ಕನ್ನಡಪ್ರಭ ವಾರ್ತೆ ತುಮಕೂರು
ರಾಮಾನುಜಾಚಾರ್ಯರ ತತ್ವ- ಸಿದ್ಧಾಂತಗಳು ಕೇವಲ ಸಿದ್ಧಾಂತಗಳಾಗಿಯೇ ಉಳಿದರೆ ಪ್ರಯೋಜನವಾಗದು. ಅವರು ಮಾಡಿದ ಧರ್ಮ ಪ್ರಚಾರದ ನೀತಿ ಅನುಕರಣೆ ಆಗಬೇಕಿದೆ ಎಂದು ಮೇಲುಕೋಟೆ ಯದುಗಿರಿ ಯತಿರಾಜ ಮಠದ ಶ್ರೀ ರಾಮಾನುಜ ಪೀಠದ ರಾಮಾನುಜ ಜೀಯರ್ ತಿರುಸ್ವಾಮೀಜಿ ಆಶೀರ್ವಚನ ನೀಡಿದರು.ನಗರದ ಮಾರುತಿ ನಗರದಲ್ಲಿರುವ ಜಿಲ್ಲಾ ತುಮಕೂರು ಶ್ರೀ ವೈಷ್ಣವ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಸಾಮೂಹಿಕ ಉಪನಯನ ಕಾರ್ಯಕ್ರಮದಲ್ಲಿ ವಟುಗಳಿಗೆ ಧೀಕ್ಷೆ ನೀಡಿ ಮಾತನಾಡಿದರು.
ಭಾರತ ದೇಶದ ಪರಂಪರೆ, ಸಂಸ್ಕೃತಿ ಉಳಿದಿರುವುದೇ ನಮ್ಮ ಆಚಾರ- ವಿಚಾರಗಳಿಂದ. ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಆಚಾರ - ವಿಚಾರ, ಪದ್ಧತಿಗಳು ವಿಭಿನ್ನವಾದರೂ ಅವೆಲ್ಲವೂ ವಸುದೈವ ಕುಟುಂಬಕಂ ಹಾಗೂ ಧರ್ಮದ ಐಕ್ಯತೆಯ ಅವಿಭಾಜ್ಯ ಅಂಗಗಳಾಗಿವೆ. ಹೀಗಾಗಿ ಧರ್ಮಕ್ಕೆ ಶಿಸ್ತು ಬದ್ಧವಾಗಿ ನಡೆದುಕೊಂಡು ಧರ್ಮವನ್ನು ಉಳಿಸುವ ಕೆಲಸ ಮಾಡಬೇಕು ಎಂದರು.ಭಕ್ತಿಯಿಂದ ಮಾತ್ರ ಮನುಷ್ಯನಿಗೆ ಮುಕ್ತಿ, ಲೌಕಿಕ ವಸ್ತುಗಳ ಮೇಲಿನ ಮೋಹ ಮತ್ತು ಅವಲಂಬನೆಯಿಂದ ಇಂದಿನ ಜನರು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆ. ನಮ್ಮ ಋಷಿಮುನಿಗಳು ಹಾಕಿಕೊಟ್ಟ ಧ್ಯಾನ, ಜಪ, ತಪಗಳನ್ನು ಅನುಸರಿಸಿದರೆ ಆರೋಗ್ಯ ವೃದ್ಧಿಯ ಜೊತೆಗೆ ಮಾನಸಿಕ ಆರೋಗ್ಯವೂ ಸದೃಢವಾಗಲಿದೆ ಎಂದರು.
ತುಮಕೂರು ವೈಷ್ಣವ ಸಂಘದ ಅಧ್ಯಕ್ಷ ಎಸ್.ಎನ್. ರಘು ಮಾತನಾಡಿ, ಸಾಮೂಹಿಕ ಉಪನಯನ, ವಧು ವರರ ವೇದಿಕೆ ಸಾಮೂಹಿಕ ವಿವಾಹ ಹಾಗೂ ಧಾರ್ಮಿಕ ಸತ್ಸಂಗ ಕಾರ್ಯಕ್ರಮಗಳನ್ನು ಏರ್ಪಡಿಸಿ ಧರ್ಮ ಜಾಗೃತಿಯನ್ನು ಮೂಡಿಸಲಾಗುತ್ತಿದೆ ಎಂದರು.ತುಮಕೂರು ಹಾಗೂ ಸುತ್ತಲಿನ ಜಿಲ್ಲೆಯ ಶ್ರೀ ವೈಷ್ಣವ ಸಮುದಾಯದ ಬಾಲಕರಿಗೆ ಮತ್ತು ಯುವಕರಿಗೆ ಸಾಮೂಹಿಕ ಯಜ್ಞೋಪವೀತವನ್ನು ಧಾರಣೆ ಮಾಡಲಾಯಿತು. ಬಳಿಕ ವಟುಗಳು ರಾಮಾನುಜಾಚಾರ್ಯರ ವಿಗ್ರಹವನ್ನು ತುಮಕೂರಿನ ಮಾರುತಿ ನಗರದ ರಸ್ತೆಯಲ್ಲಿ ಮೆರವಣಿಗೆ ಮಾಡಿದರು.
ಯಜ್ಞೋಪವೀತವ ಧಾರಣೆ ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲೆಯ ಶ್ರೀ ವೈಷ್ಣವ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ವೇದಾಂತಾಚಾರ್ಯ, ಕೆ.ಎ. ಕೃಷ್ಣಮೂರ್ತಿ, ಹರಿಪ್ರಸಾದ್, ಗುರು ಪೀಠದ ಅಧ್ಯಕ್ಷ ಎಂ.ಆರ್. ರಾಮಸ್ವಾಮಿ, ಪಿ.ನಾಗರಾಜು, ಲಕ್ಷ್ಮೀಕಾಂತ, ಭೀಮಣ್ಣ, ಭಾಸ್ಕರ್, ತಿಪಟೂರು ಸಂಪತ್ ಕೃಷ್ಣ, ಸತ್ಯನಾರಾಯಣ, ದರ್ಶನ್, ಅನಸೂಯಮ್ಮ, ವನಜಾಕ್ಷಮ್ಮ, ಪವಿತ್ರ ,ಸುಶ್ಮಿತಾ ಮುಂತಾದವರು ಹಾಜರಿದ್ದರು.