿ ಇಡೀ ವಿಶ್ವಕ್ಕೆ ಮಾದರಿಯಾಗಿದ್ದ ಬಸವಣ್ಣ ಇಂದಿಗೂ ಪ್ರಸ್ತುತ ಎಂದು ಹೇಳಿದರು.

ಬೆಂಗಳೂರಿನ ಸರ್ಪಭೂಷಣ ಮಠ ಹಾಗೂ ಅರಕಲಗೂಡಿನ ದೊಡ್ಡಮಟ್ಟದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಎಲ್ಲರನ್ನೂ ಸಮಾನವಾಗಿ ತರುವ ಪ್ರಯತ್ನ ನಡೆದಿರುವುದು ವೀರಶೈವ ಧರ್ಮದಲ್ಲಿ ಮಾತ್ರ. ಮಾಡುವ ವೃತ್ತಿಯನ್ನಾಧರಿಸಿ ಜಾತಿಯ ಹಣೆಪಟ್ಟಿ ಕಟ್ಟುವುದು ತರವಲ್ಲ. ಮನುಷ್ಯ ಜನ್ಮ ದೊಡ್ಡದು, ಹುಟ್ಟಿದ ಜನ್ಮದಲ್ಲೇ ಮುಕ್ತಿ ಪಡೆಯುವ ನಿಟ್ಟಿನಲ್ಲಿ ಎಲ್ಲರನ್ನೂ ಧರ್ಮದ ತಳಹದಿಯಲ್ಲಿ ತರಬೇಕಾದರೆ ಪ್ರತಿಯೊಬ್ಬರಿಗೂ ಲಿಂಗ ದೀಕ್ಷೆಯಾಗಬೇಕು. ಎಲ್ಲರೂ ಸಮಾನರು, ಎಲ್ಲರೂ ಒಂದೇ ಎಂಬ ಧರ್ಮದ ತಳಹದಿಯಲ್ಲಿ ಬದುಕು ಕಂಡುಕೊಳ್ಳಬೇಕು ಎಂಬ ಸಂದೇಶ ಕೊಟ್ಟ ಏಕೈಕ ಧರ್ಮವೇ ವೀರಶೈವ ಧರ್ಮ ಎಂದು ತಿಳಿಸಿದರು.

ನುಗ್ಗೆಹಳ್ಳಿ-ಅಯ್ಯನಹಳ್ಳಿ ಹಿರೇಮಠದ ಡಾ.ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ನಿವೃತ್ತ ಉಪನ್ಯಾಸಕ ವೀರಭದ್ರಪ್ಪ ಬಸವಣ್ಣ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ೨೦೨೩-೨೪ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ, ವಿಜಯಪುರ ಜಿಲ್ಲೆಯ ಕರಿಭಂಟನಾಳ ಮಠದ ಗುರುಗಂಗಾಧರೇಶ್ವರ ಸ್ವಾಮೀಜಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಎನ್.ಪರಮೇಶ್, ಮಾಜಿ ಶಾಸಕ ಬಿ.ಆರ್.ಗುರುದೇವ್, ಬಿಜೆಪಿ ಮುಖಂಡ ಅಣತಿ ಆನಂದ್, ಪುರಸಭಾ ಸದಸ್ಯರಾದ ರಾಣಿಕೃಷ್ಣ, ದಿವ್ಯಾ, ಮುಖಂಡರಾದ ಬೆಳಗಿಹಳ್ಳಿ ಪುಟ್ಟಸ್ವಾಮಿ, ಸೋಮಣ್ಣ, ಬಸವರಾಜು, ರಾಜಣ್ಣ, ಎ.ಆರ್.ನಾಗರಾಜು, ಎ.ಪಿ.ನಂದೀಶ್, ಮನೋಹರ್, ಮಣಿಕಂಠ ಇತರರು ಇದ್ದರು.

Share this article